ಪಾವಗಡಕ್ಕೆ ನೀರು ಹರಿಸುವುದಕ್ಕೆ ಮತ್ತು ಸಿಂಗಟಾಲೂರ ಏತನೀರಾವರಿ ವತಿಯಿಂದ ಹೆಚ್ಚುವರಿ ನೀರು ಪಡೆಯುವುದಕ್ಕೆ ಖಂಡನೆ

ಕೊಪ್ಪಳ : ಪಾವಗಡಕ್ಕೆ ನೀರು ಹರಿಸುವುದಕ್ಕೆ ಮತ್ತು ಸಿಂಗಟಾಲೂರ ಏತನೀರಾವರಿ ವತಿಯಿಂದ ಹೆಚ್ಚುವರಿ ನೀರು ಪಡೆಯುವುದಕ್ಕೆ ತುಂಗಭದ್ರಾ ಉಳಿಸಿ ಆಂದೋಲನ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ವರ್ಷದಿಂದ ವರ್ಷಕ್ಕೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗತೊಡಗಿದೆ ಜೊತೆಗೆ ೩೨ಟಿಎಂಸಿ ಹೂಳು ತುಂಬಿ ಈ ಭಾಗದ ರೈತರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿಯೂ ಚಿತ್ರದುರ್ಗಾ ಜಿಲ್ಲೆಯ ಪಾವಗಡಕ್ಕೆ ೨.೫ ಟಿಎಂಸಿ ನೀರು ಕೊಡಲು ಮತ್ತು ಸಿಂಗಟಾಲೂರ ಏತನೀರಾವರಿಯಿಂದ ಪ್ರಸ್ತುತ ೧೨.೬ ಟಿಎಂಸಿ ಜತೆಗೆ ೬.೫೨ಟಿಎಂಸಿ ಹೆಚ್ಚು ನೀರು ಪಡೆಯಲು ಸರ್ಕಾರ ಅನುಮೋದಿಸಿರುವುದನ್ನು ತುಂಗಭದ್ರಾ ಉಳಿಸಿ ಆಂದೋಲನ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಚರ್ಚಿಸಲು ಜ.೫ ರಂದು ಮುನಿರಾಬಾದ್ ಪಂಪಾವನದಲ್ಲಿ ಕರೆದ ತುರ್ತು ಸಭೆಯಲ್ಲಿ ಸರ್ಕಾರದ ಧೋರಣೆಯನ್ನು ಆಕ್ರೋಶದಿಂದ ವಿರೋಧಿಸಿದ ರೈತ ಮುಖಂಡರು ಇದಕ್ಕೆ ತಕ್ಷಣ ಜನಪ್ರತಿನಿಧಿಗಳಿಗೆ ಮನವಿ ನೀಡಿ ಎಚ್ಚರಿಸಲು ತಿರ್ಮಾನಿಸಿದರಲ್ಲದೆ ಧರಣಿ ನಡೆಸಿ ಜನವರಿ ೧೮ ರಂದು ಮುನಿರಾಬಾದ್ ನೀರಾವರಿ ಕೇಂದ್ರವಲಯದಲ್ಲಿ ಒಂದು ದಿನ ಧರಣಿ ನಡೆಸಿ ಪ್ರತಿಭಟಿಸಲಾಗುವುದು ಹಾಗೂ ಕೊಪ್ಪಳ ಮತ್ತು ರಾಯಚೂರ ಜಿಲ್ಲೆಯ ಗಂಗಾವತಿ, ಕನಕಗಿರಿ, ಸಿಂಧನೂರು, ಮಾನವಿ ಮುಂತಾದ ಭಾಗಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ನಿರ್ಣಯಿಸಲಾಯಿತು. ಸರ್ಕಾರ ಈ ನಿರ್ಧಾರವನ್ನು ಕೈಬಿಡದಿದ್ದರೆ ರೊಚ್ಚಿಗೆದ್ದ ರೈತರಿಂದ ಪ್ರತಿಭಟನೆಯ್ಲಿ ಏನಾದರೂ ನಡೆದರೆ ಸರ್ಕಾರವೇ ಹೊಣೆಯಾಗುವುದೆಂದು ಎಚ್ಚರಿಸಲಾಯಿತು.
ಆಂದೋಲನ ಸಮಿತಿಯ ಅಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ಉಪಾಧ್ಯಕ್ಷ ಡಿ.ಎಚ್. ಪೂಜಾರ, ಗೌರವಾಧ್ಯಕ್ಷ ಭಾರದ್ವಾಜ, ಪ್ರಧಾನ ಕಾರ್ಯದರ್ಶಿ ಎಂ. ಆರ್. ವೆಂಕಟೇಶ ಮತ್ತು ಮುಖಂಡರಾದ ತಾ.ಪಂ ಸದಸ್ಯ ಮೂರ್ತಿ, ವೀರಭದ್ರಯ್ಯ ಭೂಸನೂರ ಮಠ, ಶಿವಬಾಬು, ಪ್ರದೀಪ್ ಪಲ್ಲೇದ, ಖಾಜಾವಲಿ ಹೊಸಲಿಂಗಾಪೂರ, ಕೋಟೇಶ್ವರರಾವ್, ಮುದ್ಲಾಪೂರ ಮಟ್ಟಿ, ಮರೆಗೌಡ ಇತರರು ಇದ್ದರು.