You are here
Home > Koppal News > ದೈಹಿಕ ಸದೃಡತೆಗೆ ಕ್ರೀಡೆ ಅತ್ಯವಶ್ಯಕ – ಕೆ. ರಾಘವೇಂದ್ರ ಹಿಟ್ನಾಳ್

ದೈಹಿಕ ಸದೃಡತೆಗೆ ಕ್ರೀಡೆ ಅತ್ಯವಶ್ಯಕ – ಕೆ. ರಾಘವೇಂದ್ರ ಹಿಟ್ನಾಳ್

: ಮನುಷ್ಯನ ಆರೋಗ್ಯ ಸ್ಥೀರತೆ, ಮಾನಸಿಕ ಹಾಗೂ ದೈಹಿಕ ಸದೃಡತೆಗೆ ಕ್ರೀಡೆ ಅತ್ಯವಶ್ಯಕವಾಗಿದೆ. ಪ್ರತಿಯೊಬ್ಬರೂ ಕ್ರೀಡಾಸಕ್ತಿ ಬೆಳಸಿಕೊಳ್ಳಬೇಕು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಮಳೆಮಲ್ಲೇಶ್ವರ ದೇವಸ್ಥಾನ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರದಂದು ಏರ್ಪಡಿಸಲಾಗಿದ್ದ “ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ” ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಪೀಳಿಗೆಯ ಜನರ ಆಯುಷ್ಯ ಹೆಚ್ವಾಗಿತ್ತು. ಇದಕ್ಕೆ ಮುಖ್ಯ ಕಾರಣವೆಂದರೆ ಅವರು ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದರು. ಇಂದಿನ ಯುವಕರೆ ಈ ನಾಡಿನ ಭವ್ಯ ಪ್ರಜೆಗಳಾಗಿದ್ದಾರೆ ಎಂದು ರಾಷ್ಟ್ರ ಪಿತ ಮಹಾತ್ಮಾ ಗಾಂಧಿಜೀ ಅವರು ಹೇಳಿದ್ದು, ಸರಕಾರವು ಶಿಕ್ಷಣಕ್ಕೆ ಕೊಡುತ್ತಿರುವ ಪ್ರಾಮುಖ್ಯತೆಯನ್ನು ಕ್ರೀಡೆಗೂ ಸಹ ನೀಡುತ್ತಿದೆ. ಅದಕ್ಕೆ ಸಾಕಷ್ಟು ಅನುದಾನವನ್ನೂ ನೀಡುತ್ತಿದೆ. ಯುವಕರು ಕ್ರೀಡೆಯಲ್ಲಿ ತಮ್ಮನ್ನುತಾವು ಸಕ್ರೀಯವಾಗಿ ತೊಡಗಿಸಿಕೊಂಡು ದೈಹಿಕ ಸದೃಡತೆ ಮತ್ತು ಉತ್ತಮ ಆರೋಗ್ಯವಂತರಾಗುವುದರ ಜೋತೆಗೆ ಕ್ರೀಡಾಸಕ್ತಿ ಬೆಳಸಿಕೊಂಡು ಕ್ರೀಡೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು. ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯ ಹವ್ಯಾಸಗಳನ್ನು ಬೇಳಸಿಕೊಳ್ಳಿ. ಪಾಲಕರು, ಶಿಕ್ಷಕರು ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕು.
ಕ್ರೀಡೆಯಲ್ಲಿ ಸೋಲು – ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಒಂದು ವೇಳೆ ಕ್ರೀಡೆಯಲ್ಲಿ ಸೋಲು ಅನುಭವಿಸಿದರು ಸಹ ಬೇಸರ ಪಡುವ ಅವಶ್ಯಕತೆ ಇಲ್ಲ. ಏಕೆಂದರೆ ಮುಂದೆ ಗೆಲ್ಲಲೇಬೇಕೆಂಬ ಛಲ ತೆಗೆದುಕೊಳ್ಳಲು ಆ ಸೋಲು ಮುಂದೆ ಗೆಲುವಿಗೆ ನಾಂದಿಯಾಗುತ್ತದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉತ್ತಮ ಕ್ರೀಡಾ ಪ್ರದರ್ಶನ ಮಾಡಿ, ನಾಡಿನ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸುವಂತೆ ಕ್ರೀಡಾ ಪಟುಗಳು ಉತ್ತಮ ಪ್ರದರ್ಶನ ಮಾಡಬೇಕೆಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಕರೆ ನೀಡಿದರು.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ ಖಾದ್ರಿ ಅವರು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಕ್ರೀಡಾ ಧ್ವಜಾರೋಹಣವನ್ನು ನೆರೆವೇರಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವೈ, ಸುದರ್ಶನರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ. ದಾಸರ್, ಗಣ್ಯರಾದ ಸುರೇಶ ಭೂವರೆಡ್ಡಿ ಸೇರಿದಂತೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಶಿವಪ್ಪ, ಶರಣೆಗೌಡರ ಹಾಗೂ ಮಂಜುನಾಥ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮುಖ್ಯಸ್ಥರಾದ ವಿರುಪಾಕ್ಷಪ್ಪ ಅವರು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು. ನಂತರ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಗುಂಡು ಎಸೆಯುವುದರ ಮೂಲಕ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

 

Top