ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕ್ರೀಮಿನಲ್ ಪ್ರಕರಣ ದಾಖಲಿಸಿ: ಪಿ. ಸುನೀಲ್ ಕುಮಾರ್


ಕೊಪ್ಪಳ ಡಿ. ೧೭ : ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಸೌಲಭ್ಯಗಳನ್ನು ಪಡೆದುಕೊಳ್ಳಲು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವವರ ವಿರುದ್ಧ ಕ್ರೀಮಿನಲ್ ಪ್ರಕರಣವನ್ನು ದಾಖಲಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಆಯೋಜಿಸಲಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ನಿಯಂತ್ರಣ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟರಿಗೆ ಸರ್ಕಾರದ ವತಿಯಿಂದ ಕೃಷಿ ಜಮೀನುಗಳು ಮಂಜೂರು ಆಗಿದ್ದು, ಅಂತಹ ಫಲಾನುಭಿಗಳಿಗೆ ಕೂಡಲೇ ತಹಶೀಲ್ದಾರರು ಪಹಣಿಯನ್ನು ನೀಡಬೇಕು. ಸಮಾಜ ಕಲ್ಯಾಣ ಇಲಾಖೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ನೀಡುವ ಸರ್ಕಾರದ ಸೌಲಭ್ಯಗಳಲ್ಲಿ ಕೆಲ ಯೋಜನೆಗಳಡಿ ಕಳೆದ ಬಾರಿಯ ಶಾಸಕರು ಕೆಲ ಫಲಾನುಭವಿಗಳನ್ನು ಆಯ್ಕೆ ಮಾಡದಿರುವುದು ಕಂಡುಬಂದಲ್ಲಿ, ಪ್ರಸ್ತುತ ಇರುವ ಶಾಸಕರ ಮೂಲಕವೇ ಹಳೆಯ ಫಲಾನುಭವಿಗಳನ್ನು ಸಹ ಆಯ್ಕೆ ಮಾಡಲು ಅನುಮತಿ ನೀಡುವಂತೆ ಕೋರಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿ. ಎಸ್.ಸಿ., ಎಸ್.ಟಿ. ಜನಾಂಗದ ಮೇಲಾದ ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ಶೀಘ್ರ ಪರಿಹಾರ ದೊರಕಿಸಿ ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆ ನೀಡಬೇಕು. ಈ ಕುರಿತು ಪೊಲೀಸ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ದೌರ್ಜನ್ಯಕ್ಕೊಳಗಾದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಫಲಾನುಭವಿಗಳಿಗೆ ಪರಿಹಾರ ಧನವು ತ್ವರಿತಗತಿಯಲ್ಲಿ ನೀಡಬೇಕು. ಪರಿಶಿಷ್ಟರಿಗೆ ಇರುವ ವಸತಿ ಸೌಲಭ್ಯ, ಅಕ್ರಮ ಸಕ್ರಮ ಯೋಜನೆಯಡಿ ಹಕ್ಕುಪತ್ರ ವಿತರಣೆ, ಕೃಷಿ ಭೂಮಿ, ಪಹಣಿ ಹಂಚಿಕೆ ಇತ್ಯದಿ ಸರ್ಕಾರಿ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಅಲ್ಲದೇ ದೌರ್ಜನಕ್ಕೊಳಗಾದವರಿಗೆ ಮೊದಲ ಆಧ್ಯತೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಶ್ರಮೀಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸೂಚನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ನಿಯಂತ್ರಣ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಬಿ. ಕಲ್ಲೇಶ ಅವರು ಮಾತನಾಡಿ, ಪ್ರಸಕ್ತ ವರ್ಷದ ಜನೇವರಿ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರ ಮೇಲೆ ಒಟ್ಟು ೪೯ ದೌರ್ಜನ್ಯ ಪ್ರಕರಣಗಳು ನಡೆದಿವೆ. ಜಾತಿ ನಿಂದನೆ, ಜೀವ ಬೆದರಿಕೆ, ಹೊಡೆದಾಟ, ಅತ್ಯಾಚಾರ, ಆತ್ಮಹತ್ಯೆ ಹಾಗೂ ಹಲ್ಲೆ ಸೇರಿದ ಈ ಎಲ್ಲಾ ಪ್ರಕರಣಗಳು ಸಂಬಧಿಸಿದ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಇವುಗಳಲ್ಲಿ ೩೭ ಪ್ರಕರಣಗಳಿಗೆ ಒಟ್ಟು ೩೯ ಲಕ್ಷ ರೂಗಳ ಪರಿಹಾರ ಮೊತ್ತವನ್ನು ಮಂಜೂರಿಸಲಾಗಿದೆ. ಇನ್ನುಳಿದ ೧೨ ಪ್ರಕರಣಗಳಲ್ಲಿ ೧೪ ಜನರಿಗೆ ಪರಿಹಾರ ನೀಡಬೇಕಾಗಿದ್ದು, ಈ ಪೈಕಿ ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಾದ ಜಾತಿ ನಿಂದನೆ ಒಂದು ಪ್ರಕರಣದಲ್ಲಿ ಮೂರು ಜನರಿಗೆ ಪರಿಹಾರ ಸಿಗಬೇಕಿದೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಗೇದಾಳ ಗ್ರಾಮದಲ್ಲಿ ಒಂದು ಕೊಲೆ ಪ್ರಕರಣವಾಗಿದ್ದು, ಮೃತರಾದ ಬಸವರಾಜ ತಂದೆ ಯಲಪ್ಪ ಬಣಕಾರ ಅವರ ತಾಯಿ ಶಾಂತವ್ವ ಬಣಕಾರ ಅವರ ಖಾತೆಗೆ ರೂ. ೮೨೫೦೦೦/- ಪರಿಹಾರ ಧನ ನೀಡಲಾಗಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣಕ್ಕೆ ರೂ. ೨೦೦೦೦/-ಗಳ ಪರಿಹಾರ ನೀಡಬೇಕಾಗಿದೆ. ಒಟ್ಟು ೪೯ ದೌರ್ಜನ್ಯ ಪ್ರಕರಣಗಳಲ್ಲಿ ೧೩ ಅತ್ಯಚಾರ, ಒಂದು ಅತ್ಯಾಚಾರಕ್ಕೆ ಯತ್ನ, ಒಂದು ಆತ್ಮಹತ್ಯೆ, ಮತ್ತು ಉಳಿದ ಜಾತಿ ನಿಂದನೆ, ಹಲ್ಲೆ, ಹೊಡೆದಾಟ ಪ್ರಕರಣಗಳಾಗಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್, ಕೊಪ್ಪಳ ತಹಶೀಲ್ದಾರ ಜೆ.ಬಿ. ಮಜ್ಗಿ, ಯಲಬುರ್ಗಾ ತಹಶೀಲ್ದಾರ ರಮೇಶ ಅಳವಂಡಿಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ದೌರ್ಜನ್ಯ ನಿಯಂತ್ರಣ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಮಾರುತಿ ಎಂ. ಚಾಮಲಾಪುರ, ರಾಮಣ್ಣ ದುರಗಪ್ಪ ಕಂದಾರಿ, ಆರತಿ ತಿಪ್ಪಣ್ಣ ಡಿ.ಹೆಚ್., ಶಿವಮೂರ್ತಿ ಎಸ್. ಗುತ್ತುರು, ಯಮನೂರಪ್ಪ ಸಿಂಗನಾಳ, ಆನಂದ ಹಳ್ಳಿಗುಡಿ ಮತ್ತಿತರರು ಉಪಸ್ಥಿತರಿದ್ದರು.

Please follow and like us:
error