ಪಟಾಕಿಯನ್ನು ಸಾಂಕೇತಿಕವಾಗಿ ಬಳಸಿ, ಪರಿಸರ ಸ್ನೇಹಿ ದೀಪಾವಳಿ ಆಚರಿಸಿ : ಕೆ.ಎಸ್. ಮಂಜುನಾಥ

ಕೊಪ್ಪಳ ನ. : ಪಟಾಕಿಗಳನ್ನು ಹೊಡೆಯುವುದರಲ್ಲಿ ಯಾವುದೇ ಸ್ಪರ್ಧೆ ಮಾಡದೇ ಪಟಾಕೆಗಳನ್ನು ಸಾಂಕೇತಿಕವಾಗಿ ಬಳಸಿ, ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನಾಗಿ ಆಚರಿಸಿ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಪ್ಪಳ ಜಿಲ್ಲಾ ಪರಿಸರ ಅಧಿಕಾರಿ ಕೆ.ಎಸ್. ಮಂಜುನಾಥ ಅವರು ಹೇಳಿದರು. ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಸೋಮವಾರದಂದು ಆಯೋಜಿಸಲಾದ ಸಭೆಯಲ್ಲಿ ಅವರು ಮಾತನಾಡಿದರು. ದೀಪಾವಳಿ ಹಬ್ಬವು ದೀಪಗಳನ್ನು ಬೆಳಗಿಸಿ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ಆದರೆ ಪಟಾಕಿಗಳನ್ನು ಸುಟ್ಟು ಪರಿಸರ ಮಾಲಿನ್ಯವನ್ನುಂಟು ಮಾಡುವ ಹಾಗೂ ಪಟಾಕಿಗಳ ಅನಾಹುತ ಅವಘಡಗಳಿಂದಲ್ಲ. ಸರ್ವೋಚ್ಛ ನ್ಯಾಯಾಲಯವು ಈ ವರ್ಷ ಅಂದರೆ 2018ರ ಅಕ್ಟೋಬರ್. 23 ರಂದು ಆದೇಶ ಹೊರಡಿಸಿದ್ದು, ಇದರನ್ವಯ ಕಡಿಮೆ ಶಬ್ಧ ಮತ್ತು ಹೊಗೆ ಉಗುಳುವ “ಹಸಿರು ಪಟಾಕಿ”ಗಳನ್ನು ತಯಾರಿಸಿ ಮಾರಾಟ ಮಾಡಲು ಆದೇಶಿಸಿದೆ. ದೀಪಾವಳಿ ಹಬ್ಬ ಅಥವಾ ಇನ್ನಿತರೆ ಹಬ್ಬಗಳಂದು ಈ ರೀತಿಯ ಪಟಾಕಿಗಳನ್ನು ಹಚ್ಚಲು ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮತ್ತು ಕ್ರಿಸ್‍ಮಸ್ ಹಾಗೂ ಹೊಸ ವರ್ಷಾರಂಭ ಆಚರಣೆಯ ಸಂದರ್ಭದಲ್ಲಿ ಪಟಾಕಿಗಳನ್ನು ಹಚ್ಚಲು ರಾತ್ರಿ 11-55 ಗಂಟೆಯಿಂದ 12-30 ಗಂಟೆಯವರೆಗೆ ಗೊತ್ತುಪಡಿಸಿ ಆದೇಶಿಸಿದೆ. ಅತಿ ಹೆಚ್ಚು ಶಬ್ಧ ಉಂಟಾಗುವ ಸರಣಿ ಪಟಾಕಿಗಳಿಂದ (ಜ್ವೈನ್ಡ್ ಫಿರೆಕ್ರಾಕರ್ಸ್) ವಾಯು/ ಶಬ್ಧ ಮಾಲಿನ್ಯ ಹಾಗೂ ಪಟಾಕಿ ಸಿಡಿಸಿದ ನಂತರದ ಘನತ್ಯಾಜ್ಯ ವಸ್ತುಗಳಿಂದ ಮಾಲಿನ್ಯ ಉಂಟಾಗುವುದರಿಂದ ಅವುಗಳನ್ನು ನಿಷೇಧಿಸಲಾಗಿದೆ. ಸರ ಪಟಾಕಿಯಂತಹ ಬಾರಿ ಹಾಗೂ ನಿರಂತರ ಶಬ್ಧ ಮಾಡುವ ಪಟಾಕಿ ನಿಷೇಧಿಸಿದೆ. ಮಕ್ಕಳು ಪಟಾಕಿ ಸಿಡಿಸುವಾಗ ಸುರಕ್ಷತೆ ಬಗ್ಗೆ ಪೋಷಕರು ವಿಶೇಷ ಕಾಳಜಿ ವಹಿಸಬೇಕು ಎಂದು ನ್ಯಾಯಾಲಯವು ಆದೇಶಿಸಿದೆ. ದೀಪಾವಳಿಯು ಸಾಮಾನ್ಯವಾಗಿ ನಂವೆಂಬರ್ ತಿಂಗಳಲ್ಲಿ ಬರುವುದು. ಈ ಅವಧಿಯಲ್ಲಿ ಚಳಿಯ ಪ್ರಮಾಣವು ಹೆಚ್ಚಾಗಿರುವುದರಿಂದ ಗಾಳಿಯ ಸಾಂದ್ರತೆಯ ಗುಣಮಟ್ಟ ಕಡಿಮೆಯಾಗಿರುತ್ತದೆ. ಪಟಾಕಿಗಳಿಂದ ಬರುವಂತಹ ಹೊಗೆಯು ಸಂಪೂರ್ಣ ಹರಿದು ಹೋಗಲು ತುಂಬಾ ಸಮಯ ಬೇಕಾಗುತ್ತದೆ. ಇದರಿಂದ ಉಸಿರಾಟ ತೊಂದರೆಗಳಂತಹ ಸಮಸ್ಯೆಗಳು ಉದ್ಬವಿಸಬಹುದು. ಪಟಾಕೆಗಳ ಶಬ್ಧದಿಂದ ಪ್ರಾಣಿಗಳ ಜೀವನದ ಮೇಲೂ ಸಹ ಪರಿಣಾಮ ಉಂಟಾಗುತ್ತದೆ. ಹಸಿರು ಪಟಾಕಿಗಳು ಇನ್ನು ಮಾರುಕಟ್ಟೆಯಲ್ಲಿ ಬಂದಿಲ್ಲ. ಆದರೆ ಪಟಾಕಿಗಳನ್ನು ಹೊಡೆಯುವುದರಲ್ಲಿ ಯಾವುದೇ ಸ್ಪರ್ಧೆ ಮಾಡದೇ ಸಾಂಕೇತಿಕವಾಗಿ ಬಳಸಿ. ಕಡಿಮೆ ಶಬ್ಧ ಮತ್ತು ಹೊಗೆ ಬರುವಂತಹ ಪಟಾಕಿಗಳನ್ನು ಉಪಯೋಗಿಸಿ ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನಾಗಿ ಆಚರಿಸಿ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಪ್ಪಳ ಜಿಲ್ಲಾ ಪರಿಸರ ಅಧಿಕಾರಿ ಕೆ.ಎಸ್. ಮಂಜುನಾಥ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ, ನಗರಸಭೆ ಪೌರಾಯುಕ್ತ ಸುನೀಲ್ ಪಾಟೀಲ್, ಪರಿಸರ ಅಭಿಯಂತ ಅಶೋಕ, ಸ್ವಯಂ ಸೇವಾ ಸಂಸ್ಥೆಯ ಆನಂದ ಹಳ್ಳಿಗುಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕರಿಗಳು ಉಪಸ್ತೀತರಿದ್ದರು. ಅಲ್ಲದೇ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಚಿಸಿದ ಕಿರು ಚಿತ್ರವನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು

Please follow and like us:
error