ನೀತಿ ಸಂಹಿತೆ ಪಾಲನೆಗೆ ಚೆಕ್‍ಪೋಸ್ಟ್ ಸ್ಥಾಪನೆ ಫ್ಲೆಯಿಂಗ್ ಸ್ವಾಡ್ ನಿಯೋಜನೆ- ಎಂ. ಕನಗವಲ್ಲಿ

ಕೊಪ್ಪಳ ಮಾ. ವಿಧಾನಸಭಾ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಗೊಂಡಿದ್ದು, ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು 11 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ, 30 ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.


ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿ ಪ್ಯಾಟ್‍ಗಳ ಬಳಕೆ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಾತ್ಯಕ್ಷಿತೆ ನೀಡಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಈ ಹಿಂದೆ ಮತದಾನ ಸಂದರ್ಭದಲ್ಲಿ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಮಾತ್ರ ಬಳಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರಾಜ್ಯದಲ್ಲಿನ ಚುನಾವಣೆಯಲ್ಲಿ ಮತದಾರರ ಮತ ಖಾತ್ರಿ ಪಡಿಸುವ ವಿವಿಪ್ಯಾಟ್‍ಗಳನ್ನು ಬಳಸಲಾಗುತ್ತಿದೆ. ಮತದಾನ ಪ್ರಕ್ರಿಯೆಯಲ್ಲಿ ಇವಿಎಂ ಯಂತ್ರಗಳ ಕುರಿತು ಮತದಾರರಲ್ಲಿ ವಿಶ್ವಾಸ ಮೂಡಿಸುವ ಕಾರ್ಯವನ್ನು ಮಾಧ್ಯಮಗಳು ಕೂಡ ಕೈಗೊಳ್ಳಬೇಕಿರುವುದರಿಂದ, ಚುನಾವಣಾ ಆಯೋಗದ ಸೂಚನೆಯಂತೆ ಮಾಧ್ಯಮ ಪ್ರತಿನಿಧಿಗಳಿಗೆ ಇವಿಎಂ ಹಾಗೂ ವಿವಿಪ್ಯಾಟ್‍ಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ ಎಂದರು.

1069199 ಮತದಾರರು :
********** ಜಿಲ್ಲೆಯಲ್ಲಿ 05 ವಿಧಾನಸಭಾ ಕ್ಷೇತ್ರಗಳನ್ನು ಸೇರಿದಂತೆ ಪುರುಷ-535874, ಮಹಿಳೆ-533325 ಸೇರಿದಂತೆ ಒಟ್ಟು 1069199 ಮತದಾರರಿದ್ದಾರೆ. 1286 ಮತಗಟ್ಟೆಗಳಿದ್ದು, 17 ಹೆಚ್ಚುವರಿ/ಹೊಸ ಮತಗಟ್ಟೆಗಳಿವೆ. 60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 269 ಮತಗಟ್ಟೆಗಳು, 02 ಹೆಚ್ಚುವರಿ ಮತಗಟ್ಟೆಗಳಿವೆ. ಮತದಾರರ ಸಂಖ್ಯೆ ಪುರುಷ-113134, ಮಹಿಳೆ-110531, ಒಟ್ಟು- 223665 ಮತದಾರರಿದ್ದಾರೆ. 61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 257 ಮತಗಟ್ಟೆಗಳು, 03 ಹೆಚ್ಚುವರಿ ಮತಗಟ್ಟೆಗಳಿವೆ. ಮತದಾರರ ಸಂಖ್ಯೆ ಪುರುಷ-104085, ಮಹಿಳೆ-105779, ಒಟ್ಟು- 209864 ಮತದಾರರಿದ್ದಾರೆ. 62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 230 ಮತಗಟ್ಟೆಗಳು, 02 ಹೆಚ್ಚುವರಿ ಮತಗಟ್ಟೆಗಳಿವೆ. ಮತದಾರರ ಸಂಖ್ಯೆ ಪುರುಷ-96178, ಮಹಿಳೆ-96538, ಒಟ್ಟು- 192716 ಮತದಾರರಿದ್ದಾರೆ. 63-ಯಲಬುರ್ಗಾ ಕ್ಷೇತ್ರದಲ್ಲಿ 251 ಮತಗಟ್ಟೆಗಳು, 02 ಹೆಚ್ಚುವರಿ ಮತಗಟ್ಟೆಗಳಿವೆ. ಮತದಾರರ ಸಂಖ್ಯೆ ಪುರುಷ-103313, ಮಹಿಳೆ-101213, ಒಟ್ಟು- 204526 ಮತದಾರರಿದ್ದಾರೆ. 64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ- 279 ಮತಗಟ್ಟೆಗಳು, 08 ಹೆಚ್ಚುವರಿ/ಹೊಸ ಮತಗಟ್ಟೆಗಳಿವೆ. ಮತದಾರರ ಸಂಖ್ಯೆ ಪುರುಷ-119164, ಮಹಿಳೆ-119264, ಒಟ್ಟು- 238428 ಮತದಾರರಿದ್ದಾರೆ.
11 ಚೆಕ್ ಪೋಸ್ಟ್‍ಗಳು : ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು, ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ 11 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 06 ರಂತೆ ಒಟ್ಟು 30 ಫ್ಲೈಯಿಂಗ್ ಸ್ಕ್ವಾಡ್‍ಗಳನ್ನು ರಚಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 03 ರಂತೆ ಜಿಲ್ಲೆಯಲ್ಲಿ ಒಟ್ಟು 15 ವಿಡಿಯೋ ಸರ್ವೆಲೆನ್ಸ್ ತಂಡಗಳು ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 01 ರಂತೆ ಒಟ್ಟು 05 ವಿಡಿಯೋ ವಿವಿಂಗ್ ತಂಡಗಳನ್ನು ರಚಿಸಿ, ಸಿದ್ಧವಾಗಿರಿಸಲಾಗಿದೆ ಎಂದರು.

ದೂರು ನಿರ್ವಹಣಾ ಘಟಕ :
********* ಚುನಾವಣೆಗೆ ಸಂಬಂಧಿಸಿದಂತೆ ದೂರುಗಳನ್ನು ಸ್ವೀಕರಿಸಿ, ಅವುಗಳಿಗೆ ಸ್ಪಂದಿಸಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆ ಸಂಬಂಧಿತ ದೂರು ಸ್ವೀಕೃತಿಗೆ 24*7 ಸಹಾಯವಾಣಿ ಸ್ಥಾಪಿಸಲಾಗಿದ್ದು, ದೂರವಾಣಿ ಸಂ: 08539-225001 ಹಾಗೂ ಟೋಲ್ ಫ್ರೀ ಸಂಖ್ಯೆ. 1077 ಸ್ಥಾಪಿಸಲಾಗಿದೆ.
ಮತಗಟ್ಟೆಗಳಲ್ಲಿ ವಿಶೇಷ ವ್ಯವಸ್ಥೆ :
********* ಕೊಪ್ಪಳ ಜಿಲ್ಲೆಯಲ್ಲಿ ನೋಂದಾಯಿತರಾದ ಎಲ್ಲ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ ನೀಡಲಾಗಿದ್ದು, ಮತದಾರರ ಪಟ್ಟಿಯಲ್ಲಿ ಶೇ. 99 ರಷ್ಟು ಮತದಾರರ ಭಾವಚಿತ್ರಗಳು ಲಭ್ಯವಿವೆ. ಎಲ್ಲ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಎಲ್ಲ ಮತಗಟ್ಟೆಗಳಲ್ಲಿ ವಿಕಲಚೇತನ ಮತದಾರರಿಗಾಗಿ ವೀಲ್ ಚೇರ್‍ಗಳ ವ್ಯವಸ್ಥೆ ಮಾಡಲಾಗುತ್ತಿದೆ ಹಾಗೂ ಅಂಧ ಮತದಾರರಿಗಾಗಿ ಅಗತ್ಯವಿರುವೆಡೆ ಬ್ಯಾಲಟ್ ಪೇಪರ್‍ಗಳನ್ನು ಬ್ರೈಲ್ ಲಿಪಿಯಲ್ಲಿ ತಯಾರಿಸಲು ಕ್ರಮ ವಹಿಸಲಾಗಿದೆ. ಅನಕ್ಷರಸ್ಥ ಮತದಾರರು ಕೂಡ ಮತದಾನ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ಗುರುತಿಸಿ, ಮತ ಚಲಾಯಿಸಲು ಅನುಕೂಲವಾಗುವಂತೆ ಈ ಬಾರಿಯ ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರವನ್ನು ಮುದ್ರಿಸಿ, ಬ್ಯಾಲೆಟ್ ಯುನಿಟ್‍ಗಳಲ್ಲಿ ಅಳವಡಿಸಲಾಗುತ್ತದೆ. ಜಿಲ್ಲೆಗೆ 1963 ಬ್ಯಾಲಟ್ ಯುನಿಟ್, 1635- ಕಂಟ್ರೋಲ್ ಯುನಿಟ್ ಹಾಗೂ 1554- ವಿವಿಪ್ಯಾಟ್ ಗಳು ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾಹಿತಿ ನೀಡಿದರು.
ವಿವಿಪ್ಯಾಟ್‍ಗಳ ಬಳಕೆ, ಕಾರ್ಯನಿರ್ವಹಣೆ, ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್‍ಗಳ ಸಂಪರ್ಕ ಕುರಿತಂತೆ ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ ವಿಜಯಕುಮಾರ್ ಅವರು ವಿವಿಧ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಾತ್ಯಕ್ಷಿತೆ ನೀಡಿದರು. ಈ ಸಂದರ್ಭದಲ್ಲಿ ಅಣುಕು ಮತದಾನ ನಡೆಸಿ ವಿವಿಪ್ಯಾಟ್‍ನಲ್ಲಿ ಮತದಾನದ ಖಾತ್ರಿ ಕುರಿತಂತೆ ಮನವರಿಕೆ ಮಾಡಿಕೊಡಲಾಯಿತು.
ಜಿಲ್ಲಾ ಪಂಚಾಯತಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾವ್ ಬಿ.ವಿ. ಉಪಸ್ಥಿತರಿದ್ದರು.

Please follow and like us:
error

Related posts