ತುಂಗಭದ್ರಾ-ಕೃಷ್ಣಾ ಜಲಾಶಯ ಜೋಡಣೆಗೆ ಸಂಗಣ್ಣ ಕರಡಿ ಮನವಿ

ನದಿ ಜೋಡಣೆಗಿಂತ ಪರಿಣಾಮಕಾರಿ | ಸಚಿವ ಗಡ್ಕರಿ ಮೂಲಕ ಪ್ರಧಾನಿಗೆ ವಿನಂತಿ

ಕೊಪ್ಪಳ, ಮಾ. ೨೮: ತುಂಗಭದ್ರಾ ಜಲಾಶಯವನ್ನೇ ನೆಚ್ಚಿಕೊಂಡಿರುವ ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜನರ ಜೊತೆಗೆ ಆಂಧ್ರಪ್ರದೇಶದ ರಾಯಲಸೀಮಾ ಭಾಗದ ಜನರಿಗೆ ನೆರವಾಗಲು ಆಲಮಟ್ಟಿ ಜಲಾಶಯವನ್ನು ತುಂಗಭದ್ರಾ ಜಲಾಶಯಕ್ಕೆ ಜೋಡಿಸಬೇಕೆಂದು ಸಂಸದ ಸಂಗಣ್ಣ ಕರಡಿ ಮನವಿ ಸಲ್ಲಿಸಿದ್ದಾರೆ.

ಕೇಂದ್ರ ರಸ್ತೆ ಮತ್ತು ಜಲಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನವದೆಹಲಿಯಲ್ಲಿ ಮಂಗಳವಾರ ಮನವಿ ಸಲ್ಲಿಸಿದ ಸಂಗಣ್ಣ ಕರಡಿ ಪ್ರಮುಖ ವಿಷಯಗಳತ್ತ ಗಮನ ಸೆಳೆದಿದ್ದಾರೆ.

ತುಂಗಭದ್ರಾ ಜಲಾಶಯದ ಸಂಗ್ರಹ ಸಾಮರ್ಥ್ಯ ೧೩೩ ಟಿಎಂಸಿ ಆಗಿದ್ದರೂ, ಹೂಳು ತುಂಬಿಕೊಂಡಿರುವುದರಿಂದ ಸಂಗ್ರಹ ಸಾಮರ್ಥ್ಯ ೧೦೧ ಟಿಎಂಸಿಗೆ ಕುಸಿದಿದೆ. ಆದರೆ, ಹಲವಾರು ವರ್ಷಗಳ ಸರಾಸರಿ ನೋಡಿದರೆ, ಜಲಾಶಯದ ಶೇ.೬೦ರಷ್ಟು ಭಾಗ ಮಾತ್ರ ಭರ್ತಿಯಾಗುತ್ತದೆ. ಶೇ.೪೦ರಷ್ಟು, ಅಂದರೆ ೪೦ ಟಿಎಂಸಿ ನೀರು ಈ ಭಾಗಕ್ಕೆ ಬರುವುದೇ ಇಲ್ಲ. ಜಲಾಶಯವನ್ನೇ ಕೃಷಿ ಮತ್ತು ಕುಡಿಯುವ ನೀರಿಗೆ ಅವಲಂಬಿಸಿರುವ ರಾಜ್ಯದ ಮೂರು ಜಿಲ್ಲೆಗಳು ಮತ್ತು ಆಂಧ್ರಪ್ರದೇಶದ ಒಂದು ಜಿಲ್ಲೆಯ ಜನ ಹಲವಾರು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ.

ತುಂಗಭದ್ರಾ ನದಿಯಲ್ಲಿ ಮಳೆ ನೀರು ಹರಿವು ಹೆಚ್ಚುತ್ತಿಲ್ಲ. ಆದರೆ, ಕೃಷ್ಣಾ ನದಿಯಲ್ಲಿ ಪ್ರತಿ ವರ್ಷ ಮಹಾಪೂರ ಬರುತ್ತದೆ. ಆಲಮಟ್ಟಿ ಜಲಾಶಯ ಪ್ರತಿ ವರ್ಷ ಭರ್ತಿಯಾಗಿ, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತದೆ. ಆಲಮಟ್ಟಿ ಜಲಾಶಯದಿಂದ ಕಾಲುವೆಯೊಂದನ್ನು ತುಂಗಭದ್ರಾ ಜಲಾಶಯಕ್ಕೆ ಜೋಡಿಸುವ ಮೂಲಕ ಇವೆರಡೂ ಜಲಾಶಯಗಳು ಎದುರಿಸುವ ಸಮಸ್ಯೆ ಪರಿಹರಿಸಬಹುದು. ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿಯನ್ನೂ ಇದರಿಂದ ಸಮರ್ಥವಾಗಿ ತಡೆದಂತಾಗುತ್ತದೆ. ನದಿ ನೀರನ್ನೇ ನೆಚ್ಚಿಕೊಂಡಿರುವ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳು ಹಾಗೂ ಆಂಧ್ರದ ರಾಯಲಸೀಮಾ ಪ್ರದೇಶದ ಜನರ ಸಮಸ್ಯೆಯೂ ಪರಿಹಾರವಾಗುತ್ತದೆ ಎಂದು ಸಂಸದ ಸಂಗಣ್ಣ ಕರಡಿ ಗಮನ ಸೆಳೆದಿದ್ದಾರೆ.

ಪ್ರವಾಹ ಕಾಲುವೆ ತುಂಗಭದ್ರಾ ನದಿಯ ಹಳ್ಳ ಮತ್ತು ಉಪನದಿಗಳನ್ನು ಹಾಯ್ದುಹೋಗುವ ಕಡೆ ಸಮತೋಲನ ಜಲಾಶಯಗಳನ್ನು ನಿರ್ಮಿಸಬಹುದು. ಪ್ರತಿ ವರ್ಷ ೪೦ ಟಿಎಂಸಿಗೂ ಹೆಚ್ಚು ನೀರನ್ನು ಈ ಮೂಲಕ ಪರಿಣಾಮಕಾರಿಯಾಗಿ ಬಳಸಬಹುದು ಎಂಬ ಅಂಶಕ್ಕೆ ಮನವಿಯಲ್ಲಿ ಒತ್ತು ಕೊಟ್ಟಿದ್ದಾರೆ.

ಸದರಿ ಪ್ರಸ್ತಾಪವನ್ನು ತೀವ್ರ ಕುತೂಹಲದಿಂದ ಓದಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಇದು ಕ್ರಾಂತಿಕಾರಿ ವಿಚಾರವಾಗಿದ್ದು, ಇದನ್ನು ನದಿ ಜೋಡಣೆ ಯೋಜನೆಯ ಪ್ರಮುಖ ಭಾಗವಾಗಿ ಪರಿಗಣಿಸಬಹುದು. ಈ ಕುರಿತು ತಾವು ಪ್ರಧಾನಿಯವರ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಬೆಳಗಾವಿ ಸಂಸದ ಸುರೇಶ ಅಂಗಡಿ ಸಹ ಹಾಜರಿದ್ದರು.

Please follow and like us:

Related posts