ಪರಿಸರ ಸಂರಕ್ಷಣೆಯ ಜಾಗೃತಿ ಮತ್ತು ಕಾಳಜಿ ಅಗತ್ಯ

ಕೊಪ್ಪಳ ಜೂ.೬: ನಮಗೆ ನಮ್ಮ ದೇಹದ ನೋವಿನ ಅರಿವಿರುವಂತೆ ಒಂದು ಮರ, ಪ್ರಾಣಿ, ಪಕ್ಷಿಗಳ ಅರಿವಿದ್ದರೆ ಅದುವೆ ನಮಗೆ ಪರಿಸರದ ಜಾಗೃತಿಯಾಗುತ್ತದೆ. ಫಿಲಿಪೈನ್ಸ್ ದೇಶದಲ್ಲಿ ಗಿಡ ಬೆಳೆಸಿದರೆ ಮಾತ್ರ ಮುಂದಿನ ತರಗತಿಗೆ ಪಾಸ್ ಮಾಡಲಾಗುವುದು. ಕಿನ್ಯಾ ದೇಶದಲ್ಲಿ ಹುಟ್ಟಿದ ಪ್ರತಿ ಮಗುವಿನ ಹೆಸರಿನಲ್ಲಿ ಒಂದು ಸಸಿ ನೆಡುವ ಆಚರಣೆಗಳು ಪರಿಸರ ಸಂರಕ್ಷಣೆ ಬೆಳೆಸುವ ಮಾದರಿ ಮಾರ್ಗಗಳಾಗಿವೆ. ಪ್ರಸ್ತುತ ಈ ಮಾದರಿ ನಮ್ಮಲ್ಲಿಯೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ನಮ್ಮ ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿ ಹಾಗೂ ಕರ್ನಾಟಕ ಪರಿಸರ ವೇದಿಕೆ ಕೊಪ್ಪಳ ಜಿಲ್ಲಾ ಘಟಕಾಧ್ಯಕ್ಷರಾದ ಶಿವನಗೌಡ ಪಾಟೀಲ ಹೇಳಿದರು. ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯದ ಇಕೊ ರೇಂಜರ್‍ಸ್ ಕ್ಲಬ್, ಇಕೊ ಕ್ಲಬ್ ಹಾಗೂ ಕರ್ನಾಟಕ ಪರಿಸರ ವೇದಿಕೆ ಜಿಲ್ಲಾ ಘಟಕ, ಕೊಪ್ಪಳ ಇವರ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಹಮ್ಮಿಕೊಂಡ ಮಹಾವಿದ್ಯಾಲಯದ ಉದ್ಯಾನವನ ಸ್ವಚ್ಛತೆ, ಸಸಿ ನೆಡುವ ಹಾಗೂ ಪರಿಸರ ಸಂರಕ್ಷಣೆಯ ಜಾಗೃತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ನಾವು ಪರಿಸರವನ್ನು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ನಾವು ಪರಿಸರ ಸಂರಕ್ಷಣೆ ಜಾಗೃತಿ ಮತ್ತು ಕಾಳಜಿ ಸದಾ ವಹಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೆ.ಎಸ್. ಪಾಟೀಲ ಮಾತನಾಡಿ ಪರಿಸರಕ್ಕೆ ನಾವು ಏನೂ ನೀಡದಿದ್ದರೂ ಪರಿಸರ ನಮಗೆಲ್ಲವೂ ನೀಡಿದೆ. ಪರಿಸರಕ್ಕೆ ನಮ್ಮ ಅಗತ್ಯವಿಲ್ಲ. ಆದರೆ ನಮಗೆ ಪರಿಸರದ ಅಗತ್ಯವಿದೆ. ಆದ್ದರಿಂದ ನಾವೆಲ್ಲರೂ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು. ಉತ್ತಮ ಪರಿಸರ ನಿರ್ಮಾಣ ಮಾಡಬೇಕು ಮತ್ತು ವಿದ್ಯಾರ್ಥಿಗಳಿಗೆ ಅದರ ಜಾಗೃತಿ ಮೂಡಿಸುವಲ್ಲಿ ಶ್ರಮಿಸಬೇಕು ಎಂದು ಹೇಳಿದರು. ನಂತರ ಮಹಾವಿದ್ಯಾಲಯದ ಆವರಣದಲ್ಲಿ ಸಸಿಯನ್ನು ನೆಡಲಾಯಿತು ಮತ್ತು ಪರಿಸರ ದಿನಾಚಾರಣೆ ನಿಮಿತ್ಯ ಪ್ರಾದ್ಯಾಪಕ ಹಾಗೂ ಸಿಬ್ಬಂದಿಗಳನ್ನು ಒಂದು ವಾರದಿಂದ ಮಹಾವಿದ್ಯಾಲಯದ ಉದ್ಯಾನವನವನ್ನು ಸ್ವಚ್ಛಗೊಳಿಸು ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮಹಾವಿದ್ಯಾಲಯದ ಇಕೊ ಕ್ಲಬ್ ಸಂಯೋಜಕ ಪ್ರಶಾಂತ ಕೋಂಕಲ್ ಉಪಸ್ಥಿತರಿದ್ದರು. ಇಕೊ ರೇಂಜರ್‍ಸ್ ಕ್ಲಬ್ ಸಂಯೋಜಕ ಡಾ. ಬಸವರಾಜ ಪೂಜಾರ ಸ್ವಾಗತಿಸಿದರು. ಪ್ರೊ. ರಾಜು ಹೊಸಮನಿ ವಂದಿಸಿದರು. ಡಾ. ನಾಗರಾಜ ದಂಡೋತಿ ನಿರೂಪಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ದಯಾನಂದ ಸಾಳುಂಕೆ, ಪ್ರೊ. ಶಫಿ ಸರದಾರ ಡಾ. ಚನ್ನಬಸವ, ಮಹೇಶ ಬಿರಾದಾರ, ವೆಂಕಟೇಶ ನಾಯ್ಕ, ಶ್ರೀದೇವಿ, ವಿನೋದ ಮುದಿಬಸನಗೌಡರ, ಡಾ. ಕರಿಬಸವೇಶ್ವರ, ಡಾ. ಶಶಿಕಾಂತ ಉಮ್ಮಾಪುರೆ, ಮಂಜುನಾಥ ಗಾಳಿ ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

Please follow and like us:
error