ನಮ್ಮ ಗ್ರಾಮ-ನಮ್ಮ ರಸ್ತೆ ಶಾಸಕರಿಂದ ಭೂಮಿ ಪೂಜೆ

ಕೊಪ್ಪಳ:೧೯, ಕ್ಷೇತ್ರದ ಹಳೆಕನಕಾಪೂರ, ಬೇವಿನಹಳ್ಳಿ ಹಾಗೂ ಲಿಂಗದಳ್ಳಿ ಗ್ರಾಮಗಳಲ್ಲಿ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿಯಲ್ಲಿ ರೂ.೫ ಕೋಟಿ ೭೬ ಲಕ್ಷದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳರವರು ಕ್ಷೇತ್ರದಲ್ಲಿ ಈ ನಾಲ್ಕುವರೆ ವರ್ಷದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಂತ ಹಂತವಾಗಿ ಎಲ್ಲಾ ಗ್ರಾಮಗಳಿಗೆ ತಲುಪಿದ್ದು ತೃಪ್ತಿ ತಂದಿದೆ. ಪ್ರತಿ ಗ್ರಾಮಕ್ಕೆ ಚುನಾವಣಾ ಪೂರ್ವದಲ್ಲಿ ನಾವು ನೀಡಿದ ಆಶ್ವಾಸನೆಗಳಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯನವರು ಸುಮಾರು ೧೮ ನೂರು ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಹಿಂದಿನ ೨೦ ವರ್ಷದಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಇಷ್ಟು ಅನುದಾನ ಮಂಜೂರಾಗಿದ್ದು ಇತಿಹಾಸವಾಗಿದೆ. ಬರುವ ಆರ್ಥಿಕ ವರ್ಷದಲ್ಲಿ ಇನ್ನೂ ಹೆಚ್ಚಿನ ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಲಾಗುವದು. ಬಾಕಿ ಉಳಿದಿರುವ ಕ್ಷೇತ್ರದ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಕೈಗೊಂಡು ಕೊಪ್ಪಳ ಕ್ಷೇತ್ರವನ್ನು ಮಾದರಿಯ ಕ್ಷೇತ್ರವನ್ನಾಗಿ ಮಾಡುವದೇ ನನ್ನ ಗುರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಬಂಡಿಹರ್ಲಾಪೂರ ಗ್ರಾ.ಪಂ.ಅಧ್ಯಕ್ಷ ರೇಣುಕಮ್ಮ ಕಟಿಗಿ, ಬೇವಿನಹಳ್ಳಿ ಗ್ರಾ.ಪಂ.ಸಧ್ಯಕ್ಷ ಗಂಗಮ್ಮ ವಡ್ಡರ, ತಾ.ಪಂ.ಸದಸ್ಯರುಗಳಾದ ಮೂರ್ತಿ ಹಿಟ್ನಾಳ, ಅಂದಿಗಾಲಪ್ಪ, ಎ.ಪಿ.ಎಂ.ಸಿ. ಸದಸ್ಯರುಗಳಾದ ವೆಂಕನಗೌಡ್ರ ಹಿರೇಗೌಡ್ರ, ವಿಶ್ವನಾಥ ರಾಜೂರ, ಮುಖಂಡರುಗಳಾದ ವೆಂಕಟೇಶ ಕಂಪಸಾಗರ, ಚನ್ನಕೃಷ್ಣ, ದೇವಪ್ಪ ಮೆಕಾಳಿ, ರೂಪ್ಲಾ ನಾಯಕ, ಶಿವು ಬಾಬು, ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.