ತ್ಯಾಜ್ಯ ಪ್ಲಾಸ್ಟಿಕ್ ಬಾಟಲ್ಸ್ ಬಳಸಿಕೊಂಡು ಮನೆಗಳ ನಿರ್ಮಾಣ ಮಾಡಿ : ವೆಂಕಟರಾಜಾ


ಕೊಪ್ಪಳ ಅ.  : ಪ್ಲಾಸ್ಟಿಕ್ ನಿಷೇಧಕ್ಕೆ ಟೆಕ್ನಾಲಜಿ ಅತ್ಯವಶ್ಯಕವಾಗಿದ್ದು, ತ್ಯಾಜ್ಯ ಪ್ಲಾಸ್ಟಿಕ್ ವಾಟರ್ ಬಾಟಲ್ಸ್‌ಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದ ಮನೆಗಳ ನಿರ್ಮಾಣ ಮಾಡಿ ಎಂದು ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಇಂಜಿನಿಯರ್‍ಸ್‌ಗಳಿಗೆ ಸಲಹೇ ನೀಡಿದರು.
ಕೊಪ್ಪಳ ಜಿಲ್ಲಾ ಪಂಚಾಯತ, ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಟ್ (ಕೆ.ಆರ್.ಐ.ಡಿ.ಎಲ್) ಕೊಪ್ಪಳ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಇವರ ಜಂಟಿ ಸಹಭಾಗಿತ್ವದಲ್ಲಿ ನಗರದ ಬಿ.ಎಸ್. ಪವಾರ್ ಗ್ರ್ಯಾಂಡ್‌ನಲ್ಲಿ ಮಂಗಳವಾರದಂದು ಆಯೋಜಿಸಲಾದ ಇಂಜಿನಿಯರಿಂಗ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಪ್ಲಾಸ್ಟಿಕ್ ನಾಶವಾಗಲು ಸುಮಾರು ೫೦೦ ವರ್ಷಗಳು ಬೇಕು. ಪ್ಲಾಸ್ಟಿಕ್ ಪರಿಸರದ ಮಹಾಶತ್ರುವಾಗಿದ್ದು, ಆರೋಗ್ಯಕ್ಕೂ ಮಾರಕವಾಗಿದೆ. ಆದ್ದರಿಂದ ಪ್ಲಾಸ್ಟಿಕ್ ಬಳಕೆಯು ಸಂಪೂರ್ಣ ನಿಷೇಧವಾಗಬೇಕಾಗಿದೆ. ಆದರೆ ಪ್ಲಾಸ್ಟಿಕ್ ಬಳಕೆ ಇನ್ನೂ ನಿಯಂತ್ರಣವಾಗುತ್ತಿಲ್ಲ. ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಹೊಸ-ಹೊಸ ಪ್ರಯೋಗಳು ನಡೆಯುತ್ತಿದ್ದು, ಇಂಜಿನಿಯರ್‍ಸ್‌ಗಳು ಮನೆ ನಿರ್ಮಾಣ ಕಾಮಗಾರಿಗಳಲಿ ತ್ಯಾಜ್ಯ ಪ್ಲಾಸ್ಟಿಕ್ ವಾಟರ್ ಬಾಟಲ್ಸ್‌ಗಳನ್ನು ಹಾಗೂ ಅಸ್ಫಾಲ್ಟ್ ರಸ್ತೆ ನಿರ್ಮಾಣದಲ್ಲಿ ತ್ಯಾಜ್ಯ ಪ್ಲ್ಯಾಸ್ಟಿಕ್ ಸಾಮಗ್ರಿಗಳನ್ನು ಬಳಸಿಕೊಂಡರೆ ಇಂತರ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ಮೇಲೆ ನಿಯಂತ್ರಣ ಮಾಡಬಹುದಾಗಿದೆ. ಹೀಗೆ ಯಾವುದೇ ಒಂದು ಹೊಸ ಪ್ರಯೋಗವನ್ನು ಮಾಡಿ ಜನರನ್ನು ಆಕರ್ಷಿಸಿದಾಗ ಮಾತ್ರ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ವಿಲೇ ಮಾಡಬಹುದಾಗಿದೆ. ನಿರುಪಯುಕ್ತ ಪ್ಲಾಸ್ಟಿಕ್ ಅನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪ್ಲಾಸ್ಟಿಕ್ ವಿಲೇವಾರಿಗೆ ಕಷ್ಟವಾಗುತ್ತದೆ. ಆದ್ದರಿಂದ ತ್ಯಾಜ್ಯ ಪ್ಲಾಸ್ಟಿಕ್ ವಸ್ತುಗಳನ್ನು ಕಸ ಬಟ್ಟಿಗಳಲ್ಲೇ ಹಾಕಬೇಕು. ಈ ದೆಸೆಯಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ಸಹ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮೊದಲು ನಾವೇ ನಮ್ಮ ವ್ಯವಸ್ಥೆಯನ್ನು ಬದಲಾವಣೆ ಮಾಡಿಕೊಳ್ಳಬೇಕಾಗಿದ್ದು, ಪ್ಲಾಸ್ಟಿಕ್ ಅನ್ನು ಟೆಕ್ನಿಕಲ್ ಆಗಿ ಬಳಕೆ ಮಾಡಿಕೊಳ್ಳಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಹೇಳಿದರು.
ಕೆ.ಆರ್.ಐ.ಡಿ.ಎಲ್. ಕಾರ್ಯಪಾಲಕ ಅಭಿಯಂತರರಾದ ಜೆ.ಎಮ್. ಕೊರಬು ಅವರು ಮಾತನಾಡಿ, ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಟ್ ಸಂಸ್ಥೆಯು ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿದ ಸಂಸ್ಥೆಯಾಗಿದೆ. ಅದಲ್ಲದೇ ಸಕಾರಕ್ಕೆ ಉಳಿತಾಯ ಮಾಡುವ ಸಂಸ್ಥೆಯಾಗಿದೆ. ಸಂಸ್ಥೆಯಲ್ಲಿ ಮೊದಲು ೧೦ ರಿಂದ ೧೫ ಕೋಟಿ ವರೆಗೆ ವ್ಯವಹಾರಗಳು ಆಗುತ್ತಿದ್ದು, ಇದೀಗ ಅದು ಸುಮಾರು ೬೦ ರಿಂದ ೧೦೦ ಕೋಟಿ ದಾಟಿದೆ. ಎಲ್ಲಾ ಖರ್ಚುಗಳನ್ನು ತೆಗೆದು ೪ ರಿಂದ ೨೦ ಕೋಟಿ ವರೆಗೆ ಉಳಿತಾಯ ವಾಗುತ್ತಿದೆ. ಕೊಪ್ಪಳ ಸಂಸ್ಥೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ತುಂಬಾ ಸಹಕಾರ ದೊರೆತಿದೆ. ಪರಿಸರದ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಇಂಜಿನಿಯರಿಂಗ್ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ “ಅಸ್ಫಾಲ್ಟ್ ರಸ್ತೆ ನಿರ್ಮಾಣದಲ್ಲಿ ತ್ಯಾಜ್ಯ ಪ್ಲ್ಯಾಸ್ಟಿಕ್ ಸಾಮಗ್ರಿಗಳನ್ನು ಬಳಸಿ (ಹೊಂದಿಕೊಳ್ಳುವ ಪಾದಚಾರಿ), ತ್ಯಾಜ್ಯ ಪ್ಲಾಸ್ಟಿಕ್ ವಾಟರ್ ಬಾಟಲ್ಸ್ ಅನ್ನು ಬಳಸಿಕೊಂಡು ಕಡಿಮೆ ವೆಚ್ಚದ ಮನೆಗಳ ನಿರ್ಮಾಣ, ವೈಟ್ ಟಾಪ್ಪಿಂಗ್ & ಆರ್‌ಎಂ.ಡಿ ಟೆಕ್ನಾಲಜಿ ಮತ್ತು ಕಾಂಕ್ರೀಟ್ ಪ್ರಾಪರ್ಟೀಸ್‌ಗಳಿಗೆ ಪರಿಣಾಮ ಬೀರುವ ಸಿಮೆಂಟ್ ಗ್ರೇಡ್” ಎಂಬ ವಿಷಯಗಳ ಕುರಿತು ತಾಂತ್ರಿಕ ಉಪನ್ಯಾಸ ಏರ್ಪಡಿಸಿದ್ದು, ಕಾರ್ಯಕ್ರಮದ ಸದುಪಯೋಗ ಪಡೆದು ಕಾರ್ಯಾಗಾರವನ್ನು ಯಶಸ್ವಿಗೊಳಿಸಬೇಕು ಎಂದರು.
ಕಲಬುರ್ಗಿ ಕೆ.ಆರ್.ಐ.ಡಿ.ಎಲ್. ಅಧೀಕ್ಷಕ ಅಭಿಯಂತರರಾದ ಎಂ. ನಟೇಶ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ರೀಜನಲ್ ಟೆಕ್ನಿಕಲ್ ಹೆಡ್ (ಉತ್ತರ ಕರ್ನಾಟಕ & ಗೋವಾ) ಅಶೋಕ ರೆಡ್ಡಿ, ಗದಗ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಪ್ರವೀಣ ಜ್ಯೋತಿ, ಜಿ.ಪಂ. ಉಪ ಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಸೇರಿದಂತೆ ಅನೇಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error