ನಗರ ಸ್ಥಳೀಯ ಸಂಸ್ಥೆ ಚುನಾವಣೆ ಜಿಲ್ಲಾಡಳಿತ ಸಕಲ ಸಜ್ಜು -ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ 


ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : ೧೦೩ ಸ್ಥಾನಗಳಿಗೆ ೩೭೪ ಅಭ್ಯರ್ಥಿಗಳು
Koppal News : ಕೊಪ್ಪಳ ಜಿಲ್ಲೆಯ ಕೊಪ್ಪಳ ಮತ್ತು ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿ ಸೇರಿದಂತೆ ಒಟ್ಟು ೦೪ ನಗರ ಸ್ಥಳೀಯ ಸಂಸ್ಥೆಗಳ ೧೦೩ ಸ್ಥಾನಗಳಿಗಾಗಿ ೩೭೮೪ ಅಭ್ಯರ್ಥಿಗಳು ಕಣದಲ್ಲಿದ್ದು, ಆ. ೩೧ ರಂದು ನಡೆಯುವ ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ.
ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ೨೩ ವಾರ್ಡ್‌ಗಳ ಪೈಕಿ ವಾರ್ಡ್ ಸಂಖ್ಯೆ ೧೯ ರಲ್ಲಿ ಕೇವಲ ಒಬ್ಬ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಈ ವಾರ್ಡ್‌ಗೆ ಅವಿರೋಧ ಆಯ್ಕೆ ಆದಂತಾಗಿದೆ.
ವಾರ್ಡ್ ಸಂಖ್ಯೆ ಹಾಗೂ ಮತಗಟ್ಟೆಗಳು : ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ೧೦೪ ವಾರ್ಡ್‌ಗಳಿದ್ದು, ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ವಾರ್ಡ್ ಸಂಖ್ಯೆ ೧೯ ರಲ್ಲಿ ಅವಿರೋಧ ಆಯ್ಕೆಯಾಗಿರುವುದರಿಂದ, ೧೦೩ ವಾರ್ಡ್‌ಗಳಲ್ಲಿ ಚುನಾವಣೆ ನಡೆಯಲಿದೆ. ಇದಕ್ಕಾಗಿ ಒಟ್ಟು ೧೯೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೩೧ ವಾರ್ಡ್‌ಗಳಿದ್ದು, ಇಲ್ಲಿ ೬೧ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ೩೫ ವಾರ್ಡ್‌ಗಳಿದ್ದು, ೯೩ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಕುಷ್ಟಗಿ ಪುರಸಭೆಯಲ್ಲಿ ಒಟ್ಟು ೨೩ ವಾರ್ಡ್‌ಗಳಿದ್ದು, ಇಲ್ಲಿ ೨೨ ವಾರ್ಡ್‌ಗಳಲ್ಲಿ ಮಾತ್ರ ಮತದಾನ ನಡೆಯಲಿದೆ. ಒಟ್ಟು ೨೭ ಮತಗಟ್ಟೆಗಳಿವೆ. ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ೧೫ ವಾರ್ಡ್‌ಗಳಿದ್ದು, ೧೫ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
೯೪೧ ಸಿಬ್ಬಂದಿ ನೇಮಕ : ಕೊಪ್ಪಳ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಿಮಿತ್ಯ ಮತದಾನ ಪ್ರಕ್ರಿಯೆ ಸುಗಮವಾಗಿ ಜರುಗಿಸಲು ಅನುಕೂಲವಾಗುವಂತೆ ಪ್ರತಿ ಮತಗಟ್ಟೆಗೆ ತಲಾ ಒಬ್ಬರು ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ ಇಬ್ಬರು ಮತಗಟ್ಟೆ ಸಹಾಯಕರನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೧೯೬ ಮತಗಟ್ಟೆಗಳಿಗೆ ೯೪೧ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ೩೧ ವಾರ್ಡ್‌ಗಳಿಗೆ ೬೧ ಮತಗಟ್ಟೆಗಳಿದ್ದು, ಒಟ್ಟು ೨೯೨ ಸಿಬ್ಬಂದಿ ನೇಮಿಸಲಾಗಿದೆ. ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ೩೫ ವಾರ್ಡ್‌ಗಳಿಗೆ ೯೩ ಮತಗಟ್ಟೆಗಳಿದ್ದು, ಒಟ್ಟು ೪೪೭ ಸಿಬ್ಬಂದಿ. ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ೨೨ ವಾರ್ಡ್‌ಗಳಿಗೆ ೨೭ ಮತಗಟ್ಟೆಗಳಿದ್ದು, ೧೩೦ ಸಿಬ್ಬಂದಿ. ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ೧೫ ವಾರ್ಡ್‌ಗಳಿಗೆ ೧೫ ಮತಗಟ್ಟೆಗಳಿದ್ದು, ಒಟ್ಟು ೭೨ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
೯೧ ವಾಹನಗಳ ಬಳಕೆ : ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಆ. ೩೧ ರಂದು ಜರುಗುವ ಮತದಾನ ಕಾರ್ಯಕ್ಕಾಗಿ ೫೯- ಕ್ರೂಸರ್, ೩೨- ಜೀಪ್ ಸೇರಿದಂತೆ ಒಟ್ಟು ೯೧ ವಾಹನಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೊಪ್ಪಳ ನಗರಸಭೆ ಚುನಾವಣೆಗೆ ೨೦ ಕ್ರೂಸರ್, ೦೮- ಜೀಪ್, ಒಟ್ಟು ೨೮ ವಾಹನಗಳು. ಗಂಗಾವತಿ ನಗರಸಭೆ ವ್ಯಾಪ್ತಿಗೆ ೨೩ ಕ್ರೂಸರ್, ೧೫- ಜೀಪ್, ಒಟ್ಟು ೩೮ ವಾಹನಗಳು. ಕುಷ್ಟಗಿ ಪುರಸಭೆ ವ್ಯಾಪ್ತಿಗೆ ೧೦ ಕ್ರೂಸರ್, ೦೨- ಜೀಪ್, ಒಟ್ಟು ೧೨ ವಾಹನಗಳು. ಯಲಬುರ್ಗಾ ಪ.ಪಂ. ವ್ಯಾಪ್ತಿಗೆ ೦೬- ಕ್ರೂಸರ್, ೦೭- ಜೀಪ್ ಸೇರಿದಂತೆ ಒಟ್ಟು ೧೩ ವಾಹನಗಳನ್ನು ಬಳಸಲಾಗುತ್ತಿದೆ.
ಮತದಾರರ ವಿವರ : ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪುರುಷ- ೮೮೧೨೮, ಮಹಿಳೆ- ೮೯೬೫೮ ಹಾಗೂ ಇತರೆ ೧೨ ಸೇರಿದಂತೆ ಒಟ್ಟು ೧೭೭೭೯೮ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಪುರುಷ- ೩೦೫೩೪, ಮಹಿಳೆ-೩೦೯೩೫ ಹಾಗೂ ಇತರೆ-೦೬ ಸೇರಿದಂತೆ ಒಟ್ಟು ೬೧೪೭೫ ಮತದಾರರಿದ್ದಾರೆ. ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಪುರುಷ- ೪೧೫೪೮, ಮಹಿಳೆ-೪೨೨೪೮ ಹಾಗೂ ಇತರೆ-೦೧ ಸೇರಿದಂತೆ ಒಟ್ಟು ೮೩೭೯೭ ಮತದಾರರಿದ್ದಾರೆ. ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ಪುರುಷ- ೧೦೬೩೫, ಮಹಿಳೆ-೧೦೭೫೯ ಹಾಗೂ ಇತರೆ-೦೪ ಸೇರಿದಂತೆ ಒಟ್ಟು ೨೧೩೯೮ ಮತದಾರರಿದ್ದಾರೆ. ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಪುರುಷ- ೫೪೧೧, ಮಹಿಳೆ-೫೭೧೬ ಹಾಗೂ ಇತರೆ-೦೧ ಸೇರಿದಂತೆ ಒಟ್ಟು ೧೧೧೨೮ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಇವಿಯಂ ಯಂತ್ರ ಬಳಕೆ : ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಈ ಬಾರಿ ವಿದ್ಯುನ್ಮಾನ ಮತ ಯಂತ್ರಗಳನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಕಳೆದ ಮೇ ತಿಂಗಳಿನಲ್ಲಿ ಜರುಗಿದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಳಸಲಾದ ವಿವಿ ಪ್ಯಾಟ್ ಯಂತ್ರವನ್ನು ಸ್ಥಳೀಯ ಸಂಸ್ಥೆ ಚುನಾವಣೆಗೆ ಬಳಸಲಾಗುತ್ತಿಲ್ಲ. ಆದರೆ ವಿದ್ಯುನ್ಮಾನ ಮತಯಂತ್ರದಲ್ಲಿ ಈ ಬಾರಿ ‘ನೋಟಾ’ ಬಟನ್ ಬಳಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಜರುಗುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ತಲಾ ೨೩೭ ಬ್ಯಾಲೆಟ್ ಯುನಿಟ್ ಹಾಗೂ ಕಂಟ್ರೋಲ್ ಯುನಿಟ್ ಉಪಯೋಗಿಸಲಾಗುತ್ತದೆ. ಕೊಪ್ಪಳ- ೭೪ ಬ್ಯಾಲೆಟ್ ಯುನಿಟ್ ಹಾಗೂ ಕಂಟ್ರೋಲ್ ಯುನಿಟ್. ಗಂಗಾವತಿ- ೧೧೧, ಕುಷ್ಟಗಿ- ೩೪ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ೧೮ ಬ್ಯಾಲೆಟ್ ಯುನಿಟ್ ಹಾಗೂ ೧೮- ಕಂಟ್ರೋಲ್ ಯುನಿಟ್ ಬಳಸಲಾಗುತ್ತದೆ.
ಕೊಪ್ಪಳ ಜಿಲ್ಲೆಯಲ್ಲಿ ನಗರ, ಸ್ಥಳೀಯ ಸಂಸ್ಥೆ ಚುನಾವಣೆ ನಿಮಿತ್ಯ ಆ. ೩೧ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೦೫ ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತಗಳ ಎಣಿಕೆ ಆಯಾ ತಾಲೂಕು ಕೇಂದ್ರದಲ್ಲಿ ಸೆ. ೦೩ ರಂದು ನಡೆಯಲಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಎಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು, ಸಾರ್ವಜನಿಕರು, ಜನಪ್ರತಿನಿಧಿಗಳು ಸುಗಮ ಚುನಾವಣೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್   ತಿಳಿಸಿದ್ದಾರೆ.

Please follow and like us: