You are here
Home > Koppal News > ನಿಫಾ ವೈರಾಣು ಜ್ವರ ಹರಡದಂತೆ ಮುಂಜಾಗೃತ ಕ್ರಮ ಕೈಗೊಳ್ಳಿ : ಡಾ. ರುದ್ರೇಶ ಘಾಳಿ ಸೂಚನೆ

ನಿಫಾ ವೈರಾಣು ಜ್ವರ ಹರಡದಂತೆ ಮುಂಜಾಗೃತ ಕ್ರಮ ಕೈಗೊಳ್ಳಿ : ಡಾ. ರುದ್ರೇಶ ಘಾಳಿ ಸೂಚನೆ

ಕೊಪ್ಪಳ : ನಿಫಾ ವೈರಾಣು ಜ್ವರ ಇದೊಂದು ಹೊಸದಾಗಿ ಕಂಡುಬಂದ ವೈರಾಣು ಸೋಂಕು ಆಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಹರಡದಂತೆ ಮುಂಜಾಗೃತ ಕ್ರಮ ಕೈಗೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೀಫಾ ವೈರಾಣು ಜ್ವರ ಹರಡುವಿಕೆಗೆ ಸಂಬಂಧಿಸಿದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವ ಕುರಿತು ಕೊಪ್ಪಳ ಆರೋಗ್ಯ ಮತ್ತು ಕಲ್ಯಾಣ ಸೇವೆಗಳ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಹಮ್ಮಿಕೊಳ್ಳಲಾದ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ನಿಫಾ ವೈರಾಣು ಇತ್ತೀಚೆಗೆ ಕೇರಳ ರಾಜ್ಯದಲ್ಲಿ ಕಂಡುಬಂದಿದ್ದು, ಹಲವು ಸಂಶಯಾಸ್ಪದ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 6 ಮರಣಗಳು ಸಂಭವಿಸಿವೆ. ನಿಫಾ ವೈರಸ್ ಮಾರಣಾಂತಿಕವಾಗಿದೆ. ಈ ರೋಗದ ಲಕ್ಷಣಗಳು ನಮ್ಮ ಭಾಗದಲ್ಲಿ ಕಂಡುಬಂದಿಲ್ಲ. ಆದರೂ ಸಹ ಮುಂಜಾಗೃತ ಕ್ರಮ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ. ನಿಫಾ ಜ್ವರಕ್ಕೆ ಬಾವಲಿ, ಹಂದಿ, ನಾಯಿ, ಕುರಿ, ಬೆಕ್ಕು ಹಾಗೂ ಮನುಷ್ಯರು ಸಹ ಒಳಪಡುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ಬಾವಲಿ ಪ್ರಾಣಿಗಳು ಕಡಿಮೆ ಸಂಖ್ಯೆ ಕಂಡುಬರುತ್ತಿದ್ದು, ಹಂದಿಗಳ ಸಂಖ್ಯೆ ಹೆಚ್ಚಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆ, ಹಾಗೂ ಸಂಬಂಧಿಸಿದ ನಗರಸಭೆ, ಪಟ್ಟಣ ಪಂಚಾಯತ್ ಮತ್ತು ಪಶುಸಂಗೋಪನಾ ಇಲಾಖೆಯವರು ಜಾನುವಾರುಗಳ ಮಾಲಿಕರಿಗೆ ಸೂಚನೆ ನೀಡಿ, ಕೂಡಲೇ ಹಂದಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ನಿಫಾ ವೈರಾಣು ಜ್ವರಕ್ಕೆ ಸಂಬಂಧಿತ ಜಿಲ್ಲೆಯ ಪ್ರತಿಯೊಂದು ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೆಕ 2 ರಿಂದ 3 ಬೆಡ್‍ಗಳನ್ನು ಕಾಯ್ದಿರಸಬೇಕು. ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮನೆ-ಮನೆಗೆ ಭೇಟಿ ನೀಡಿ ನಿಫಾ ವೈರಾಣು ಹರಡುವಿಕೆಯನ್ನು ತಡೆಗಟ್ಟುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಕೈಗೊಳ್ಳಬೇಕು. ಆಹಾರ ಸೇವನೆ ಇತ್ಯಾಧಿ ಸಲಹೆಗಳ ಕುರಿತು ಜನ ಜಾಗೃತಿ ಮೂಡಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಮ್.ಎಮ್ ಕಟ್ಟಿಮನಿ ಅವರು ಮಾತನಾಡಿ, ನೀಪಾ ವೈರಾಣು ಜ್ವರ ಈ ಪ್ರಕರಣಕ್ಕೆ ನಿಫಾ ವೈರಸ್ ಕಾರಣವೆಂದು ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್.ಐ.ವಿ) ಪುಣೆಯವರು ದೃಢಪಡಿಸಿದ್ದಾರೆ. ಈ ಜ್ವರಕ್ಕೆ ನಿರ್ಧಿಷ್ಠವಾದ ಔಷಧಿ ಕಂಡುಹಿಡಿದಿರುವುದಿಲ್ಲ. ನಿಫಾ ವೈರಸ್ ಶೇ.40 ರಿಂದ ಶೇ.74 ರಷ್ಟು ಮಾರಣಾಂತಿಕವಾಗಿರುತ್ತದೆ ಎಂದು ವರದಿಯಾಗಿದೆ. ಯಾವುದೇ ರೀತಿಯ ಜ್ವರ ಹಾಗೂ ನಿಫಾ ವೈರಸ್ ಲಕ್ಷಣಗಳಿರುವ ಜ್ವರ ಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು ಸೂಕ್ತವಾಗಿದೆ. ಯಾವುದೇ ಪ್ರಾಣಿ ಪಕ್ಷಿಗಳು ಕಚ್ಚಿದ ಹಾಗೂ ಮಳೆಗಾಳಿಯಿಂದ ಬಿದ್ದಿರುವ ಹಣ್ಣುಗಳನ್ನು ಸೇವಿಸಬಾರದು. ಬೀದಿ ಬದಿಗಳಲ್ಲಿ ಕತ್ತರಿಸಿ ಮಾರುವ ಹಣ್ಣು ಹಂಪಲಗಳನ್ನು ಸೇವಿಸಬಾರದು. ಈ ಕುರಿತು ಆರೋಗ್ಯ ಇಲಾಖೆ, ನಗರಸಭೆ, ಇನ್ನಿತರ ಇಲಾಖೆಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ನಿಫಾ ಜ್ವರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ಕಂಡುಬಂದಲ್ಲಿ ಕೂಡಲೆ ಜಿಲ್ಲಾ ಸರ್ವೇಕ್ಷಣಾಲಯ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಎಂದರು.
ಸಭೆಯಲ್ಲಿ ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಕೆ ದೇಸಾಯಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಅಲಕನಂದ ಮಳಗಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ. ಜಂಬಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು

Top