ಪಿಐ ಮೌನೇಶ್-ಪಿಸಿ ಪ್ರಕಾಶ್ ಅಮಾನತು ರದ್ದಿಗೆ ಆಗ್ರಹಿಸಿ ಪ್ರತಿಭಟನೆ

ಕೊಪ್ಪಳ: ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಮತ್ತು ಕಾನ್ಸಟೇಬಲ್ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ, ಅದೇ ಠಾಣೆಗೆ ಮತ್ತೇ ನಿಯುಕ್ತಿಗೊಳಿಸುವಂತೆ ಆಗ್ರಹಿಸಿ ನಗರದ ಅಶೋಕ ವೃತ್ತದಲ್ಲಿ ಬುಧವಾರ ಮೌನೇಶ್ವರ ಮಾಲೀಪಾಟೀಲ್ ಅಭಿಮಾನಿ‌ ಬಳಗದ ಮುಖಂಡರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಖಾಸುಮ್ಮನೆ ಆರೋಪ ಹೊರಿಸಿ ನಗರ ಠಾಣೆಯ ಸಿಬ್ಬಂದಿಯನ್ನು ಅಮಾನತುಗೊಳಿಸಿರುವುದು ಸರಿಯಲ್ಲ. ಮೌನೇಶ್ವರ ಮಾಲೀಪಾಟೀಲ್ ಅವರು ವಿ3 ಕೇರ್ ಲೈಫ್ ಕೇರ್ ಕಂಪನಿಯ ಮೂರನೇ ಆರೋಪಿ ಪತ್ತೆಗೆ ಸಂಬಂಧಿಸಿದಂತೆ ಸುಮಾರು 45 ದಿನಗಳ ಕಾಲ ಹೈದ್ರಾಬಾದ್, ಕರ್ನೂಲ್, ಗುಜರಾತ್ ಸೇರಿದಂತೆ ದೇಶದ ಹಲವು ಕಡೆ ಸುತ್ತಾಡಿದರೂ ಆರೋಪಿ ಸುಳಿವು ಸಿಕ್ಕಿರಲಿಲ್ಲ. ಈ ವಿಷಯ ಎಸ್ಪಿಗೆ ಗೊತ್ತಿರಲಿಲ್ಲವೇ? ಅಷ್ಟೆಲ್ಲಾ ರಾಜ್ಯ ಸುತ್ತಾಡಿ ಬಂದರೂ ಸಿಗದ ಆರೋಪಿ ಕೇವಲ ಒಂದೇ ದಿನದಲ್ಲಿ ಎಸ್ಪಿ ಸಂಗೀತ ನೇತೃತ್ವದ ತಂಡಕ್ಕೆ ಸಿಕ್ಕಿದ್ದಾದರೂ ಹೇಗೆ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಯಾವುದೋ ಹಳೇ ಪ್ರಕರಣದ ತನಿಖೆ ಕಾರಣ ನೀಡಿ ಅಮಾನತು ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದುವರೆಗೂ ಶಿಖಾ ಶೇಖ್ ಎಲ್ಲಿದ್ದಾಳೆ? ಆ ಪ್ರಕರಣ ಏನಾಯಿತು? ಎಂಬುದನ್ನು ಮೊದಲು ಬಯಲು ಮಾಡಿ ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಕೂಡಲೇ ಪೊಲೀಸ್ ಕಾನ್ಸಟೇಬಲ್ ಪ್ರಕಾಶ್ ತಿಮ್ಮಾಪುರ ಮತ್ತು ಪಿಐ ಮೌನೇಶ್ವರ ಮಾಲೀಪಾಟೀಲ್ ಅವರನ್ನು ಅದೇ ಠಾಣೆಗೆ ಸ್ಥಳ ನಿಯುಕ್ತಿ ಮಾಡಬೇಕು. ಇಲ್ಲದಿದ್ದರೆ ಉಗ್ರಹೋರಾಟ ನಡೆಸಲಾಗುವುದು ಎಂದು ಮೌನೇಶ್ವರ ಮಾಲೀಪಾಟೀಲ್ ಅಭಿಮಾನಿ ಬಳಗದ ಮುಖಂಡರು ಎಚ್ಚರಿಸಿ ಎಸ್ಪಿ ಸಂಗೀತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಿವಕುಮಾರ್ ಕುಕನೂರು, ಸುನೀಲ್ ಹೆಸರೂರು, ವೆಂಕಟೇಶ ಹವಳೆ, ಬಸವರಾಜ ಭೋವಿ, ಗವಿಸಿದ್ದಪ್ಪ ಗೊರವರ, ಶೇಖರ್ ಎಸ್.ಪಾಟೀಲ, ಲಿಂಗರಾಜ ಕಟ್ಟೀಮನಿ, ಮಂಜು ತೋಟಗೇರ, ಸುರೇಶ ಬನ್ನಿಕೊಪ್ಪ, ರುದ್ರಗೌಡ ಸೊಲಬಗೌಡ್ರ, ಪ್ರವೀಣಗೌಡ್ರ, ಮಾರುತಿ ಆಪ್ಟೆ, ಸಿದ್ದು ಮೈನಳ್ಳಿ ಸೇರಿದಂತೆ ಇತರರು ಇದ್ದರು.

Please follow and like us:
error