ದೇಶದ ಮೊದಲ ಸ್ವಾತಂತ್ರ್ಯ ಹೋರಾಟ ಕೈಗೊಂಡಿದ್ದು ಕಿತ್ತೂರು ರಾಣಿ ಚನ್ನಮ್ಮ- ಬಸವರಾಜ ರಾಯರಡ್ಡಿ

ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಟ ನಡೆಸುವ ಮೂಲಕ, ದೇಶದಲ್ಲಿ 1824 ರಲ್ಲಿಯೇ ಸ್ವಾತಂತ್ರ್ಯ ಹೋರಾಟವನ್ನು ಮೊದಲು ಪ್ರಾರಂಭಿಸಿದ್ದು ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ. ಹೀಗಾಗಿ ದೇಶದ ಇತಿಹಾಸ ದಾಖಲೆಗಳನ್ನು ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಕಿತ್ತೂರು ರಾಣಿ ಚನ್ನಮ್ಮ ಅವರ ದೇಶಭಕ್ತಿ, ದೇಶದ ಜನತೆಗೆ ಮಾಡಿದ ತ್ಯಾಗ, ಪರಿಶ್ರಮ ಎಲ್ಲವನ್ನೂ ಮನಗಂಡು ಅವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ನಮ್ಮ ಸರ್ಕಾರ ನಿರ್ಧರಿಸಿತು. ಬ್ರಿಟೀಷರು ವ್ಯಾಪಾರಕ್ಕಾಗಿ, ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯಲೆಂದೇ ಭಾರತ ದೇಶಕ್ಕೆ ಬಂದು ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿದರು. ಆ ಸಂದರ್ಭದಲ್ಲಿ ದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದ ರಾಜರುಗಳ ನಡುವಿನ ಭಿನ್ನಾಭಿಪ್ರಾಯ, ದ್ವೇಷ, ಸ್ವಾರ್ಥ ಮನೋಭಾವವನ್ನೇ ಬಳಸಿಕೊಂಡು, ಒಡೆದು ಆಳುವ ನೀತಿ ಅನುಸರಿಸುವ ಮೂಲಕ, ವ್ಯಾಪಾರಕ್ಕೆಂದು ಬಂದ ಕಂಪನಿ ಇಡೀ ದೇಶವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಸಂದರ್ಭದಲ್ಲಿ ಅನೇಕ ರಾಜರುಗಳು ಕಂಪನಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಮೂಲಕ ದೇಶದ್ರೋಹದ ಕೆಲಸ ಮಾಡಿದರು. ಆದರೆ ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತಹ ದೇಶಪ್ರೇಮಿಗಳು, ಬ್ರಿಟೀಷರೊಂದಿಗೆ ರಾಜಿ ಆಗದೆ, ಸ್ವಾತಂತ್ರ್ಯವನ್ನು ಬಯಸಿ, ಹೋರಾಡಿದರು. ಕಿತ್ತೂರು ರಾಣಿ ಚನ್ನಮ್ಮ 1824 ರಲ್ಲಿ ಬ್ರಿಟೀಷ್ ಅಧಿಕಾರಿಯನ್ನು ಕೊಲ್ಲುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದರು. ಆದರೆ ಇತಿಹಾಸಕಾರರು ದೇಶದಲ್ಲಿ 1857 ರಲ್ಲಿ ಮೊಟ್ಟ ಮೊದಲ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಯಿತು ಎಂದು ಉಲ್ಲೇಖಿಸಿದ್ದು, ಈ ಇತಿಹಾಸದ ದಾಖಲೆಯನ್ನು ಸರಿಪಡಿಸಬೇಕಿದ್ದು, ಜನರಿಗೆ ಸತ್ಯವನ್ನು ತಿಳಿಸಬೇಕು. ಇದಕ್ಕಾಗಿ ಕೇಂದ್ರ ಸರ್ಕಾರ ಇತಿಹಾಸವನ್ನು ಗೆಜೆಟ್‍ನಲ್ಲಿ ತಿದ್ದುಪಡಿ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಗತ್ಯ ಯತ್ನ ಮಾಡಲಾಗುವುದು. ಕಿತ್ತೂರು ರಾಣಿ ಚನ್ನಮ್ಮ ಅವರ ಕುರಿತ ಇತಿಹಾಸ ಸಂಶೋಧನೆಗೆ ಅಧ್ಯಯನ ಕೇಂದ್ರದ ಅಗತ್ಯವಿದೆ. ಅಲ್ಲದೆ ಬೆಳಗಾವಿ ವಿವಿ ಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠವನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಂಡು, 02 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಹೇಮರಡ್ಡಿ ಮಲ್ಲಮ್ಮ ಅವರ ಅಧ್ಯಯನ ಪೀಠವನ್ನು ಗುಲಬರ್ಗ ವಿ.ವಿ. ಯಲ್ಲಿ ಸ್ಥಾಪಿಸಲು ಸಹ ಕ್ರಮ ವಹಿಸಲಾಗಿದೆ. ಬಸವೇಶ್ವರರ ಅಧ್ಯಯನ ಪೀಠವನ್ನು ಮುಂದಿನ ತಿಂಗಳು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪನೆ ಮಾಡಲು ಈಗಾಗಲೆ ನಿರ್ಧರಿಸಲಾಗಿದೆ. ಈಗಾಗಲೆ ದೆಹಲಿಯ ಪಾರ್ಲಿಮೆಂಟ್‍ನಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರ ಪುತ್ಥಳಿ ಸ್ಥಾಪಿಸಲಾಗಿದ್ದು, ರಾಜ್ಯ ವಿಧಾನಸಭೆಯ ಆವರಣದಲ್ಲಿಯೂ ಕಿತ್ತೂರು ರಾಣಿ ಚನ್ನಮ್ಮ ಅವರ ಪುತ್ಥಳಿ ಸ್ಥಾಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ದಾರ್ಶನಿಕರು, ಶರಣರು, ಚಿಂತಕರು, ಹುತಾತ್ಮರು ಇವರನ್ನು ಕೇವಲ ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಿ, ಜಯಂತಿ ಆಚರಣೆ ಮಾಡಬಾರದು. ಇಡೀ ಮನುಕುಲ ಇವರ ಸ್ಮರಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಸಂಸದ ಕರಡಿ ಸಂಗಣ್ಣ ಅವರು ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ ಅವರು ದೇಶದ ಹಿತಕ್ಕಾಗಿ ಬ್ರಿಟೀಷ್ ಅಧಿಕಾರಿ ಥ್ಯಾಕರೆ ಅವರನ್ನು ಕೊಲ್ಲುತ್ತಾರೆ. 1824 ರಲ್ಲಿ ಜರುಗಿದ ಈ ಹೋರಾಟವೇ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ. ಆದರೆ ಇತಿಹಾಸಕಾರರು ಇದನ್ನು ದಾಖಲಿಸುವಲ್ಲಿ ಎಡವಿದ್ದಾರೆ. ಇದನ್ನು ಸರಿಪಡಿಸಬೇಕಿದೆ. ಯಾವುದೇ ಸಮುದಾಯವಿರಲಿ, ದೇಶದ ಅಭಿವೃದ್ಧಿ ಎಂದು ಪರಿಗಣಿಸಿದಾಗ ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಈ ದೇಶಕ್ಕೆ ಪ್ರಸ್ತುತವೆನಿಸುವ ಘೋಷಣೆಯಾಗಿದೆ ಎಂದರು.
ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಅವರು ಮಾತನಾಡಿ, ಸ್ವಾತಂತ್ರ್ಯಕ್ಕೋಸ್ಕರ ಕೆಚ್ಚೆದೆಯಿಂದ ಹೋರಾಡಿ, ಬ್ರಿಟೀಷರನ್ನು ಮಣಿಸಿದ ಕಿತ್ತೂರು ರಾಣಿ ಚನ್ನಮ್ಮ ಇಂದಿನ ಯುವ ಪೀಳಿಗೆಗೆ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಕೂಡಲಸಂಗಮದ ಮೃತ್ಯುಂಜಯ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ಬೆಳಗಾವಿಯ ನಿವೃತ್ತ ತಹಸಿಲ್ದಾರ್ ವೈ.ಆರ್. ಪಾಟೀಲ್ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿ.ಪಂ. ಸದಸ್ಯರುಗಳಾದ ರಾಮಣ್ಣ ಚೌಡ್ಕಿ, ಗವಿಸಿದ್ದಪ್ಪ ಕರಡಿ ಸೇರಿದಂತೆ ಶಕುಂತಲಾ ಪಾಟೀಲ, ನಿಂಗಮ್ಮ ಕರಡಿ, ಗೀತಾ ಪಾಟೀಲ, ಕರಿಯಪ್ಪ ಮೇಟಿ, ಬಸಪ್ಪ ಕಂಪ್ಲಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.
ಸಮಾರಂಭಕ್ಕೂ ಮುನ್ನ ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರದ ಭವ್ಯ ಮೆರವಣಿಗೆಗೆ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಬಳಿ ಚಾಲನೆ ನೀಡಲಾಯಿತು. ಹಲವು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Please follow and like us:
error