ಡಿ.ವೈ.ಎಸ್.ಪಿ ರುದ್ರಪ್ಪ ಎಸ್.ಉಜ್ಜನಕೊಪ್ಪರಿಗೆ ರಾಷ್ಟ್ರಪತಿಗಳ ಪ್ರಶಂಸನೀಯ ಪದಕ

ರುದ್ರಪ್ಪ ಎಸ್.ಉಜ್ಜನಕೊಪ್ಪ, ಡಿ.ವೈ.ಎಸ್.ಪಿ. ಭ್ರಷ್ಟಾಚಾರ ನಿಗ್ರಹದಳ, ಕೊಪ್ಪಳ ಇವರು ಸನ್ ೧೯೯೯ ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪಿ.ಎಸ್.ಐ. ಅಂತಾ ನೇಮಕಗೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಿ.ಎಸ್.ಐ, ಸಿ.ಪಿ.ಐ. ಆಗಿ ಕರ್ತವ್ಯ ನಿರ್ವಹಿಸಿ ಸದ್ಯ ಕೊಪ್ಪಳದ ಭ್ರಷ್ಟಾಚಾರ ನಿಗ್ರಹದಳದಲ್ಲಿ ಡಿ.ವೈ.ಎಸ್.ಪಿ. ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಗೆ ನೇಮಕವಾದಾಗಿನಿಂದಲೂ ಶಿಸ್ತು, ಕರ್ತವ್ಯನಿಷ್ಠೆ, ಸಮಯಪ್ರಜ್ಞೆಯೊಂದಿಗೆ ಛಲದಿಂದ ಕರ್ತವ್ಯ ನಿರ್ವಹಿಸಿ ಇಲಾಖೆಯ, ಹಿರಿಯ ಅಧಿಕಾರಿಗಳ, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕರ್ತವ್ಯ ನಿರ್ವಹಿಸಿದ ಎಲ್ಲಾ ಸ್ಥಳಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಕರ್ತವ್ಯ ನಿರ್ವಹಿಸಿ ಇಲಾಖೆಯ ಘನತೆಯನ್ನು ಹೆಚ್ಚಿಸಿರುತ್ತಾರೆ.
ಸನ್ ೨೦೦೫ ರಲ್ಲಿ ಅತಿಯಾದ ಮಳೆ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಯಿಂದ ವಿವಿಧ ಜಲಾಶಯಗಳಿಂದ ಒಮ್ಮೇಲೆ ನದಿಗಳಿಗೆ ನೀರು ಬಿಟ್ಟಿದ್ದರಿಂದ ಬೆಳಗಾವಿ ಜಿಲ್ಲೆಯ ಗಡಿಭಾಗದ ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಪಂಚಗಂಗಾ ನದಿಗಳಲ್ಲಿ ಮಹಾಪೂರ ಬಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಲವಾರು ಹಳ್ಳಿಗಳಿಗೆ ನೀರು ನುಗ್ಗಿ ಜಲಾವೃತಗೊಂಡಾಗ ಇರುವ ಕೆಲವೇ ಕೆಲವು ಸಾಮಗ್ರಿಗಳೊಂದಿಗೆ ಸ್ಥಳೀಯರ ಸಹಾಯ ಪಡೆದು ದೇಶಿಯ ಬೋಟ್‌ಗಳ ಸಹಾಯದಿಂದ ಹಗಲು ರಾತ್ರಿ ಎನ್ನದೇ ಜೀವದ ಹಂಗು ತೊರೆದು ಸಾವಿರಾರು ಜನರ ಹಾಗೂ ಜಾನುವಾರುಗಳನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ತಲುಪಿಸುವಲ್ಲಿ ಇವರ ಕಾರ್ಯ ಶ್ಲಾಘನೀಯವಾದುದು. ಈ ಕಾರ್ಯಕ್ಕಾಗಿ ಅಂದಿನ ಮಾನ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು(ಕಾನೂನು ಮತ್ತು ಸುವ್ಯವಸ್ಥೆ) ರವರು ಕರ್ತವ್ಯ ಮೆಚ್ಚಿ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿರುತ್ತಾರೆ.
ಈವರೆಗೆ ಇವರು ವೃತ್ತಿಪರತೆಯೊಂದಿಗೆ ಅನೇಕ ಕೊಲೆ, ಸುಲಿಗೆ, ಡಕಾಯಿತಿ ಪ್ರಕರಣಗಳನ್ನು ಭೇದಿಸಿ ಉತ್ಕೃಷ್ಟ ರೀತಿಯಲ್ಲಿ ವೈಜ್ಞಾನಿಕವಾಗಿ ತನಿಖೆ ನಡೆಸಿ ಅನೇಕ ಪ್ರಕರಣಗಳಲ್ಲಿ ಆರೋಪಿತರಿಗೆ ಜೀವಾವಧಿ ಶಿಕ್ಷೆಯಾಗುವಂತೆ ಮಾಡಿರುತ್ತಾರೆ. ಗಂಗಾವತಿ ಗ್ರಾಮೀಣ ಠಾಣೆಯ ಪ್ರಕರಣ ಸಂಖ್ಯೆ: ೧೯೧/೨೦೧೧, ಕಲಂ: ೩೦೨, ೨೦೧ ರೆ/ವಿ. ೩೪ ಐ.ಪಿ.ಸಿ. ಕೊಲೆ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿಯ ದೇಹ ಸಿಗದೇ ಇದ್ದರೂ ಸಹ ಆ ಪ್ರಕರಣದಲ್ಲಿ ಮೂರು ಜನ ಆರೋಪಿತರಿಗೆ ಜೀವಾವಧಿ ಶಿಕ್ಷೆಯಾಗಿದ್ದು, ಇವರ ತನಿಖೆಗೆ ಹಿಡಿದ ಕೈಗನ್ನಡಿಯಾಗಿದೆ.
ಗದಗ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಡೆದ ಹಲವಾರು ಪೆಟ್ರೋಲ್ ಪಂಪ್ ಡಕಾಯಿತಿ, ರೈಲ್ವೇ ಡಕಾಯಿತಿ ಪ್ರಕರಣಗಳನ್ನು ಭೇದಿಸಿ ಕೊರಚರು ಹಾಗೂ ಹರಣಶಿಕಾರಿ ಡಕಾಯಿತಿ ಜನರ ತಂಡಗಳನ್ನು ಹಿಡಿದು ವಿವಿಧ ಜಿಲ್ಲೆಗಳ ಹಲವಾರು ಪ್ರಕರಣಗಳನ್ನು ಪತ್ತೆಮಾಡಿ ಇಲಾಖೆಯ ಘನತೆಯನ್ನು ಹೆಚ್ಚಿಸಿದ್ದಾರೆ. ಈ ಕಾರ್ಯವನ್ನು ಶ್ಲಾಘಿಸಿ ಮಾನ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು(ರೈಲ್ವೇ) ರವರು ವಿಶೇಷ ನಗದು ಬಹುಮಾನವನ್ನು ನೀಡಿರುತ್ತಾರೆ.
ಬೆಳಗಾವಿ ಜಿಲ್ಲೆಯಲ್ಲಿ ಸನ್ ೨೦೦೧ ರಿಂದ ೨೦೦೪ ರವರೆಗೆ ನಡೆದ ಸರಣಿ ಕೋಮುಗಲಭೆಗಳಲ್ಲಿ ದೈರ್ಯ, ಸಾಹಸದಿಂದ ಮುನ್ನುಗ್ಗಿ ಸಮಯಪ್ರಜ್ಞೆಯೊಂದಿಗೆ ಕೋಮುಪ್ರಚೋದಿತ ಜನರ ಗುಂಪುಗಳನ್ನು ಹತೋಟಿಗೆ ತಂದು ಸಾರ್ವಜನಿಕ ಶಾಂತಿ, ಸಾರ್ವಜನಿಕ ಜೀವ, ಆಸ್ತಿಪಾಸ್ತಿ ರಕ್ಷಿಸುವಲ್ಲಿ ಇವರ ಕಾರ್ಯ ಮಹತ್ತರವಾದುದು.
ಸನ್ ೨೦೧೬ ರಲ್ಲಿ ನಡೆದ ಆಲ್ ಇಂಡಿಯಾ ಪೊಲೀಸ್ ಡ್ಯೂಟಿ ಮೀಟ್-೨೦೧೬ ರಲ್ಲಿ ಕೊಪ್ಪಳ ಜಿಲ್ಲೆಯಿಂದ ಆಯ್ಕೆಗೊಂಡು ವಲಯ ಮಟ್ಟದಲ್ಲಿ ೦೬ ಪದಕಗಳನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ೦೨ ಚಿನ್ನದ ಹಾಗೂ ೦೧ ಕಂಚು ಒಟ್ಟು ೦೩ ಪದಕಗಳನ್ನು ಪಡೆದು ರಾಷ್ಟ್ರಮಟ್ಟದ ಆಲ್ ಇಂಡಿಯಾ ಪೊಲೀಸ್ ಡ್ಯೂಟಿ ಮೀಟ್-೨೦೧೬ ಕ್ಕೆ ಆಯ್ಕೆಗೊಂಡು ಕರ್ನಾಟಕ ರಾಜ್ಯ ಪೊಲೀಸ್ ತಂಡದ ನಾಯಕನಾಗಿ ಆಯ್ಕೆಗೊಂಡು, ಕರ್ನಾಟಕ ತಂಡವು ರಾಷ್ಟ್ರಮಟ್ಟದಲ್ಲಿ ನಡೆದ ಆಲ್ ಇಂಡಿಯಾ ಪೊಲೀಸ್ ಡ್ಯೂಟಿ ಮೀಟ್-೨೦೧೬ ರಲ್ಲಿ ದೇಶದ ಎಲ್ಲಾ ರಾಜ್ಯಗಳ ಪೊಲೀಸ್ ತಂಡಗಳೊಂದಿಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು ೧೨ ಪದಕಗಳನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಸರ್ವಶ್ರೇಷ್ಠ ತಂಡವೆಂದು ಹೊರಹೊಮ್ಮಿ ಕರ್ನಾಟಕ ರಾಜ್ಯ ಪೊಲೀಸ್ ಕೀರ್ತಿ ಪತಾಕೆಯನ್ನು ಇಮ್ಮಡಿಗೊಳಿಸುವಲ್ಲಿ ಇವರ ಪಾತ್ರ ಪ್ರಮುಖವಾದುದು. ಕರ್ನಾಟಕ ರಾಜ್ಯದ  ಮುಖ್ಯಮಂತ್ರಿಗಳು ತಂಡಕ್ಕೆ ೨೫ ಲಕ್ಷಗಳ ನಗದು ಪುರಸ್ಕಾರವನ್ನು ನೀಡಿ ಗೌರವಿಸಿರುತ್ತಾರೆ.
ಇವರು ತಮ್ಮ ಸುದೀರ್ಘ ಸೇವೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಗೌರವ ಮತ್ತು ಘನತೆಯನ್ನು ಹೆಚ್ಚಿಸುವಂತ ಕಾರ್ಯ ಮಾಡಿದ್ದು, ಸದರಿಯವರಿಗೆ ಸ್ವಾತಂತ್ರೋತ್ಸವ ದಿನಾಚರಣೆ-೨೦೧೮ ರಂದು  ರಾಷ್ಟ್ರಪತಿಗಳ ಪ್ರಶಂಸನೀಯ ಪದಕಕ್ಕೆ ಆಯ್ಕೆಯಾಗಿದ್ದಾರೆ.

Please follow and like us:
error

Related posts