ನರೆಗಾ ಕಾಮಗಾರಿಯಲ್ಲಿ ಅವ್ಯವಹಾರ: ತನಿಖೆಗೆ ಸಂಸದ ಕರಡಿ ಸಂಗಣ್ಣ ಪತ್ರ

ನರೆಗಾ ಕಾಮಗಾರಿಯಲ್ಲಿ ಅವ್ಯವಹಾರ: ತನಿಖೆಗೆ ಆಗ್ರಹ
ಜಿಪಂ ಸಿಇಒಗೆ ಸಂಸದ ಕರಡಿ ಸಂಗಣ್ಣ ಪತ್ರ | ಜಿಲ್ಲೆಯ ಬಹುತೇಕ ಕಾಮಗಾರಿಯಲ್ಲಿ ಅವ್ಯವಹಾರ
ಕೊಪ್ಪಳ:
ಬರಗಾಲದ ಅವಧಿಯಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ೨೦೧೮-೧೯ ಹಾಗೂ ೨೦೧೯-೨೦ರ ಸಾಲಿನಲ್ಲಿ ನಡೆದಿರುವ ಮಹತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯ ಕಾಮಗಾರಿಗಳಲ್ಲಿ ಭಾರೀ ಅವ್ಯವಹಾರವಾಗಿದೆ ಎಂದು ನಮಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಸಮಗ್ರ ತನಿಖೆ ನಡೆಸಿ ಅಕ್ರಮ ಎಸಗಿದ ಅಧಿಕಾರಿಗಳು, ಖಾಸಗಿ ಏಜೆನ್ಸಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲೋಕಸಭಾ ಸದಸ್ಯರಾದ ಸಂಗಣ್ಣ ಕರಡಿಯವರು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಸಂಸದರು, ಜಿಲ್ಲೆಯ ನಾಲ್ಕೂ ತಾಲೂಕುಗಳು ಬರದಿಂದ ತತ್ತರಿಸಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಡಿ ಬರುವ ನರೇಗಾ ಯೋಜನೆಯಡಿ ೨೦೧೯-೨೦ರ ಸಾಲಿನ ಮಾಹಿತಿಯಂತೆ ಒಟ್ಟು ಅಂದಾಜು ೧೫೧೭.೮೪ ಲಕ್ಷ ಅನುದಾನ ನಮ್ಮ ಜಿಲ್ಲೆಗೆ ಬಳಕೆಯಾಗಿದ್ದು, ಆದರೆ ಇಷ್ಟೊಂದು ಅನುದಾನ ಬಳಕೆಯಾಗಿರುವುದು ಮೇಲ್ನೋಟಕ್ಕೆ ಅನುಮಾನ ಮೂಡಿಸಿದೆ. ಇದರಲ್ಲಿ ಸಾಕಷ್ಟು ಅನುದಾನ ಸಂಬಂಧಪಟ್ಟ ಗುತ್ತಿಗೆದಾರರಿಗೆ ಮತ್ತು ಖಾಸಗಿ ಏಜೆನ್ಸಿಗಳಿಗೆ ಬಳೆಕಯಾದ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಸದರಿ ಯೋಜನೆಗಳಿಗೆ ಸಂಬಂಧಿಸಿದಂತೆ ೨೦೧೮-೧೯ ಹಾಗೂ ೨೦೧೯-೨೦ನೇ ಸಾಲಿನಲ್ಲಿ ಯಾರ ಯಾರ ಖಾಸಗಿ ಏಜೆನ್ಸಿಗಳಿಗೆ ಮತ್ತು ಗುತ್ತಿಗೆದಾರರಿಗೆ ಎಷ್ಟೆಷ್ಟು ಅನುದಾನ ಮಂಜೂರಿಯಾಗಿದೆ? ಈ ಕಾಮಗಾರಿಗಳು ತೃಪ್ತಿಕರವಾಗಿ ನಡೆದಿವೆಯೆ? ಅಥವಾ ನಡೆದಿಲ್ಲವೆ ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಿ ಇದರಲ್ಲಿ ಶಾಮೀಲಾಗಿರುವ ಎಲ್ಲಾ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ಹಾಗೂ ಅಧಿಕಾರಿಗಳು ಕಾಮಗಾರಿಗಳನ್ನು ಸರಿಯಾಗಿ ವೀಕ್ಷಣೆ ಮಾಡದೇ ಕಮಿಷನ್ ಆಸೆಗೋಸ್ಕರ ಕಂಪ್ಯೂಟರ್‌ನಲ್ಲಿ ಅಧಿಕಾರಿಗಳು ಹೆಬ್ಬೆರಳಿನ ಗುರುತನ್ನು ಹಾಕಿ ಹಣ ಪಾವತಿ ಮಾಡಿದ್ದಾರೆ ಎಂಬ ಬಗ್ಗೆ ನಮಗೆ ಮಾಹಿತಿ ಬಂದಿವೆ. ಇದಲ್ಲದೆ ಮೇಲಧಿಕಾರಿಗಳು ಕೂಡ ಯಾವುದನ್ನೂ ಪರಿಶೀಲಿಸದೇ ಇದೇ ರೀತಿ ಪಾವತಿ ಮಾಡಿದ್ದಾರೆ. ಇಲ್ಲಿ ನೆಪಮಾತ್ರಕ್ಕೆ ಕೆಲ ಗುತ್ತಿಗೆದಾರರ ವಿವರ ಮತ್ತು ಕಚ್ಚಾ ಸಾಮಗ್ರಿಯ ಮಾಹಿತಿ ನೀಡಲಾಗಿದೆ. ಇನ್ನುಳಿದಂತೆ ಕಾರ್ಮಿಕರ ಹಣ ಪಾವತಿ ಬಗ್ಗೆ ತಾವುಗಳು ಪತ್ತೆ ಹಚ್ಚಬೇಕು. ಅಲ್ಲದೆ ಈ ಕಾಮಗಾರಿಗಳಿಗೆ ಸಂಬಂಧಿಸಿದ ಕಾರ್ಮಿಕರು ಯಾರು? ಅವರು ಸದರಿ ಈ ಎಲ್ಲಾ ಕಾಮಗಾರಿಗಳಲ್ಲಿ ಕೆಲಸ ಮಾಡಿದ್ದಾರೆಯೇ? ಮಾಡಿದ್ದರೆ ಆ ವೇಳೆ ಫೊಟೋ ಮತ್ತು ಜಾಬ್‌ಕಾರ್ಡ್ ಪರಿಶೀಲನೆ ಮಾಡಬೇಕು.
ಕ್ರ.ಮ.ಸಂ. ತಾಲೂಕು ಪಾವತಿಯಾದ ಹಣ(ಲಕ್ಷ ರೂಗಳಲ್ಲಿ)
೧ ಗಂಗಾವತಿ ೬೯೦.೨೮
೨ ಕೊಪ್ಪಳ ೧೦೧.೪೮
೩ ಕುಷ್ಟಗಿ ೬೮೫.೬೪
೪ ಯಲಬುರ್ಗಾ ೦೪೦.೪೩
ಒಟ್ಟು ಅನುದಾನ ೧೫೧೭.೮೪
ಈ ಮೇಲಿನ ಅಷ್ಟೂ ಕಾಮಗಾರಿಯ ಶೇ. ೮೦ರಷ್ಟು ಈ ಕೂಡಲೇ ಕಾಮಗಾರಿಗಳನ್ನು ಖುದ್ದಾಗಿ ಸ್ಥಳ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕೈಗೊಳ್ಳಬೇಕು ಮತ್ತು ಸರ್ಕಾರದ ಈ ಹಣವನ್ನು ಮರುಪಾವತಿ ಮಾಡಿಕೊಳ್ಳಬೇಕು ಎಂದು ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.

Please follow and like us:
error