ದೇವದಾಸಿ ಪದ್ದತಿ ನಿರ್ಮೂಲನೆಗೆ ಸಹಕರಿಸಲು ಮುಂದಾಗಿ : ಟಿ. ಶ್ರೀನಿವಾಸ್


ಕೊಪ್ಪಳ ಸೆ.  : ದೇವದಾಸಿ ಪದ್ದತಿಯು ಒಂದು ಅನಿಷ್ಠ ಪದ್ದತಿಯಾಗಿದ್ದು, ಇದರ ನಿರ್ಮೂಲನೆಗಾಗಿ ಸಹಕರಿಸಲು ಮುಂದಾಗಿ ಎಂದು ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ಶ್ರೀನಿವಾಸ ಅವರು ದೇವದಾಸಿಯರಿಗೆ ಕರೆ ನೀಡಿದರು.
ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ದೇವದಾಸಿ ಪುನರ್ವಸತಿ ಯೋಜನೆ ಕೊಪ್ಪಳ ಇವರ ಸಹಯೋಗದಲ್ಲಿ ದೇವದಾಸಿ ಪದ್ದತಿ ನಿರ್ಮೂಲನೆ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳು ಹಾಗೂ ಮಹಿಳೆಯರ ಸಾಗಾಣಿಕೆ ಮತ್ತು ವಾಣಿಜ್ಯ ಲೈಂಗಿಕ ಶೋಷಣೆ ಸಂತ್ರಸ್ತರ ಯೋಜನೆ ೨೦೧೬ರ ಕುರಿತು ನಗರದ ಕಿನ್ನಾಳ ರಸ್ತೆ ಜಿಲ್ಲಾ ನೌಕರ ಸಂಘದ ಸಾಂಸ್ಕೃತಿಕ ಭವನದಲ್ಲಿ ಬುಧವಾರದಂದು ಆಯೋಜಿಸಲಾದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವದಾಸಿ ಪದ್ದತಿಯು ಮುಡನಂಭಿಕೆ ಆಧಾರದಲ್ಲಿ ನಡೆಯುವಂತಹ ಪದ್ದತಿಯಾಗಿದೆ. ಇದು ಮಹಿಳೆಯರನ್ನು ಕೇವಲ ಲೈಂಗಿಕತೆಗಾಗಿ ಬಳಸಿಕೊಳ್ಳುವ ಒಂದು ಅನಿಷ್ಠ ಪದ್ದತಿಯಾಗಿದೆ. ದೇವದಾಸಿ ಪದ್ದತಿಯಿಂದ ಮಹಿಳೆಯರಿಗೆ ಕಾನೂನು ಬದ್ಧವಾದ ವಿಹಾಹ ಹಕ್ಕುಗಳು ಸಿಗುವುದಿಲ್ಲ. ಅಂದರೆ ವಿಹಾಹವಾದ ನಂತರ ತನ್ನ ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಪ್ರತಿ ಒಬ್ಬ ಗಂಡನ ಮೇಲಿರುತ್ತದೆ. ಗಂಡನು ತನ್ನ ಹೆಂಡತಿಗೆ ನೋಡಿಕೊಳ್ಳದಿರುವುದು ಹಾಗೂ ಇತರೆ ಕಾನೂನಿನನ್ವಯ ಇರುವ ಹಲವಾರು ಸೌಲತ್ತುಗಳನ್ನು ಪಡೆಯಲು ಆ ಹೆಂಡತಿಯು ಸುಲಭವಾಗಿ ಕಾನೂನಿನ ಮೊರೆ ಹೋಗಬಹುದಾಗಿದೆ. ಆದರೆ ದೇವ ದಾಸಿ ಮಹಿಳೆಯರಿಗೆ ವಿವಾಹ ಹಕ್ಕು ಅಡ್ಡಿಯಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಸುಮಾರು ೬೩೦೦ ಕ್ಕೂ ಅಧಿಕ ದೇವದಾಸಿಯರಿದ್ದು, ಇದು ವಿಷಾಧಕರವಾಗಿದೆ. ಈ ಪದ್ದತಿಯು ಇನ್ನೂ ಜಿವಂತವಾಗಿರಲು ಮುಖ್ಯ ಕಾರಣ ಅನಕ್ಷರತೆ, ಬಡತನ ಇತ್ಯಾದಿ. ದೇವದಾಸಿ ಪದ್ದತಿಯಲ್ಲಿ ಒಳಗಾದ ಮಹಿಳೆಯರಿಗೆ ಸಮಾಜವು ದೂರ ಇಡುತ್ತದೆ. ಯಾರು ಕೂಡ ಶೋಷಣೆಗೆ ಒಳಗಾಗಬಾರದು. ಈ ನಿಟ್ಟಿನಲ್ಲಿ ಸರ್ಕಾರವು ಅನೇಕ ಯೋಜನೆ, ಸೌಲಭ್ಯಗಳನ್ನು ನೀಡುತ್ತಿದ್ದು, ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ತಮ್ಮ ಮಕ್ಕಳಿಗೆ ವಿದ್ಯಾವಂತರನ್ನಾಗಿಸಿ. ಸರ್ಕಾರದ ಸೌಲಭ್ಯಗಳು ತಮಗೆ ದೊರೆಯದೇ ಇದ್ದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಿ. ಕಾನೂನು ಸೇವೆ ಪ್ರಾಧಿಕಾರವು ತಮಗೆ ಬೇಕಾಗುವ ಯಾವುದೇ ರೀತಿಯ ಕಾನೂನು ಸೇವೆಯನ್ನು ಉಚಿತವಾಗಿ ನೀಡಲಿದ್ದು, ಈ ಸೌಲಭ್ಯಗಳನ್ನು ಪಡೆದುಕೊಳ್ಳಿ ಹಾಗೂ ದೇವದಾಸಿ ಪದ್ದತಿ ನಿರ್ಮೂಲನೆಗೆ ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ಕೈಜೋಡಿಸಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ಶ್ರೀನಿವಾಸ ಅವರು ದೇವದಾಸಿ ಮಹಿಳೆಯರಿಗೆ ಕರೆ ನೀಡಿದರು.
ಕೊಪ್ಪಳ ಮಹಿಳಾ ಅಭಿವೃದ್ದಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಗೋಪಾಲ ನಾಯಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇವದಾಸಿ ಪದ್ದತಿಯು ಒಂದು ಅನಿಷ್ಠ ಪದ್ದತಿಯಾಗಿದ್ದು, ಇದರ ನಿರ್ಮೂಲನೆಗಾಗಿ ಸರ್ಕಾರವು ೧೯೯೩-೯೪ ರಲ್ಲಿ ಸಮೀಕ್ಷೆಯನ್ನು ನಡೆಸಿದೆ. ನಂತರ ರಾಜ್ಯದಲ್ಲಿ ಮಹಿಳಾ ಅಭಿವೃದ್ಧಿ ನಿಗಮಗಳ ಮುಖಾಂತರವಾಗಿ ದೇವದಾಸಿ ಪುನರ್ವಸತಿ ಯೋಜನೆ ಕಾರ್ಯಾಲಯಗಳ ಮುಖಾಂತರ ದೇವದಾಸಿ ಮಹಿಳೆಯರಿಗಾಗಿ ವಿವಿಧ ಯೋಜನೆಗಳನ್ನು ನೀಡುತ್ತಿದೆ. ದೇವದಾಸಿ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರದ ವತಿಯಿಂದ ವಿವಿಧ ಇಲಾಖೆಗಳ ಮೂಲಕವಾಗಿ ಗ್ರಾಮ ದೇವತೆಗಳ ಜಾತ್ರೆಗಳಲ್ಲಿ ಅರಿವು, ಜಾಗೃತಿ, ಹೀಗೆ ಹತ್ತು ಹಲವಾರು ಕಾರ್ಯಾಕ್ರಮಗಳನ್ನು ನಡೆಸಲಾಗುತ್ತಿದೆ. ದೇವದಾಸಿಯರಿಗೆ ವಸತಿ ಸೌಲಭ್ಯವನ್ನು ಸಹ ಕಲ್ಪಿಸಲಾಗುತ್ತಿದ್ದು, ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ದೇವದಾಸಿ ಪದ್ದತಿಗೆ ಸಂಬಂಧಿಸಿದಂತೆ ಇತ್ತಿಚೇಗೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಅನಿಷ್ಠ ಪದ್ದತಿ ನಿರ್ಮಲನೆಗೆ ಎಲ್ಲರೂ ಮುಂದೆ ಬನ್ನಿ. ದೇವದಾಸಿಯರು ತಮ್ಮ ಮಕ್ಕಳಿಗೆ ಬಾಲ್ಯ ವಿವಾಹವನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ಅಲ್ಲದೇ ಬಾಲ ಕಾರ್ಮಿಕರನ್ನಾಗಿಯೂ ಸಹ ಮಾಡಬೇಡಿ. ದೇವದಾಸಿಯರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ, ಅವರಿಗೆ ಉತ್ತಮ ನಾಗರೀಕರನ್ನಾಗಿಸಿ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಈರಣ್ಣ ಪಂಚಾಳ ಅವರು ವಹಿಸಿದ್ದರು. ಕೊಪ್ಪಳ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಫೆಕ್ಟರ್ ರವಿ ಉಕ್ಕುಂದ ಸೇರಿದಂತೆ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ದೇವದಾಸಿ ಪುನರ್ವಸತಿ ಯೋಜನೆ ವಿವಿಧ ತಾಲೂಕಾ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. ವಕೀಲರಾದ ಮಾರುತಿ ಚಾಮಲಾಪುರ ಅವರು ಕಾನೂನು ಅರಿವು-ನೆರವು ಕುರಿತು ವಿಶೇಷ ಉಪನ್ಯಾಸ ನೀಡಿದರು.

Please follow and like us:
error