ಪ್ರತಿಭಟನೆಗಳಿಗೆ ಅನುಮತಿ ನೀಡದ ರಾಜ್ಯ ಬಿಜೆಪಿ ಸರ್ಕಾರ: ಖಂಡನೆ- ಭಾರಧ್ವಾಜ್

 

ಗಂಗಾವತಿ: ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಆರೋಪಿಗಳನ್ನು ಶಿಕ್ಷಿಸಬೇಕೆಂದು ಏಕೈಕ ಒತ್ತಾಯದೊಂದಿಗೆ ಡಿಸೆಂಬರ್-೬ ರಂದು ನಡೆಸಲು ಉದ್ಧೇಶಿಸಿದ್ದ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದ-ಲೆನಿನ್‌ವಾದ) ಆರೋಪಿಸಿದೆ.
ಬೆಂಗಳೂರು ನಗರದ ಪುರಭವನದ ಬಳಿ ಶಾಂತಿಯುತವಾಗಿ ಪ್ರತಿಭಟಿಸಿ ಬಾಬ್ರಿ ಮಸೀದಿ ಧ್ವಂಸಗೊಳಿಸಿದವರ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯಿಸಿ ಪ್ರತಿಭಟನೆ ಮಾಡಲು ನಿರ್ಧಾರವಾಗಿತ್ತು. ಇದೇ ರೀತಿ ಭಾರತದಾಧ್ಯಂತ ಪ್ರತಿಭಟನೆ ನಡೆಸಲು ಲಿಬರೇಷನ್ ಪಕ್ಷ ನಿರ್ಧರಿಸಿತ್ತು. ಬೆಂಗಳೂರಿನ ಪೊಲೀಸರು ಪುರಭವನದ ಮುಂದೆ ಪ್ರತಿಭಟನೆ ಮಾಡಲು ಅನುಮತಿ ನೀಡದೆ ನಿರಾಕರಿಸಿದ್ದು, ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿದೆ.
ಕೇಂದ್ರದಲ್ಲಿ ಆಳುತ್ತಿರುವ ಬಿಜೆಪಿ ಸರ್ಕಾರ ತನ್ನ ಜನವಿರೋಧಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಕಾಶ್ಮೀರ ೧೩೦ ದಿನ ಕರ್ಫ್ಯೂ ಮುಂದುವರೆದು ಜನರ ಜೀವನ ದುಸ್ತರವಾಗಿದೆ. ಈ ಪ್ರಶ್ನೆ ಎತ್ತಿ ಯಾರೂ ಪ್ರತಿಭಟನೆ ಮಾಡಬಾರದೆಂದು ಕೇಂದ್ರ ಸರ್ಕಾರ ತನ್ನ ಫ್ಯಾಸಿಸ್ಟ್ ಹಿಡಿತದಿಂದ ಪ್ರತಿಭಟನೆಗಳನ್ನು ವಿರೋಧಿಸುತ್ತಿದೆ. ಅಂಬೇಡ್ಕರ್ ಸಂವಿಧಾನ ಬರೆದಿಲ್ಲವೆಂಬ ವದಂತಿಯನ್ನು ಕರ್ನಾಟಕದಲ್ಲಿ ಹಬ್ಬಿಸಿ ಪ್ರತಿಭಟನಾ ಮಾಡುವವರಿಗೆ ಅನುಮತಿ ಕೊಡದಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.
ದಿನನಿತ್ಯ ಬಳಕೆಯ ಉಳ್ಳಾಗಡ್ಡಿ, ಬೆಳ್ಳುಳ್ಳಿ ಇನ್ನಿತರ ನಿತ್ಯ ಬಳಕೆಯ ವಸ್ತುಗಳ ಬೆಲೆಗಳು ಗಮನಕ್ಕೇರಿದರೂ ಪ್ರತಿಭಟನೆ ಮಾಡದಂತೆ ಜನರನ್ನು ಸರ್ಕಾರ ಭಯಭೀತರನ್ನಾಗಿಸುತ್ತಿದೆ. ಸರ್ಕಾರದ ಒತ್ತಡದಿಂದ ಹೊರಬಂದು ನಾಗರಿಕರು ದೊಡ್ಡ ಮಟ್ಟದಲ್ಲಿ ತಿರುಗಿಬೀಳಲಿದ್ದಾರೆ ಎಂದು ಸರ್ಕಾರ ಗಮನಿಸಬೇಕು. ಬಿದ್ದುಹೋದ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲು ಸರ್ಕಾರ ಯಾವುದೇ ಪ್ರಯತ್ನ ಮಾಡದೆ ಇರುವುದು ಖಂಡನೀಯ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ಸರ್ಕಾರವನ್ನು ಎಚ್ಚರಿಸಿದ್ದಾರೆ.

Please follow and like us:
error