ಪಾವಗಡಕ್ಕೆ ತುಂಗಭದ್ರಾ ನೀರು; ಇದು ಶಾಶ್ವತ ಪರಿಹಾರವಲ್ಲ – ಸಂಸದ ಸಂಗಣ್ಣ ಕರಡಿ

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ರಾಜ್ಯ ಸರ್ಕಾರ ಪಾವಗಡ ಸೇರಿದಂತೆ ಆ ಭಾಗಕ್ಕೆ ಕುಡಿಯುವ ನೀರು ಪೂರೈಕೆಗೆ ಯೋಜನೆ ರೂಪಿಸಿದೆ. ಆದರೆ, ಇದು ಶಾಶ್ವತ ಪರಿಹಾರವಾಗುವುದಿಲ್ಲ. ನದಿ ಜೋಡಣೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ನೀಡುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಸಲಹೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಿಎಂ ಸಿದ್ದರಾಮಯ್ಯ ಇತ್ತೀಚಿಗೆ ತುಂಗಭದ್ರಾ ಜಲಾಶಯದಿಂದ ಪಾವಗಡ, ಚಳ್ಳಕೆರೆ ಭಾಗಕ್ಕೆ ಕುಡಿಯುವ ನೀರನ್ನು ಪೂರೈಸಲು ಯೋಜನೆಯನ್ನು ಅನುಷ್ಠಾನಕ್ಕೆ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ೨.೦೫ ಟಿಎಂಸಿ ನೀರನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದ್ದಾರೆ. ತುಂಗಭದ್ರಾ ಜಲಾಶಯದಿಂದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ನಮ್ಮದು ಅಭ್ಯಂತರವಿಲ್ಲ. ಆದರೆ, ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿರುವ ಮತ್ತು ಇದೇ ಜಲಾಶಯವನ್ನು ನೀರಿನ ಮೂಲವನ್ನಾಗಿಸಿಕೊಂಡಿರುವ ಅನೇಕ ಪಟ್ಟಣ ಗ್ರಾಮಗಳಿವೆ. ಈಗಾಗಲೇ ಸತತ ಬರಗಾಲದಿಂದ ಈ ಭಾಗಕ್ಕೂ ಅನೇಕ ಬಾರಿ ಕುಡಿಯುವ ನೀರಿನ ತತ್ವಾರ ಉಂಟಾಗಿತ್ತು. ಅಲ್ಲದೆ, ಇದೇ ಜಲಾಶಯದ ನೀರನ್ನು ನಂಬಿಕೊಂಡಿರುವ ಅಚ್ಚುಕಟ್ಟು ಪ್ರದೇಶದ ರೈತರು ಈಗ ನೀರು ಇಲ್ಲದೆ ಕೇವಲ ಒಂದೆ ಬೆಳೆಯನ್ನು ಬೆಳೆಯಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಮತ್ತೆ ಇರುವ ಕಡಿಮೆ ನೀರಿನಲ್ಲಿ ಮತ್ತೆ ಬೇರೆ ಜಿಲ್ಲೆಗಳಿಗೆ ತೆಗೆದುಕೊಂಡು ಹೋಗುವುದು ಸರಿಯಲ್ಲ. ಅದು ಆ ಭಾಗಕ್ಕೆ ಶಾಶ್ವತವಾದ ಪರಿಹಾರವೂ ಆಗಲಾರದು. ಕೇಂದ್ರ ಸರ್ಕಾರ ಈಗ ನದಿ ಜೋಡಣೆ ಯೋಜನೆಗೆ ಜಿಪಿಎಸ್ ಸರ್ವೆ ಕೈಗೊಂಡಿದೆ. ಇದರಿಂದಾಗಿ ಆ ಭಾಗದಲ್ಲಿ ಇದರಿಂದ ಸಾಕಷ್ಟು ಅನುಕೂಲ ಮತ್ತು ಶಾಶ್ವತ ಪರಿಹಾರವನ್ನು ಒದಗಿಸಬಲ್ಲದು. ಹೀಗಾಗಿ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಈ ಕುರಿತಂತೆ ಒಂದು ಮನವಿ ನೀಡಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಂಸದ ಸಂಗಣ್ಣ ಕರಡಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Please follow and like us:
error