ತೋಟಗಾರಿಕೆ ಇಲಾಖೆ ಯಿಂದ ದ್ರಾಕ್ಷಿ ಬೆಳೆಗಾರರಿಗೆ ಸಲಹೆ

ಕೊಪ್ಪಳ ಅ. :  ಕೊಪ್ಪಳ ತೋಟಕಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ಸಲಹೆಗಳನ್ನು ನೀಡಲಾಗಿದೆ.
ಕೊಪ್ಪಳ ಜಿಲ್ಲೆ ವಾತಾವರಣ, ಮಣ್ಣು ಮತ್ತು ಹವಾಗುಣ ಹಣ್ಣಿನ ಬೆಳೆಗಳಿಗೆ ಅತ್ಯಂತ ಸೂಕ್ತವಾಗಿದೆ. ದ್ರಾಕ್ಷಿ ಬೆಳೆ ಈ ಭಾಗಕ್ಕೆ ಅತ್ಯಂತ ಸೂಕ್ತವಾದ ವಾಣಿಜ್ಯ ತೋಟಗಾರಿಕೆ ಬೆಳೆ. ಹಸ್ತಾ ಬಹಾರದಲ್ಲಿ ಚಳಿಗಾಲದ ಚಾಟ್ನಿ ಸೂಕ್ತವಾಗಿರುವದರಿಂದ ಮಳೆನಿಂತ ಮೇಲೆ ದ್ರಾಕ್ಷಿ ಮುಂಚಾಟ್ನಿ ಕೈಗೊಳ್ಳಬೇಕು. ಆದಷ್ಟು ಈ ತಿಂಗಳೊಳಗೆ ಚಾಟ್ನಿಮಾಡಿ ಮುಗಿಸಬೇಕು. ಚಾಟ್ನಿ ಮಾಡುವ ಮೊದಲು ೩ ವಾರ ನೀರು ಕೊಡುವುದನ್ನು ನಿಲ್ಲಿಸಿ ಬಳ್ಳಿಗಳಿಗೆ ವಿಶ್ರಾಂತಿ ನೀಡಬೇಕು. ನಂತರ ತಳಿಗಳನ್ನಾಧರಿಸಿ ೮-೧೦ ಕಣ್ಣುಗಳಿರುವಂತೆ ಚಾಟ್ನಿ ಮಾಡಬೇಕು.
ಸೂಚನೆ : ಚಾಟ್ನಿ ನಂತರ ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟ ಇಲ್ಲಿ ಅತ್ಯಾಧುನಿಕ ವಿಶ್ಲೇಷಣೆ ಯಂತ್ರವನ್ನು ಅಳವಡಿಸಿದ್ದು, ರೈತರು ತಮ್ಮ ಬೆಳೆಯ ಎಲೆ ಕಾಂಡಗಳ ವಿಶ್ಲೇಷಣೆ ಮಾಡಿಸಿ ಸೂಕ್ತ ಪ್ರಮಾಣದ ಗೊಬ್ಬರಗಳನ್ನು ನೀಡಬೇಕು. ಗೊಬ್ಬರಗಳನ್ನು ಚಾಟ್ನಿ ಮಾಡಿದ ನಂತರ ೬೦ ಮತ್ತು ೮೦ ದಿನಗಳ ಅಂತರದಲ್ಲಿ ನೀಡಬೇಕು ಗೊಬ್ಬರ ನೀಡುವಾಗ ಬಳ್ಳಿಗಳ ಸುತ್ತಲು ಪಾತಿ ಮಾಡಿ ಗೊಬ್ಬರ ನೀಡಬೇಕು. ತಕ್ಷಣವೇ ಹನಿ ನೀರಾವರಿ ಮೂಲಕ ೫ ರಿಂದ ೭ ದಿನಗಳ ಅಂತರದಲ್ಲಿ ನೀರು ಹರಿಸಬೇಕು. ನಂತರದ ದಿನಗಳಲ್ಲಿ ೧೦ ದಿನಗಳಿಗೊಮ್ಮೆ ನೀರು ಹರಿಸಿದರೂ ಸಾಕು. ಹೈಡ್ರೊಜನ್ ಸ್ಯಾನಾಮೈಡ್(ಡಾರ್ಮೆಕ್ಸ್) ಲೇಪಿಸುವಾಗ ಬ್ಲ್ಯಾಕ್ ಬೋರ್ಡೊ ಜೊತೆಗೆ ೧ ಗ್ರಾಂ. ಕಾರ್ಬೆಂಡಾಜಿಮ್ ೫೦ ಡಬ್ಲ್ಯೂಪಿ೧, ಲೀ.ನೀರಿಗೆ ಬೆರೆಸಿ ಸಿಂಪರಿಸಿದರೆ ರೋಗಗಳ ಸುಲಭ ಹತೋಟಿಸಾಧ್ಯ.
ಮೋಡ ಕವಿದ ವಾತವರಣದಲ್ಲಿ ಅನೇಕ ರೋಗಗಳು ಈ ಬೆಳೆಗೆ ಮಾರಕ. ದ್ರಾಕ್ಷಿ ಬೆಳೆಯಲ್ಲಿ ಪ್ರಮುಖ ಕೀಟ ಮತ್ತು ರೋಗಗಳು ಮತ್ತು ಅವುಗಳ ಹತೋಟಿ ಕ್ರಮಗಳು.
ಥ್ರಿಪ್ಸ್‌ನುಸಿ : ಇದೊಂದು ರಸ ಹೀರುವ ಕೀಟವಾಗಿದ್ದು, ಎಲೆಗಳಿಂದ ರಸವನ್ನು ಹೀರಿ ಎಲೆ ಮುದುರಾಗುವಂತೆ ಮಾಡುತ್ತದೆ. ತೀವ್ರ ಹಾನಿಗೊಳಗಾಧ ಬಳ್ಳಿಗಳಿಂದ ಎಲೆಗಳು ಹಳದಿಯಾಗಿ ಮುರುಟುತ್ತವೆ. ಪ್ರೊಫೆನೋಫಾಸ್ ೫೦ ಇ.ಸಿ. ೫ ಮಿ.ಲೀ. ಇಮಿಡಾಕ್ಲೋಪ್ರಿಡ್ಬ ೭೦% ಡಬ್ಲೂ.ಜಿ. ೦.೨೫ ಗ್ರಾಂ. ಥಯೋಮೆಥಾಕ್ಸಾಮ್ ೦.೨೦ ಗ್ರಾಂ. ಫಿಪ್ರೋನಿಲ್ ೦.೩೦ ಎಸ್.ಸಿ. ೦.೫೦ ಗ್ರಾಂ. ಕೀಟನಾಶಕಗಳನ್ನು ಬದಲಾಯಿಸುತ್ತ ೫-೭ ದಿನಗಳಿಗೊಮ್ಮೆ ಸಿಂಪರಿಸುತ್ತಿರಬೇಕು. ಶಿಫಾರಸು ಮಾಡಿದಂತೆ ಪೋಷಕಾಂಶ ಮತ್ತು ನೀರಿನ ನಿರ್ವಹಣೆ ಬಹು ಮುಖ್ಯ.
ಹಿಟ್ಟು ತಿಗಣೆ : ಇತ್ತೀಚೆಗೆ ಈ ಕೀಟದ ಹಾವಳಿ ಜಾಸ್ತಿಯಾಗುತ್ತಿದೆ. ಮಳೆಯಾಗದೆ ಶುಷ್ಕ ವಾತಾವರಣ ಇರುವುದು ಈ ಕೀಟದ ಬೆಳವಣಿಗೆಗೆ ಸಹಕಾರಿ. ದಾಸವಾಳ, ಬಾದಾಮಿ ಹಾಗೂ ಸೀಬೆ ಮರಗಳಿಗೆ ಇದರ ಹಾವಳಿ ಜಾಸ್ತಿ. ಎಣ್ಣೆ ಪದಾರ್ಥದಿಂದ ಆವೃತವಾಗಿ ಗುಂಪಿನಲ್ಲಿ ಇರುವ ಈ ಕೀಟಗಳನ್ನು ಇರುವೆಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುತ್ತವೆ. ಜಾನುವಾರುಗಳು, ಮನುಷ್ಯರೂ ಕೂಡಾ ಇವುಗಳ ಪ್ರಸರಣಕ್ಕೆ ಕಾರಣವಾಗುತ್ತವೆ.
ಹತೋಟಿ ಕ್ರಮಗಳು : ಬೇವಿನ ಹಿಂಡಿ, ಬೇವಿನ ಕಷಾಯದ ಬಳಕೆ, ತೋಟಗಳನ್ನು ಸ್ವಚ್ಛವಾಗಿಡುವುದು ಅತೀ ಮುಖ್ಯ. ನಂತರ ೧೦ ಗ್ರಾಂ. ಸಾಬೂನಿನ ಪುಡಿ ಅಥವಾ ಟೀ ಪಾಲ ಜೊತೆಗೆ ನುವಾನ್, ಕ್ಲೊರೋಪೈರಿಫಾಸ್ ಮುಂ. ಕೀಟನಾಶಕಗಳನ್ನು ಬದಲಾಯಿಸಿ ಬಳಸಬೇಕು. ಮೀನಿನ ಎಣ್ಣೆ ( ನೀಮಾರ್ಕ) ೨ ಮೀ.ಲೀ. ತುಂಬ ಪರಿಣಾಮಕಾರಿ. ಕಾಂಡಗಳಿಗೆ ಮ್ಯಾಲಾಥಿಯಾನ ಪುಡಿ ಕೂಡಾ ಸವರಬಹುದು.
ಕಾಂಡ ಕೊರಕ : ಕಾಂಡದೊಳಗೆ ಸೇರಿಕೊಂಡು ಒಳಗಿನ ತಿರುಳನ್ನು ತಿನ್ನುವುದರಿಂದ ಎಲೆಗಳು ಹಳದಿಯಾಗಿ ಒಂದೆರಡು ರೆಂಬೆಗಳು ಒಣಗುತ್ತಾ ಬರುತ್ತವೆ. ನಂತರ ಇಡೀ ಗಿಡ ಬಳ್ಳಿ ಒಣಗಿ ಹೋಗುತ್ತವೆ. ೧ ಲೀ. ನೀರಿಗೆ ೨೦ ಮಿ.ಲೀ. ಡಿ.ಡಿ.ವಿ.ಪಿ. ಬೆರೆಸಿ ಪಿಚಕಾರಿ ಬಾಟಲಿಗಳ ಮೂಲಕ ಕಾಂಡದ ಮೇಲಿನ ರಂಧ್ರಗಳೊಳಕ್ಕೆ ಸುರಿದು ಜೇಡಿ ಮಣ್ಣಿನಿಂದ ರಂಧ್ರಗಳನ್ನು ಮುಚ್ಚಬೇಕು. ಔಡಲ ಗಿಡಗಳು ದ್ರಾಕ್ಷಿ ತೋಟದ ಸುತ್ತ ಮುತ್ತ ಇರದಂತೆ ನೋಡಿಕೊಳ್ಳಬೇಕು.
ಪ್ರಮುಖ ರೋಗಗಳು : ಬೂದಿ ರೋಗ, ದ್ರಾಕ್ಷಿ ಬೆಳೆಗೆ ಚಳಿಗಾಲದಲ್ಲಿ ಈ ರೋಗ ಮಾರಕ. ಹತೋಟಿ ಕ್ರಮ- ಫೆನರಿಮಾಲ ೧ ಮಿ.ಲೀ. ಅಥವಾ ಹೆಕ್ಸಾಕೋನಾಜೋಲ್ ೧ ಮಿ.ಲೀ. ೧ ಲೀ. ನೀರಿನಲ್ಲಿ ಕರಗುವ ಗಂಧಕ ೩ ಗ್ರಾಂ. ಅಥವಾ ಮೈಕ್ಲೊಬುಟಾನಿಲ ೨ ಗ್ರಾಂ. ೧ ಲೀ. ನೀರಿಗೆ ಬೆರೆಸಿ ಈ ರಾಸಾಯನಿಕಗಳನ್ನು ಬದಲಾಯಿಸುತ್ತಾ ಬಳಸುತ್ತಿರಬೇಕು. ಚಿಬ್ಬುರೋಗ, ಈ ರೋಗ ಅಕ್ಟೋಬರ್-ಡಿಸೆಂಬರ್ ತಿಂಗಳುಗಳಲ್ಲಿ ಅಧಿಕವಾಗಿರುತ್ತದೆ. ಎಲೆ ಹಾಗೂ ಕಾಂಡಗಳು ಮೇಲೆ ಕಂದು ಬಣ್ಣದ ಸಿಡುಬಿನಂತೆ ಚುಕ್ಕೆಗಳು ಕಂಡು ಬಂದು ಎಲೆಗಳ ಮೇಲೆ ರಂಧ್ರ ಉಂಟಾಗುತ್ತವೆ. ಕಾಂಡಗಳ ಮೇಲೆ ತಗ್ಗಾದ ಕಂದು ಬಣ್ಣದ ಮಚ್ಚೆಗಳುಂಟಾಗುತ್ತವೆ. ಹತೋಟಿ ಕ್ರಮ- ರೋಗ ತೀವ್ರವಿದ್ದಾಗ ರೋಗ ಪೀಡಿತ ಭಾಗಗಳನ್ನು ಕತ್ತರಿಸಿ ಹಾಕಿ ಕ್ಲೋರೊಥಲೋನಿಲ್ ೨ ಗ್ರಾಂ. ಅಥವಾ ಥಯೋಫಿನೈಟ್ ಮೀಥೈಲ್ ೧ ಗ್ರಾಂ. ೧ ಲೀ ನೀರಿಗೆ ಬೆರೆಸಿ ಸಿಂಪರಿಸಬೆಕು.
ಬೂಜು ತುಪ್ಪಟ ರೋಗ : ದ್ರಾಕ್ಷಿ ಬೆಳೆಗೆ ಈ ರೋಗ ಮಾರಕ. ಇದರ ಸಂಪೂರ್ಣ ಹತೋಟಿ ಕಷ್ಟ. ಆದ್ದರಿಂದ ರೋಗ ಹರಡದಂತೆ ನಿರ್ವಹಣೆ ಬಹುಮುಖ್ಯ. ಫಾಸ್ಫೋನಿಕ್ ಆಸಿಡ್ ೨ ಮಿ.ಲೀ. ಅಥವಾ ಪೋಸಟೀಲ್ ಎಲ್. ೧-೨ ಗ್ರಾಂ. ಶಿಲೀಂಧ್ರನಾಶಕಗಳನ್ನು ರೋಗ ಬರುವ ಮೊದಲೇ ಮುಂಜಾಗ್ರತ ಕ್ರಮವಾಗಿ ಸಿಂಪರಿಸಬೇಕು. ಮೇಲೋಡಿ ೩ ಗ್ರಾಂ. ಅಥವಾ ಸೆಕ್ಟಿನ್ ೩ ಗ್ರಾಂ. ಅಥವಾ ರೀಡೋಮಿಲ್ ಎಮ್.ಜಡ್. ೨ ಗ್ರಾಂ. ೧ ಲೀ. ನೀರಿಗೆ ಬೆರೆಸಿ ೩ ಗ್ರಾಂ. ೧೯:೧೯:೧೯ ನೀರಿನಲ್ಲಿ ಕರಗುವ ಗೊಬ್ಬರದೊಡನೆ ಮಿಶ್ರ ಮಾಡಿ ಸಿಂಪರಿಸಬೇಕು.
ದುಂಡಾಣು ಎಲೆ ಚುಕ್ಕೆ ರೋಗ : ದಾಳಿಂಬೆ ಈ ರೋಗ ಮಾರಕ. ಆದರೆ ಮೋಡಕವಿದ ಮತ್ತು ಆಗಾಗ ಮಳೆ ಬೀಳುವ ದಿನಗಳಲ್ಲಿ ದ್ರಾಕ್ಷಿ ಬೆಳೆಗೂ ಕೂಡ ಈ ರೋಗ ತುಂಬ ಹಾನಿಕಾರ. ಈ ರೋಗದ ಹತೋಟಿಗೆ ಸಿ.ಒ.ಸಿ. ೩ ಗ್ರಾಂ. + ಸ್ಟ್ರೆಪ್ಟೋಸೈಕ್ಲಿನ್ ೦.೫೦ ಗ್ರಾಂ. ಅಥವಾ ಕ್ಲಾಪ್ಟಾನ್ ೩ ಗ್ರಾಂ. + ಬ್ಯಾಕ್ಟಿರಿಮೈಸಿನ್ ೫೦೦ ಪಿ.ಪಿ.ಎಎಮ್. ಬದಲಾಯಿಸಿ ಬಳಸುತ್ತಿರಬೇಕು. ದಾಳಿಂಬೆ ಬೆಳೆಯಲ್ಲಿ ಮಳೆಯಾದಾಗ ಇದೇ ರಾಸಾಯನಿಕಗಳನ್ನು ಸಿಂಪರಿಸಬೇಕು. ಮಾರನೇ ದಿನವೇ ಸತುವಿನ ಸಲ್ಪೇಟ್ ೧ ಗ್ರಾಂ.+ ಮ್ಯಾಗ್ನೇಸಿಯಮ್ ಸ. ೧ ಗ್ರಾಂ.+ಸುಣ್ಣ ೧ ಗ್ರಾಂ. + ಬೋರಾನ್ ೧ ಗ್ರಾಂ. ಮಿಶ್ರಣವನ್ನು ಕಡ್ಡಾಯವಾಗಿ ಸಿಂಪರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರ ಕಛೇರಿ (ಜಿ.ಪಂ.) ಕೊಪ್ಪಳ, ವಿಷಯ ತಜ್ಞರು, ಹಾರ್ಟಿಕ್ಲಿನಿಕ್ ಕೊಪ್ಪಳ ಅಥವಾ ಆಯಾ ತಾಲೂಕಾ ಕಛೇರಿಗಳನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ  ತಿಳಿಸಿದ್ದಾರೆ.