ನ. 19 ರೊಳಗಾಗಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಿ : ನಂಜಯ್ಯನಮಠ ಎಸ್.ಜಿ

ಕೊಪ್ಪಳ ಜಿಲ್ಲೆಯನ್ನು ನವೆಂಬರ್. 19 ರೊಳಗಾಗಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಭೌತಿಕ ಕಾಮಗಾರಿಗಳ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ನಂಜಯ್ಯನಮಠ ಎಸ್.ಜಿ. ಅವರು ಜಿಲ್ಲಾ ಪಂಚಾಯತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸಂಬಂಧಪಟ್ಟ ಕಾರ್ಯಕ್ರಮಗಳ ಪರಿಶೀಲನೆ ಕುರಿತು ಕೊಪ್ಪಳ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಗುರುವಾರದಂದು ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ 3 ಸಾವಿರ, ಕುಷ್ಟಗಿ ತಾಲೂಕಿನಲ್ಲಿ 6 ಸಾವಿರ ಕೊಪ್ಪಳ ತಾಲೂಕಿನಲ್ಲಿ ಸುಮಾರು 6 ಸಾವಿರ ಹಾಗೂ ಯಲಬುರ್ಗಾ ತಾಲೂಕಿನಲ್ಲಿ 15 ಸಾವಿರ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 25 ಸಾವಿರ ಶೌಚಾಲಯಗಳ ನಿರ್ಮಾಣ ಬಾಕಿ ಇದ್ದು, ನವೆಂಬರ್. 19 ರೊಳಗಾಗಿ ಜಿಲ್ಲೆಯಲ್ಲಿ ಶೇ. 100% ಶೌಚಾಲಗಳನ್ನು ನಿರ್ಮಿಸಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಿ. ಕೊಪ್ಪಳ ಜಿಲ್ಲಾ ಪಂಚಾಯತ ವತಿಯಿಂದ “ಮಿಷನ್-200” ಕಾರ್ಯಕ್ರಮದಡಿ 21 ಸಾವಿರ ಶೌಚಾಲಗಗಳನ್ನು ನಿರ್ಮಾಣ ಮಾಡಲಾಗಿದ್ದಿ, ಉತ್ತಮ ಕಾರ್ಯವಾಗಿದೆ. ಇದರಂತೆ ಜಿಲ್ಲೆಯಲ್ಲಿ ಉಳಿದ 25 ಸಾವಿರ ಶೌಚಾಲಯಗಳನ್ನು ನವೆಂಬರ್. 19 ರೊಳಗಾಗಿ ನಿರ್ಮಾಣ ಮಾಡಿ, ಕೊಪ್ಪಳ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಜಿಲ್ಲೆಯನ್ನಾಗಿಸಿ.
ಶೌಚಾಲಯಗಳ ನಿರ್ಮಾಣದ ಸಹಾಯಧನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಕುಡಿಯುವ ನೀರಿಗಾಗಿ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 22 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೊಪ್ಪಳ ಜಿಲ್ಲಾ ಪಂಚಾಯತ ಅಧೀನದಲ್ಲಿ ತೆಗೆದುಕೊಳ್ಳಲಾಗುವುದು ಎಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಭೌತಿಕ ಕಾಮಗಾರಿಗಳ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ನಂಜಯ್ಯನಮಠ ಎಸ್.ಜಿ. ಅವರು ಹೇಳಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಭೌತಿಕ ಕಾಮಗಾರಿಗಳ ಪರಿಶೀಲನಾ ಸಮಿತಿಯ ಸದಸ್ಯ ಟಿ. ಜನಾರ್ಧನ ಹುಲಿಗಿ, ಜಿ.ಪಂ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error