ಪತ್ರಕರ್ತ ಸಿರಾಜ್ ಬಿಸರಳ್ಳಿ, ರಾಜಾಬಕ್ಷಿ ಮೇಲೆ ಎಫ್‌ಐಆರ್ : ಕಾರ್ಯನಿರತ ಪತ್ರಕರ್ತರ ಸಂಘದಿಂದ ಖಂಡನೆ


ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸಂಘದಿಂದ ಮನವಿ
ಕೊಪ್ಪಳ : ಆನೆಗೊಂದಿ ಉತ್ಸವ ಜನೇವರಿ ೦೯, ೨೦೨೦ ರಂದು ವಿದ್ಯಾರಣ್ಯ ವೇದಿಕೆಯಲ್ಲಿ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪತ್ರಕರ್ತ ಹಾಗೂ ಸಾಹಿತಿ ಸಿರಾಜ್ ಬಿಸರಳ್ಳಿ ತಮ್ಮ ಕವನ ವಾಚನವನ್ನು ಮಾಡಿದ್ದು ಅವರ ವಿರುದ್ದ ದೂರು ದಾಖಲಾಗಿದ್ದು ಇದನ್ನು ಖಂಡಿಸಿ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಮತ್ತು ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಸಿರಾಜ್ ಬಿಸರಳ್ಳಿ ಅವರ ಕವಿತೆಯಲ್ಲಿ ಯಾವುದೇ ಒಬ್ಬ ವ್ಯಕ್ತಿ , ಧರ್ಮ, ಜಾತಿಯನ್ನು ನಿಂದನೆ ಮಾಡಿರುವುದಿಲ್ಲ. ಗೌರವಕ್ಕೆ ಧಕ್ಕೆ ಬರುವಂತೆ ಪ್ರಚೋದನಕಾರಿ ಹೇಳಿಕೆಗೆ ದಾರಿ ಮಾಡಿಕೊಟ್ಟಿಲ್ಲ ಆದರೂ ಸಿರಾಜ್ ಬಿಸರಳ್ಳಿ ಅವರ ಮೇಲೆ ದೂರು ದಾಖಲಾಗಿರುವುದು (ಎಫ್‌ಐಆರ್) ಖಂಡನಿಯ ಹಾಗೂ ತಮ್ಮ ದೂರನ್ನು ವಾಪಾಸು ಪಡೆಯದಿದ್ದರೆ ಜಿಲ್ಲೆಯಾದ್ಯಾಂತ ಪತ್ರಕರ್ತರು ಹೋರಾಟ ನಡಸಲಾಗುವುದು ಮುಂದೆ ರಾಜ್ಯಮಟ್ಟದಲ್ಲಿಯೊ ಹೋರಾಟ ನಡೆಸಲಾಗುವುದು ಎಂದು ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಎಂ ಸಾದಿಕ್ ಅಲಿ ತಿಳಿಸಿದರು.
ಸಿರಾಜ್ ಬಿಸರಳ್ಳಿ ಕಳೆದ ೨ ದಶಕಗಳಿಂದ ಸಾಹಿತ್ಯದಲ್ಲಿ ಸಕ್ರಿಯವಾಗಿ ತೊಡಗಿ ಕೊಂಡು, ಒಬ್ಬ ಪತ್ರಕರ್ತರಾಗಿ, ಹೋರಾಟಗಾರರಾಗಿ ಪ್ರಾಮಾಣಿಕತೆ, ನಿಷ್ಠೆ, ದಕ್ಷತೆಯಿಂದ ಕಾರ್ಯನಿರ್ವಹಿ ಸುತ್ತಿದ್ದಾರೆ. ಬಡವರ, ಕೃಷಿಕರ, ಕಾರ್ಮಿಕರ, ದಲಿತರ ಹಿಂದುಳಿದವರ ಬಗ್ಗೆ ಸದಾ ತಮ್ಮ ಬರಹ ಹಾಗೂ ಪತ್ರಿಕೋದ್ಯಮ ವೃತ್ತಿಯಲ್ಲಿ ಚಿಂತನೆ ಮಾಡಿ ತಮ್ಮ ಬರವಣೆಗೆ ಮೂಲಕ ಛಾಪು ಮೂಡಿಸಿದ್ದಾರೆ. ಆನೆಗೊಂದಿ ಉತ್ಸವದಲ್ಲಿಯೂ ಅವರ ಕವನದಲ್ಲಿ ದೇಶದ ವರ್ತಮಾನದ ಸಾಮಾಜಿಕ, ರಾಜಕೀಯ ಸ್ಥಿತಿಗತಿಗೆ ಅನುಗುಣವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ. ಪ್ರತಿಯೊಬ್ಬ ಕವಿ,ಬರಹಗಾರ , ಪತ್ರಕರ್ತರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅಭಿವ್ಯಕ್ತಿ ಸ್ವಾತಂತ್ರವಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರ ಮೇಲೆ ವಿನಾಕಾರಣ ದೂರು ದಾಖಲೆ ಮಾಡಿದ್ದಾರೆ. ಇದನ್ನು ಹಿಂಪಡೆಯಬೇಕೆಂದು ಒತ್ತಾಯಿಸಲಾಗಿದೆ.

ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಿರಾಜ್ ಬಿಸರಳ್ಳಿಯವರ ವ್ಯಕ್ತಿತ್ವಕ್ಕೆ ಧಕ್ಕೆ ಹಾಗೂ ಕಪ್ಪುಚುಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಆರೋಗ್ಯಕರ ಚರ್ಚೆ ಮಾಡುವುದು ಬಿಟ್ಟು ಕಾನೂನಿನ ಮೂಲಕ ಅವರನ್ನು ಬೆದರಿಸಲಾಗುತ್ತಿದೆ. ಇದು ಖಂಡನೀಯ ಇದನ್ನು ನಾವು ಪ್ರತಿಭಟಿಸುತ್ತೇವೆ. ಅಲ್ಲದೇ, ಸಿರಾಜ್ ಅವರ ಕವಿತೆಯ ವಿಡಿಯೋವನ್ನು ಫೇಸ್ ಬುಕ್ಕಿನಲ್ಲಿ ಶೇರ್ ಮಾಡಿರುವ ಸಾಮಾಜಿಕ ಹೋರಾಟಗಾರ ಹಾಗೂ ಸಂಪಾದಕ ರಾಜಾಬಕ್ಷಿ ಎಚ್.ವಿ.ಯವರ ಮೇಲೆ ಕೂಡ ದೂರು ನೀಡಿ ಪ್ರಕರಣ ದಾಖಲಿಸಲಾಗಿದೆ. ಕೂಡಲೇ ಇದನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು. ಒಂದು ವೇಳೆ ಪ್ರಕರಣ ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸಂಘಟನೆಯ ಅಧ್ಯಕ್ಷರು ಎಚ್ಚರಿಸಿದ್ಧಾರೆ. ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಎಚ್.ಎಸ್.ಹರೀಶ್, ಜಿ.ಎಸ್.ಗೋನಾಳ, ಪ್ರದಾನ ಕಾರ್ಯದಶಿ. ಎನ್.ಎಂ.ದೊಡ್ಡಮನಿ, ಸದಸ್ಯರಾದ ಬಸವರಾಜ ಗುಡ್ಲಾನೂರ, ಸಿದ್ದನಗೌಡ ಪಾಟೀಲ್, ರಾಜು ಬಿ.ಆರ್., ಕಲೀಲ್ ಹುಡೇವು, ಮೌಲಾಹುಸೇನ ಬುಲ್ಡಿಯಾರ್, ಮುಸ್ತಫಾ ಅಳವಂಡಿ, ಶಿವರಾಜ್ ನುಗಡೋಣಿ, ಶಿವಕುಮಾರ ಹಿರೇಮಠ, ಫಕೀರಪ್ಪ ಗೋಟೂರು ಉಪಸ್ಥಿತರಿದ್ದರು.

Please follow and like us:
error