ಕೊಪ್ಪಳ, ನ. ೨೫: ಕರ್ನಾಟಕ ರಾಜ್ಯ ಸೇರಿದಂತೆ ದೇಶಕ್ಕೆ ಮಾಜಿ ಸಚಿವರುಗಳಾದ ಜಾಫರ್ ಶರೀಫ್ ಮತ್ತು ಅಂಬರೀಶ್ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದ್ದು, ಎರಡು ನಕ್ಷತ್ರಗಳ ಕಣ್ಮರೆ ನಿಜವಾಗಲೂ ವಿಷಾಧನೀಯ ಎಂದು ಕೆಪಿಸಿಸಿ ರಾಜ್ಯ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಹೇಳಿದರು.
ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ಹಮ್ಮಿಕೊಂಡಿದ್ದ ಸಂತಾಪ ಸೂಚಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಾಫರ್ ಶರೀಫ್ ಅವರದು ಸುಧೀರ್ಘ ರಾಜಕೀಯ ಇತಿಹಾಸ, ಸದಾ ಸೆಕ್ಯುಲರಿಸಂ ಧೋರಣೆ ಹೊಂದಿದ್ದ ಅವರು, ಶೋಷಿತ ಸಮುದಾಯದ ದಿವ್ಯ ಚೇತನ, ಅವರ ಸೇವೆ ಕಾಂಗ್ರೆಸ್ ಮತ್ತು ದೇಶಕ್ಕೆ ಅಪಾರವಾಗಿದೆ, ಇಳಿವಯಸ್ಸಿನಲ್ಲಿಯೂ ಅವರು ಜಾಗೃತ ರಾಜಕಾರಣಿಯಾಗಿದ್ದರು. ಅದೇ ರೀತಿ ಬಹುಮುಖ ವ್ಯಕ್ತಿತ್ವದ ನೇರ ನಿಷ್ಟುರ ಸ್ವಭಾವದ ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಅವರ ಅಗಲಿಕೆ ಇಡೀ ಚಿತ್ರರಂಗ, ಕಲಾರಂಗ, ರಾಜಕೀಯ ರಂಗ ಎಲ್ಲವೂ ಹಿರಿಯಣ್ಣನಿಲ್ಲದ ಮನೆಗಳಾಗಿವೆ. ಅವರನ್ನು ತೆಗಳುವ ಜನರೇ ಇಲ್ಲದಷ್ಟು ನಾಡಿನ ಪ್ರೀತಿಯನ್ನು ಗಳಿಸಿದ ಅವರ ಅಕಾಲಿಕ ಅಗಲುವಿಕೆ ತೀವ್ರ ಬೇಸರ ಮೂಡಿಸಿದೆ ಎಂದು ವಿಷಾಧಿಸಿದರು. ಕಾಂಗ್ರೆಸ್ಗೆ ಒಂದೇ ಬಾರಿಗೆ ಎರಡು ಧೃವ ನಕ್ಷತ್ರಗಳನ್ನು ಕಳೆದುಕೊಂಡಿರುವದು ತುಂಬಲಾರದ ನಷ್ಟವಾಗಿದೆ ಎಂದರು.
ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪಂಡಿತ್ ಸಂತಾಪ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಮುಖಂಡರುಗಳಾದ ಅಶೋಕ ಗೋರಂಟ್ಲಿ, ಸುಭಾಷ ಕಲಾಲ್, ವಾಜೀದ್ ಎಂ.ಎ., ವಿಜಯಕುಮಾರ್ ಹಣಗಿ, ಹರೀಶ್ ರವೀಂದ್ರ, ಕೃಷ್ಣಾ ಚನ್ನದಾಸರ, ಮಾರುತಿ ಬಿದರಿ, ಪ್ರಾಣೇಶ ಜಗಲಿ ಇತರರು ಇದ್ದರು.
ನಾಡಿನ ಎರಡು ನಕ್ಷತ್ರಗಳ ಕಣ್ಮರೆ ವಿಷಾಧನೀಯ
Please follow and like us: