ತತ್ವಪದಗಳ ಮೂಲಕ ಸಮಾಜದ ಅಂಕು ಡೊಂಕುಗಳ ತಿದ್ದಿದ ಸಂತ ಶಿಶುನಾಳ ಶರೀಪ್

ಕೊಪ್ಪಳ : ಸಮಾಜವು ಮೌಡ್ಯ ಮತ್ತು ಕಂದಾಚಾರದಲ್ಲಿ ಮುಳುಗಿದ್ದ ಸಂದರ್ಭದಲ್ಲಿ ತಮ್ಮ ತತ್ವ ಪದಗಳ ಮೂಲಕ ಎಲ್ಲರಿಗೂ ತಿಳಿ ಹೇಳಿದವರು ಸಂತ ಶಿಶುನಾಳ ಶರೀಫ. ಸಮಾಜದ ಅಂಕುಡೊಂಕುಗಳ ಬಗ್ಗೆ ತಿಳಿ ಹೇಳಿ ಗುರು ಶಿಷ್ಯರ ಸಂಬಂದಕ್ಕೆ ಮಾದರಿಯಾದವರು ಷರೀಪರು ಎಂದು ಮುಖ್ಯೋಪಾದ್ಯಾಯನಿ ರೇಣುಕಾ ಅತ್ತನೂರು ಹೇಳಿದರು. ಅವರಿಂದು ಬಹಾದ್ದೂರ ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಸಂತ ಶಿಶುನಾಳ ಶರೀಫ ರ ೧೯೯ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶರೀಪರ ಭಾವಚಿತ್ರಕ್ಕೆ ಹೂಮಾಲೆ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂತ ಶಿಶುನಾಳ ಶರೀಪ್ ರು ಸನ್ನಿವೇಶ ಕ್ಕೆ ಹೊಂದುವ ಹಾಡುಗಳನ್ನು ರಚಿಸಿದರು. ಜನರ ಮೌಢ್ಯವನ್ನು ಕಳೆಯಲು ನಿರಂತರವಾಗಿ ಪ್ರಯತ್ನಿಸಿದ್ದರು. ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದ ಕವಿ ಸಂತ ಶಿಶುನಾಳ ಶರೀಫ ಎಂದು ಹೇಳಿದ ಅವರು ಶರೀಪರ ಜೀವನ ಚರಿತ್ರೆ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪಸ್ಟ್ ನ್ಯೂಜ್ ಜಿಲ್ಲಾ ವರದಿಗಾರ ರಾಜು ಬಿ.ಆರ್ ಮಾತನಾಡಿ ಸಂತ ಎಂದರೆ ಸಮಾಜಕ್ಕಾಗಿ ಸರ್ವವನ್ನೂ ತ್ಯಾಗ ಮಾಡಿ ಒಳಿತನ್ನು ಬಯಸುವವನು ಎಂದರ್ಥ ಗುರುವಿಗೆ ಶಿಷ್ಯಂದಿರು ಯಾವ ರೀತಿಯ ಗೌರವ ನೀಡಬೇಕು ಎನ್ನುವುದಕ್ಕೆ ಷರೀಪರು ಉತ್ತಮವಾದ ಉದಾಹರಣೆ.. ಭಾವೈಕ್ಯಬಂಧು, ಕವಿ ತತ್ವಪದಕಾರ ಷರೀಪ್ ನಮ್ಮೆಲ್ಲರಿಗೂ ಮಾದರಿ. ಮಕ್ಕಳು ಮೊಬೈಲ್ ನಲ್ಲಿ ಕೇವಲ ಆಟವಾಡುವುದಲ್ಲ ನೀತಿ ಕತೆಗಳೂ ಸಿಗುತ್ತವೆ ಅದನ್ನು ನೋಡಬೇಕು ಎಂದರು. ಇನ್ನೊರ್ವ ಮುಖ್ಯ ಅತಿಥಿಗಳಾಗಿದ್ದ ಸುದ್ದಿಟಿವಿಯ ಜಿಲ್ಲಾವರದಿಗಾರ ಶಿವಕುಮಾರ ಗಂಗಾವತಿ ಮಾತನಾಡಿ ಶಿಷ್ಯನಾದವನು ಗುರುವಿನ ಗುಲಾಮನಾಗಬೇಕು ಅವಾಗಲೇ ಸಾಧನೆ ಸಾಧ್ಯ. ಶರೀಪ್ ರು ನಿಜವಾದ ಶಿಷ್ಯ ಯಾವ ರೀತಿ ಇರಬೇಕು ಎನ್ನುವದನ್ನು ತೋರಿಸಿಕೊಟ್ಟವರು ಅವರ ಜೀವನ ನಮಗೆಲ್ಲಾ ಮಾರ್ಗದರ್ಶನ ಎಂದು ಹೇಳಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಕನ್ನಡನೆಟ್.ಕಾಂ ಸಂಪಾದಕ ಹೆಚ್.ವಿ.ರಾಜಾಬಕ್ಷಿ ವಹಿಸಿದ್ದರು. ಶಿಕ್ಷಕ ಮಾರುತಿ ಸ್ವಾಗತ ಮತ್ತು ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ಸಿಬ್ಬಂದಿ ಹಾಗೂ ಮಕ್ಕಳು ಭಾಗವಹಿಸಿದ್ದರು.

Please follow and like us:
error

Related posts