ತುಂಗಭದ್ರಾ ಕಾಲುವೆ ಪ್ರದೇಶಗಳಿಗೆ ಮಧ್ಯರಾತ್ರಿ ಡಿ.ಸಿ. ದಿಢೀರ್ ಭೇಟಿ

ನೀರು ಹರಿವು ಪ್ರಮಾಣ ಮತ್ತು ಬಂದೋಬಸ್ತ್ ಕುರಿತು ಖುದ್ದು ಪರಿಶೀಲನೆ


ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಶನಿವಾರದಂದು ತುಂಗಭದ್ರಾ ಎಡದಂಡೆ ಕಾಲುವೆ ಪ್ರದೇಶದುದ್ದಕ್ಕೂ ಮಧ್ಯರಾತ್ರಿ ದಿಢೀರ್ ಭೇಟಿ ನೀಡಿ, ಕಾಲುವೆಯಲ್ಲಿನ ನೀರಿನ ಹರಿವು ಪ್ರಮಾಣ ಹಾಗೂ ಬಂದೋಬಸ್ತ್ ಕುರಿತು ಖುದ್ದು ಪರಿಶೀಲನೆ ನಡೆಸಿದರು.
ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ರೈತರ ಪಾಲಿಗೆ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆ ಮೂಲಕ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ರೈತರ ಕೃಷಿ ಚಟುವಟಿಕೆಗಳಿಗಾಗಿ ಈಗಾಗಲೆ ನೀರು ಹರಿಸಲಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಯ ಟೇಲ್ ಎಂಡ್ ಪ್ರದೇಶಗಳಲ್ಲಿ ನೀರಿನ ಹರಿವು ಪ್ರಮಾಣ ಕಡಿಮೆ ಇರುವುದಾಗಿ, ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ಶನಿವಾರದಂದು ಮಧ್ಯರಾತ್ರಿ ತುಂಗಭದ್ರಾ ಎಡದಂಡೆ ಕಾಲುವೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶನಿವಾರದಂದು ರಾತ್ರಿ 10.30 ಗಂಟೆಗೆ ತಮ್ಮ ಭೇಟಿ ಕಾರ್ಯಕ್ರಮವನ್ನು ಪ್ರಾರಂಭಿಸಿದ ಜಿಲ್ಲಾಧಿಕಾರಿಗಳು, ಮೈಲ್ ಸಂಖ್ಯೆ 24 ರಿಂದ ಜಿಲ್ಲೆಯ ಗಡಿ ಪ್ರದೇಶವಾದ ಕಾರಟಗಿಯ ಮೈಲ್ ಸಂಖ್ಯೆ 47 ರವರೆಗೂ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನಾ ಕಾರ್ಯ ಬೆಳಗಿನ ಜಾವ 04 ಗಂಟೆಯವರೆಗೂ ನಡೆಯಿತು. ಮುಖ್ಯ ಕಾಲುವೆಯಿಂದ ಡಿಸ್ಟ್ರಿಬ್ಯೂಟರಿ ಕಾಲುವೆಗಳಿಗೆ ನೀರಿನ ಹರಿವು ಪ್ರಮಾಣ, ಗೇಜ್ ನಿರ್ವಹಣೆ ಕುರಿತಂತೆ ಖುದ್ದು ಮನವರಿಕೆ ಮಾಡಿಕೊಂಡರು. ಅಲ್ಲದೆ ಕಾಲುವೆಯುದ್ದಕ್ಕೂ ಪ್ರದೇಶಗಳಿಗೆ ಕಂದಾಯ, ನೀರಾವರಿ ಹಾಗೂ ಪೊಲೀಸ್ ಇಲಾಖೆಯನ್ನೊಳಗೊಂಡಂತೆ ಬಂದೋಬಸ್ತ್‍ಗಾಗಿ ಅಧಿಕಾರಿ, ಸಿಬ್ಬಂದಿಗಳನ್ನು ಈಗಾಗಲೆ ನಿಯೋಜಿಸಿದ್ದು, ಬಂದೋಬಸ್ತ್ ನಿರ್ವಹಣೆ ಕುರಿತಂತೆಯೂ ಪರಿಶೀಲನೆ ನಡೆಸಿದರು.