ಪೊಲೀಸ್ ದುರ್ಬಳಕೆ: ಬಿಜೆಪಿ ದೂರು

ಬಿಜೆಪಿ ಮುಖಂಡರೊಂದಿಗೆ ಅಧಿಕಾರಿಗಳ ದುರ್ವರ್ತನೆ | ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಭರವಸೆ

ಕೊಪ್ಪಳ: ಪೊಲೀಸ್ ವ್ಯವಸ್ಥೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಸಂಸದ ಸಂಗಣ್ಣ ಕರಡಿ ಆರೋಪಿಸಿದ್ದಾರೆ.
ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾದ ಸಂಸದರು, ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಅದರ ಕೆಲವು ಜನಪ್ರತಿನಿಧಿಗಳಿಗೆ ನಿಷ್ಠರಾಗಿರುವ ಕೆಲವು ಪೊಲೀಸ್ ಅಧಿಕಾರಿಗಳನ್ನು ಹೆಸರಿಸಿದರು. ಜಿಲ್ಲೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದು, ದೋಷಾರೋಪ ಪಟ್ಟಿ ಸಲ್ಲಿಸುವುದು, ಗೂಂಡಾ ಕಾಯ್ದೆಯಡಿ ಬಂಧಿಸುವುದು ಹಾಗೂ ಬಂಧಿಸುವುದಾಗಿ ಬೆದರಿಸಿದ ಹಲವಾರು ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಎಸ್‌ಪಿ ಡಾ. ಅನೂಪ್ ಶೆಟ್ಟಿ ಇದಕ್ಕೆ ಕಡಿವಾಣ ಹಾಕಬೇಕು ಹಾಗೂ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಲವಾರು ಅಮಾಯಕ ಯುವಕರ ಮೇಲೆ ಪ್ರಕರಣ ದಾಖಲಿಸಲಾಗಿರುವುದರ ಕುರಿತು ಪಕ್ಷದ ಯುವ ಮುಖಂಡ ಅಮರೇಶ ಕರಡಿ ಡಾ. ಅನೂಪ್ ಶೆಟ್ಟಿ ಅವರಿಗೆ ವಿವರಿಸಿದರು. ಗಣೇಶ ಉತ್ಸವದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ನಡೆದಿವೆ. ಜನಪರ ಉದ್ದೇಶಗಳಿಗಾಗಿ ನಡೆದ ಹೋರಾಟದಲ್ಲಿ ಪಾಲ್ಗೊಂಡವರ ಮೇಲೆಯೂ ಮೊಕದ್ದಮೆಗಳು ದಾಖಲಾಗಿವೆ. ವಿದ್ಯಾರ್ಥಿ ಮುಖಂಡರು ಹಾಗೂ ಯುವಕರ ಮೇಲೆ ಗೂಂಡಾ ಕಾಯ್ದೆಯನ್ನು ಹಾಕುವುದಾಗಿ ನೋಟೀಸ್ ಕಳಿಸಿದ ಪ್ರಕರಣಗಳು ನಡೆದಿವೆ. ಕಾಂಗ್ರೆಸ್ ಪರವಾಗಿರುವ ಯಾರೊಬ್ಬರ ಮೇಲೆಯೂ ಇಂತಹ ಪ್ರಕರಣಗಳು ನಡೆದಿಲ್ಲ ಎಂಬುದು ರಾಜಕೀಯ ದ್ವೇಷವನ್ನು ತೋರುತ್ತದೆ ಎಂದು ಅವರು ಆರೋಪಿಸಿದರು.

ಕ್ರಮ ಕೈಗೊಳ್ಳುವ ಭರವಸೆ: ಸಭೆಯಲ್ಲಿ ಮಾತನಾಡಿದ ಹಲವಾರು ಬಿಜೆಪಿ ನಾಯಕರು, ಕೊಪ್ಪಳ ಕ್ಷೇತ್ರವಲ್ಲದೇ ಜಿಲ್ಲೆಯ ಬಹುತೇಕ ಕಡೆ ಇಂತಹ ಬೆಳವಣಿಗೆಗಳು ಹೆಚ್ಚಿರುವುದನ್ನು ಎಸ್‌ಪಿ ಅವರ ಗಮನಕ್ಕೆ ತಂದರು. ಎಲ್ಲರ ದೂರುಗಳನ್ನು ಆಲಿಸಿದ ಎಸ್‌ಪಿ ಡಾ. ಅನೂಪ್ ಶೆಟ್ಟಿ, ಕೆಲವು ಆರೋಪಗಳನ್ನು ಒಪ್ಪಿಕೊಂಡರು. ಇನ್ನು ಕೆಲವನ್ನು ನಿರಾಕರಿಸಿದರು. ಯಾವುದೇ ಪಕ್ಷಪಾತ ಅಥವಾ ಅಕ್ರಮ ನಡೆದಿದ್ದರೂ, ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್ ಸೇರ್ಪಡೆಗೆ ಒತ್ತಾಯ

ಕೆಲವು ಪೊಲೀಸ್ ಅಧಿಕಾರಿಗಳು ತಮ್ಮ ಪಕ್ಷದ ಕಾರ್ಯಕರ್ತರನ್ನು ಗೂಂಡಾ ಕಾಯ್ದೆಯಡಿ ಬಂಧಿಸುವುದಾಗಿ ಬೆದರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಿದರೆ ಯಾವುದೇ ಸಮಸ್ಯೆ ಮಾಡುವುದಿಲ್ಲ ಎಂಬ ಆಮಿಷವನ್ನೂ ಒಡ್ಡುತ್ತಿದ್ದಾರೆ. ಇದು ರಾಜಕೀಯ ಉದ್ದೇಶ ತೋರುತ್ತದೆ ಎಂದು ಬಿಜೆಪಿ ಮುಖಂಡರು ಎಸ್‌ಪಿ ಅವರ ಗಮನ ಸೆಳೆದರು.

ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ, ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ, ಜಿ.ಪಂ. ಸದಸ್ಯರಾದ ರಾಮಣ್ಣ ಚೌಡ್ಕಿ, ಗವಿಸಿದ್ದಪ್ಪ ಕರಡಿ, ರಾಜು ಬಾಕಳೆ, ಚಂದ್ರಶೇಖರ ಪಾಟೀಲ ಹಲಗೇರಿ, ಅಪ್ಪಣ್ಣ ಪದಕಿ, ಡಾ. ಬಿ .ಜ್ಞಾನಸುಂದರ, ಶಿವಕುಮಾರ ಹಕ್ಕಾಪಕ್ಕಿ, ಸಂಗಮೇಶ ಡಂಬಳ, ಪೀರಾಹುಸೇನ್ ಹೊಸಳ್ಳಿ, ಆರ್.ಬಿ. ಪಾನಗಂಟಿ, ಶ್ರವಣ ಬಂಡಾನವರ, ಗಣೇಶ ಹೊರತಟ್ನಾಳ, ಮಾಧ್ಯಮ ಉಸ್ತುವಾರಿ ಬಿ. ಗಿರೀಶಾನಂದ ಸೇರಿದಂತೆ ಅನೇಕರು ಇದ್ದರು.
———–

Please follow and like us:
error