ನಿರ್ಗಮಿತ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರಿಗೆ ಜಿಲ್ಲಾಡಳಿತದಿಂದ ಆತ್ಮೀಯ ಬೀಳ್ಕೊಡುಗೆ


ಕೊಪ್ಪಳ : ಬೆಂಗಳೂರಿನ ಬಿಬಿಎಂಪಿ ಹಣಕಾಸು ಮತ್ತು ಐಟಿ ವಿಭಾಗದ ವಿಶೇಷ ಆಯುಕ್ತರಾಗಿ ವರ್ಗಾವಣೆಯಾಗಿರುವ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ವತಿಯಿಂದ ಜಿಲ್ಲಾಡಳಿತ ಭವನದ ಡಿಟೋರಿಯಂ ಹಾಲ್‌ನಲ್ಲಿ ಇಂದು ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಕೊಪ್ಪಳ ಜಿಲ್ಲೆಯ ಎಲ್ಲಾ ಅಧಿಕಾರಿಗಳು ನನಗೆ ಉತ್ತಮ ಸಹಕಾರ ನೀಡಿದ್ದು, ಒಂದು ತಂಡವಾಗಿ ಕಾರ್ಯನಿರ್ವಹಿಸಿ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡಿದ ತೃಪ್ತಿ ಇದೆ. ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಅವರ ಸೇವೆಗಾಗಿ ನಾವಿದ್ದೇವೆ ಎಂಬ ನಂಬಿಕೆ ಮೂಡಿಸಬೇಕು. ಸಾರ್ವಜನಿಕರ ಸೇವೆಗಾಗಿಯೇ ನಾವು ನಾಗರಿಕ ಸೇವೆಯನ್ನು ಆಯ್ಕೆ ಮಾಡಿಕೊಂಡಿರುತ್ತೇವೆ. ಅದಕ್ಕೆ ನ್ಯಾಯ ಒದಗಿಸಬೇಕು. ಸರ್ಕಾರಿ ಸೇವೆಯಲ್ಲಿ ಜಾತಿ, ಧರ್ಮ, ರಾಜಕೀಯ ಪಕ್ಷಗಳನ್ನು ದೂರವಿಟ್ಟು, ಕಾನೂನು ಮತ್ತು ಶಿಷ್ಟಾಚಾರದ ಪಾಲನೆ ಮಾಡುತ್ತಾ ನಮ್ಮ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ಸಾರ್ವಜನಿಕ ಸೇವೆಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು. ಒತ್ತಡಗಳ ನಡುವೆಯೂ ಪಾರದರ್ಶಕ ಆಡಳಿತದಿಂದ ಜನರಲ್ಲಿ ಜಿಲ್ಲಾಡಳಿತದ ಕುರಿತು ವಿಶ್ವಾಸ ಮೂಡಿಸಬೇಕು. ಜಿಲ್ಲೆಯಲ್ಲಿ ಇದುವರೆಗಿನ ನನ್ನ ಅಧಿಕಾರವಧಿಯಲ್ಲಿ ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ್ದೇನೆ. ಕೋವಿಡ್ ನಂತಹ ತುರ್ತು ಪರಿಸ್ಥಿತಿಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ನನ್ನೊಂದಿಗೆ ಹಗಲಿರುಳು ಶ್ರಮಿಸಿದ್ದೀರಿ, ನಿಮ್ಮ ಪರಿಶ್ರಮದಿಂದಲೇ ಜಿಲ್ಲಾಡಳಿತಕ್ಕೆ ಒಳ್ಳೆಯ ಹೆಸರಿದೆ ಎಂದು ಅವರು ಹೇಳಿದರು.
ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಆಗಮಿಸಿದ ಸುರಳ್ಕರ್ ವಿಕಾಸ್ ಕಿಶೋರ್ ಮಾತನಾಡಿ, ಜಿಲ್ಲಾಡಳಿತದ ಎಲ್ಲಾ ಇಲಾಖೆಗಳು ನನಗೆ ಸಹಕಾರ ನೀಡಿ, ನಾವೆಲ್ಲರೂ ಒಂದು ತಂಡವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸೋಣ. ನಿರ್ಗಮಿತ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರ ವೃತ್ತಿ ಜೀವನ ಸುಖಕರವಾಗಿರಲಿ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಸಿಇಒ ರಘುನಂದನ್ ಮೂರ್ತಿ ಮಾತನಾಡಿ, ನಿರ್ಗಮಿತ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರ ಯಾವುದೇ ದೃಢ ನಿರ್ಧಾರದಲ್ಲಿ ಮಾನವೀಯತೆ ಇರುತ್ತಿತ್ತು. ಕೆಲಸದ ವಿಷಯವಾಗಿ ತುಂಬಾ ಶಿಸ್ತಿನ ಮತ್ತು ಕ್ರಿಯಾಶೀಲ ಅಧಿಕಾರಿಯಾಗಿದ್ದರು. ಇನ್ನುಮುಂದೆಯೂ ಅಗತ್ಯ ಸಮಯದಲ್ಲಿ ನಮಗೆ ಅವರ ಮಾರ್ಗದರ್ಶನದ ಅವಶ್ಯಕತೆ ಇದೆ. ಒಂದು ತಂಡವಾಗಿ ಕರ್ತವ್ಯ ನಿರ್ವಹಿಸಿದಾಗ ಯಶಸ್ಸು ಗಳಿಸುವುದು ಸುಲಭ ಎಂಬುದನ್ನು ಅವರು ನಮಗೆ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಜಿಲ್ಲಾಧಿಕಾರಿಗಳು ಆಪ್ತ ಸ್ನೇಹಿತನಂತೆ ನಮ್ಮೆಲ್ಲ ಕೆಲಸ ಕಾರ್ಯಗಳಲ್ಲಿ ಮಾರ್ಗದರ್ಶನ ನಿಡುತ್ತಾ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ಎಲ್ಲ ನಾಗರಿಕರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅವರ ಸ್ನೇಹಪರತೆ, ವೃತ್ತಿಪರತೆ, ದೃಢವಿಶ್ವಾಸದ ಕರ್ತವ್ಯ ನಿರ್ವಹಣೆ ಮತ್ತು ಸಾರ್ವಜನಿಕ ಸೇವಾ ಮನೋಭಾವ ನಮಗೆಲ್ಲರಿಗೂ ಮಾದರಿ ಎಂದರು.
ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ ಅವರು ನಿರ್ಗಮಿತ ಜಿಲ್ಲಾಧಿಕಾರಿಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು ಮತ್ತು ವಿವಿಧ ಇಲಾಖೆಗಳಿಂದ ನಿರ್ಗಮಿತ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರಿಗೆ ಸನ್ಮಾನಿಸಲಾಯಿತು. ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Please follow and like us:
error