ತರಬೇತಿಗಳಿಂದ ಕೆಲಸದ ಸಾಮಾರ್ಥ್ಯ ಹಾಗೂ ಆಸಕ್ತಿ ಹೆಚ್ಚಳ : ರಾಜಶೇಖರ ಹಿಟ್ನಾಳ


ಕೊಪ್ಪಳ ಅ.   ತರಬೇತಿಗಳು ಕೆಲಸದ ಸಾಮಾರ್ಥ್ಯ ಹಾಗೂ ಕೆಲಸದ ಮೇಲಿನ ಆಸಕ್ತಿಯನ್ನು ಹೆಚ್ಚಿಸುತ್ತವೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಹೇಳಿದರು.
ಬೆಂಗಳೂರಿನ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರ, ಕೊಪ್ಪಳ ಜಿಲ್ಲಾಡಳಿತ, ನಿರ್ಮಿತಿ ಕೇಂದ್ರ ಮತ್ತು ಕಾರ್ಮಿಕ ಇಲಾಖೆ ಸಹಯೋಗದಲ್ಲಿ “ಡಾ. ಬಿ.ಆರ್. ಅಂಬೇಡ್ಕರ್ ಸಹಾಯ ಹಸ್ತ ಶ್ರಮ ಸಾಮಾರ್ಥ್ಯ ಯೋಜನೆ” ಅಡಿಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರದಂದು ಆಯೋಜಿಸಲಾದ “ಕೌಶಲ್ಯ ತರಬೇತಿ ಕಾರ್ಯಕ್ರಮ” ಉದ್ಘಾಟಿಸಿ ಅವರು ಮಾತನಾಡಿದರು.
ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಹೊಂದಿದ ದೇಶ ನಮ್ಮದಾಗಿದೆ. ಭಾರತ ದೇಶವು ನೈಸರ್ಗಿಕ ಮೂಲಭೂತ ಸಂಪನ್ಮೂಲಗಳನ್ನು ಹೊಂದಿದ ದೇಶವಾಗಿದೆ. ನೈಸರ್ಗಿಕ ಸಂಪನ್ಮೂಲಗಳು ಬಳಕೆಯಾಗುತ್ತಿಲ್ಲ ಇದಕ್ಕೆ ಮುಖ್ಯ ಕಾರಣ ಸಾಮಾರ್ಥ್ಯದ ಕೊರತೆ. ಕೆಲಸ, ಕಾರ್ಯಗಳ ಸಾಮಾರ್ಥ್ಯವು ಹೆಚ್ಚಾಗಬೇಕಾದರೆ ತರಬೇತಿಯು ಅತ್ಯವಶ್ಯಕವಾಗಿ ಬೇಕು. ತರಬೇತಿ ಎಂಬುವುದು ಸುಭದ್ರವಾದ ಒಂದು ಕಲ್ಲು. ಅದೇ ಒಂದೊಂದು ಕಲ್ಲುಗಳು ಮುಂದೆ ಒಂದು ವೀಶಾಲವಾದ ಕಂಬಗಳಾಗುತ್ತವೆ. ತರಬೇತಿಗಳಿಂದ ಕೆಲಸದ ಸಾಮಾರ್ಥ್ಯ, ಆಸಕ್ತಿ ಹೆಚ್ಚುವುದಲ್ಲದೇ ಆದಾಯದ ಮೂಲಗಳು ಸಹ ತನ್ನಷ್ಟಕ್ಕೆ ತಾವೇ ಸೃಷ್ಠಿಯಾಗುತ್ತವೆ. ಇದರಿಂದ ಕಾರ್ಮಿಕರಲ್ಲಿ ವಿಶ್ವಾಸವು ಹೆಚ್ಚುತ್ತವೆ. ಈ ನಿಟ್ಟಿನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಳ್ಳಲಾದ ಕೌಶಲ್ಯ ತರಬೇತಿ ಕಾರ್ಯಕ್ರಮವು ಪೂರಕವಾಗಿದೆ. ಕಾರ್ಮಿಕರು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು. ಕಾರ್ಮಿಕರೆಲ್ಲರು ಇಲಾಖೆಯಲ್ಲಿ ನೋಂದಾಯಿಸಿಕೊಂಡು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಮಾತನಾಡಿ, ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಸರ್ಕಾರವು ೨೦೦೭ ರಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದೆ. ಇದರಿಂದ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಕ್ಕೆ ವಿವಿಧ ಬಗೆಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ರಾಜ್ಯದ ೧೩ ಲಕ್ಷಕ್ಕೂ ಅಧಿಕ ಸಂಖ್ಯೆಯ ಕಾರ್ಮಿಕರನ್ನು ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಕಾರ್ಮಿಕರ ನೋಂದಣಿಗಾಗಿ ಸುಮಾರು ೯೨ ಸಾವಿರ ಅರ್ಜಿಗಳು ಬಂದಿದ್ದು, ಅದರಲ್ಲಿ ೪೧ ಸಾವಿರ ಅರ್ಜಿಗಳನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಅಪ್‌ರೂಲ್ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಇದರಿಂದಾಗಿ ಕೊಪ್ಪಳ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಪಡೆದಿದೆ. ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳ ಹಿಂದೆ ಕೇವಲ ೨೨ ಸಾವಿರ ಕಾರ್ಮಿಕರು ನೋಂದಾಯಿಸಿಕೊಂಡಿದ್ದು, ಆ ಸಂಖ್ಯೆ ಈಗ ೪೧ ಸಾವಿರಕ್ಕೆ ಏರಿಕೆಯಾಗಿದೆ. ನೋಂದಾಯಿತ ಕಾರ್ಮಿಕರಿಗೆ ಒಂದು ಸ್ಮಾರ್ಟ್ ಕಾರ್ಡ್ ಅನ್ನು ನೀಡಲಾಗುವುದು ಇದರಲ್ಲಿ ಒಂದು ಚಿಪ್ ಅಳವಡಿಸಲಾಗಿದ್ದು, ಕಾರ್ಮಿಕರ ಸಂಪೂರ್ಣ ವಿಳಾಸ ಹಾಗೂ ಮಂಡಳಿಯಿಂದ ಪಡೆದ ಸೌಲಭ್ಯಗಳ ವಿವರ ಸಿಗಲಿದೆ. ಕೆಲಸದ ಸ್ಥಳದಲ್ಲಿ ಸಾವು ಸಂಭವಿಸಿದ್ದಲ್ಲಿ ಅಂತಹ ಕಾರ್ಮಿಕನ ಕುಟುಂಬಕ್ಕೆ ಮಂಡಳಿಯಿಂದ ನೀಡುವ ಪರಿಹಾರವನ್ನು ಎರಡು ಲಕ್ಷದಿಂದ ಐದು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಮನೆ ನಿರ್ಮಾಣಕ್ಕೆ ಸಹಾಯಧನ ಹಾಗೂ ಸಾಲದೊಂದಿಗೆ ೫ ಲಕ್ಷದವರೆಗೆ ಸೌಲಭ್ಯ ನೀಡಲಾಗುವುದು. ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸಹ ನೀಡಲಾಗುವುದು. ಅಲ್ಲದೇ ಬಿ.ಇ. ಹಾಗೂ ಮೇಡಿಕಲ್ ಕೋರ್ಸ್‌ಗಳನ್ನು ಪೂರ್ಣಗೊಳಿಸಿ ಮುಂದಿನ ಉನ್ನತ ಶಿಕ್ಷಣ (ಮಾಸ್ಟರ್ ಡಿಗ್ರಿ) ವಿದ್ಯಾಭ್ಯಾಸ ಮಾಡಲಿಚ್ಛಿಸಿದ್ದಲ್ಲಿ, ಅಂತಹ ಕಾರ್ಮಿಕರ ಮಕ್ಕಳಿಗೆ ಸರ್ಕಾರದ ವತಿಯಿಂದ ಶುಲ್ಕವನ್ನು ಭರಿಸಲಾಗುವುದು. ಕಾರ್ಮಿಕರಿಗೆ ತರಬೇತಿ ನೀಡಲು ನಿರ್ಮಿತಿ ಕೇಂದ್ರಗಳ ಮೂಲಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ಅದರಲ್ಲಿ ತರಬೇತಿ ನೀಡಲಾಗುವುದು ಹಾಗೂ ಗುಣಮಟ್ಟದ ರೀಯಾಯತಿ ದರದಲ್ಲಿ ಮಷಿನರಿ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಅನುಕೂಲ ಮಾಡಲಾಗುವುದು. ಜಿಲ್ಲೆಗೆ ಒಂದು ತರಬೇತಿ ಕೇಂದ್ರವನ್ನು ಸ್ಥಾಪಿಸಿ ಎಂದು ಮಂಡಳಿಯು ತಿಳಿಸಿತ್ತು. ಆದರೆ ತಾಲೂಕಿಗೆ ಕನಿಷ್ಟ ಮೂರು ತರಬೇತಿ ಕೇಂದ್ರಗಳನ್ನು ಸ್ಥಾಪಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕುಗಳಲ್ಲಿ ಸೇರಿ ಜಿಲ್ಲೆಯಲ್ಲಿ ನಾಲ್ಕು ತರಬೇತಿ ಕೇಂದ್ರಗಳನ್ನು ಸ್ಥಾಪಿಸುವಂತೆ ಸಚಿವರು ಒಪ್ಪಿಗೆ ನೀಡಿದ್ದಾರೆ. ತರಬೇತಿ ಕೇಂದ್ರಗಳಿಗೆ ಕಾರ್ಮಿಕರ ಬಂಧಗಳನ್ನು ನೇಮಿಸಿ, ತರಬೇತಿಯನ್ನು ನೀಡುವದರ ಜೊತೆಗೆ ಉದ್ಯೋಗ ಕಲ್ಪಿಸಿಕೊಳ್ಳಲು ಸಾಲ ಸೌಲಭ್ಯಗಳನ್ನು ನೀಡಲಾಗುವುದು. ಸರ್ಕಾರದ ಈ ಎಲ್ಲಾ ಯೋಜನೆಗಳು ಇತರೇ ರಾಜ್ಯಗಳಿಗೆ ಮಾದರಿಯಾಗಿವೆ ಎಂದರು.
ಕೊಪ್ಪಳ ಜಿಲ್ಲಾ ಕಾರ್ಮಿಕ ಅಧಿಕಾರಿ ಹೊನ್ನಪ್ಪ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಕಾರ್ಮಿಕ ಇಲಾಖೆ ವತಿಯಿಂದ ನೀಡಲಾದ ಸೌಲಭ್ಯಗಳ ಕುರಿತು ವಿವರಿಸಿದರು. ತಾಲೂಕ ಪಂಚಾಯತ್ ಅಧ್ಯಕ್ಷ ಬಾಲಚಂದ್ರನ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್, ಕೊಪ್ಪಳ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಶಿಧರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎನ್.ಕೆ ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಿಲ್ಲೆಯ ಅರ್ಹ ಕಾರ್ಮಿಕ ಫಲಾನುಭವಿಗಳಿಗೆ ಹೆರಿಗೆ ಸಹಾಯಧನ, ಮದುವೆ ಸಹಾಯದನ ಹಾಗೂ ಕಾರ್ಮಿಕ ಇಲಾಖೆ ಯೋಜನೆಗಳಡಿ ನೀಡುವ ವಿವಿಧ ಸೌಲಭ್ಯಗಳ ಆದೇಶ ಪ್ರಮಾಣ ಪತ್ರವನ್ನು ಹಾಗೂ ಸ್ಮಾರ್ಟ್ ಕಾರ್ಡ್ ಅನ್ನು ಅಧಿಕೃತವಾಗಿ ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ್ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Please follow and like us:
error