ದೇಶ ನಿರ್ಮಾಣದಲ್ಲಿ ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆ ಮಹತ್ವದ್ದು- ವೆಂಕಟ್ ರಾಜಾ

ಸದೃಢ ಭಾರತ ದೇಶ ನಿರ್ಮಾಣದಲ್ಲಿ ಯುವಕರು ಸಕ್ರಿಯರಾಗಿ ಪಾಲ್ಗೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್‍ರಾಜಾ ಅವರು ಹೇಳಿದರು.
ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತ ದೇಶ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ದೇಶದ ಭವಿಷ್ಯ ರೂಪುಗೊಳ್ಳುವುದು ಚುನಾವಣೆಯಲ್ಲಿಯೇ ಆಗಿದೆ. ಜ. 01 ಕ್ಕೆ 18 ವರ್ಷ ವಯಸ್ಸು ಪೂರ್ಣಗೊಂಡವರು ತಪ್ಪದೆ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸುವುದು ಅಗತ್ಯವಾಗಿದೆ. ಸರ್ಕಾರದ ಕೆಲಸ ದೇವರ ಕೆಲಸವಾದರೆ, ಮತದಾನದ ಕೆಲಸ ಅದಕ್ಕೂ ಮಿಗಿಲಾದುದಾಗಿದೆ. ಯುವ ಪೀಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕೆ ಮಹತ್ವ ಕೊಟ್ಟ ರೀತಿಯಲ್ಲಿಯೇ ಮತದಾನ ಪ್ರಕ್ರಿಯೆಗೂ ಮಹತ್ವ ನೀಡಬೇಕು. ಮತದಾರರ ಜಾಗೃತಿಗಾಗಿ ಜ. 27 ರಂದು ಕೊಪ್ಪಳದ ಗವಿಸಿದ್ದೇಶ್ವರ ಮಠದ ಮೈದಾನದಲ್ಲಿ ಬೃಹತ್ ರ್ಯಾಲಿ ಏರ್ಪಡಿಸಲಾಗಿದ್ದು, ಅಂದು ಸುಮಾರು 5 ಸಾವಿರ ವಿದ್ಯಾರ್ಥಿಗಳಿಂದ 300 * 200 ಅಡಿ ಉದ್ದಗಲದಲ್ಲಿ ಭಾರತದ ನಕ್ಷೆ ಹಾಗೂ ಕರ್ನಾಟಕದ ನಕ್ಷೆಯನ್ನು ಮಾನವ ಸರಪಳಿಯ ಮೂಲಕ ನಿರ್ಮಿಸಿ, ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು, ಸಾರ್ವಜನಿಕರು, ನಾಗರಿಕರು ತಪ್ಪದೆ ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್‍ರಾಜಾ ಮನವಿ ಮಾಡಿದರು.
ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಮಾರಂಭದ ಉದ್ಘಾಟನೆ ನೆರವೇರಿಸಿ, ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ನಾವು, ದೇಶದಲ್ಲಿ ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುವ, ಚುನಾವಣೆಗಳಲ್ಲಿ ನಿರ್ಭೀತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ, ಮತ ಚಲಾಯಿಸುತ್ತೇವೆ ಎನ್ನುವ ಮತದಾರರ ಪ್ರತಿಜ್ಞಾ ವಿಧಿ ಭೋದಿಸಿದರು.
ಕಾರ್ಯಕ್ರಮ ಕುರಿತು ಮಾತನಾಡಿದ ಉಪವಿಭಾಗಾಧಿಕಾರಿ ರವಿ ತಿರ್ಲಾಪುರ ಅವರು, ಜ. 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯ ಜೊತೆಗೆ ಚುನಾವಣಾ ಆಯೋಗದ ಸಂಸ್ಥಾಪನಾ ದಿನವೂ ಆಗಿದೆ. ದೇಶ ಪ್ರಗತಿಯ ಹಾದಿಯಲ್ಲಿ ಬರಲು ಪ್ರಜಾಪ್ರಭುತ್ವದ ಬುನಾದಿ ಗಟ್ಟಿಯಾಗಿರಬೇಕು. ಮತದಾನ ಎಂಬುದು ಶ್ರೇಷ್ಠ ಕರ್ತವ್ಯವಾಗಿದೆ. ಮುಕ್ತ, ನ್ಯಾಯ ಸಮ್ಮತ ಚುನಾವಣೆಗೆ ಮತದಾರರು ಜಾಗೃತಿ ಹೊಂದಲೇಬೇಕು. ಚುನಾವಣೆ ಪದ್ಧತಿ ಇನ್ನಷ್ಟು ಬಲಗೊಳ್ಳಬೇಕು. ಪ್ರತಿ ವರ್ಷ ಜ. 01 ಕ್ಕೆ 18 ವರ್ಷ ವಯಸ್ಸು ಪೂರ್ಣಗೊಳ್ಳುವವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಬೇಕು, ಆದರೆ ಈ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶದ ಮತದಾನ ಪ್ರಮಾಣ ಹೋಲಿಸಿದಾಗ, ನಗರವಾಸಿಗಳೂ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳದಿರುವುದು ಕಂಡುಬಂದಿದೆ. ಇದು ಸಮಂಜಸವಲ್ಲ. ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲು ಸಾಧ್ಯ ಎಂದರು.
ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಪ್ರಭುರಾಜ ನಾಯಕ್ ಅವರು, ಭಾರತ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದರೂ, ಚುನಾವಣೆ ಸಂದರ್ಭದಲ್ಲಿ ಕಡಿಮೆ ಪ್ರಮಾಣದ ಮತದಾನ ದಾಖಲಾಗುತ್ತಿರುವುದು ಕಳವಳಕಾರಿಯಾಗಿದೆ. ಇಟಲಿ ದೇಶದಲ್ಲಿ ಶೇ. 90, ಜರ್ಮನಿ- 86, ಆಸ್ಟ್ರಿಯಾ- 81, ಜಪಾನ್-71 ರಷ್ಟು ಮತದಾನವಾದರೆ, ಭಾರತದಲ್ಲಿನ ಮತದಾನ ಪ್ರಮಾಣ ಸರಾಸರಿ ಶೇ. 55 ರಷ್ಟಿದೆ. ಭಾರತ ಕೇವಲ ಅಂಕಿ-ಸಂಖ್ಯೆಯ ಪ್ರಜಾಪ್ರಭುತ್ವವಾಗಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನವಾದ ಹಕ್ಕಿದೆ. ಆದರೆ ದೇಶದಲ್ಲಿ ಹಣ ಬಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜಗತ್ತು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಬಹಳಷ್ಟು ನಿರೀಕ್ಷೆ ಮಾಡುತ್ತಿದೆ. ಅನೇಕ ದೇಶಗಳು ಇಲ್ಲಿನ ಪ್ರಜಾಪ್ರಭುತ್ವ ಹಾಗೂ ಚುನಾವಣೆ ವ್ಯವಸ್ಥೆ ಅರಿಯಲು ಇಲ್ಲಿಗೆ ಬಂದು ಹೋಗುತ್ತಾರೆ. ಹೀಗಿರುವಾಗ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸುವ ಅಗತ್ಯವಿದೆ. ಮತದಾನ ಮಾಡದಿರುವವರು ಜವಾಬ್ದಾರಿಯುತ ನಾಗರಿಕರಾಗಲು ಸಾಧ್ಯವಿಲ್ಲ ಎಂದರು.
ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಪೋಸ್ಟರ್ ತಯಾರಿಕೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್‍ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಡಿಡಿಪಿಐ ಹನುಮಂತಪ್ಪ ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ನಿರೂಪಿಸಿ ವಂದಿಸಿದರು

Please follow and like us:
error