ಟಿ.ವಿ. ಮಾಧ್ಯಮದಿಂದ ಗ್ರಾಮೀಣ ಸಾಂಸ್ಕೃತಿಕ ಕಲೆಗಳಿಗೆ ಅಳಿವಿನ ಆತಂಕವಿದೆ-ರವಿ ತಿರ್ಲಾಪುರ

: ಟಿ.ವಿ ಮತ್ತು ಸಿನಿಮಾ ಮಾಧ್ಯಮಗಳೇ ಜನರ ಬಹುತೇಕ ಮನರಂಜನೆಯ ಮಾಧ್ಯಮವಾಗುತ್ತಿರುವುದರಿಂದ, ಗ್ರಾಮೀಣ ಸೊಗಡಿನ ಪಾರಂಪರಿಕ ಸಾಂಸ್ಕೃತಿಕ ಕಲೆಗಳು ಅಳಿವಿನ ಆತಂಕವನ್ನು ಎದುರಿಸುತ್ತಿವೆ ಎಂದು ಕೊಪ್ಪಳ ನೂತನ ಉಪವಿಭಾಗಾಧಿಕಾರಿ ರವಿ ತಿರ್ಲಾಪುರ ಅವರು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನ ಆವರಣದಲ್ಲಿ ಗಿರಿಜನ ಉಪಯೋಜನೆಯಡಿ ಶುಕ್ರವಾರದಂದು ಆಯೋಜಿಸಿದ್ದ ಗಿರಿಜನ ಉತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ದಿನನಿತ್ಯದ ಬದುಕಿನ ಜಂಜಾಟದಲ್ಲಿ ಬೇಸರಗೊಂಡ ಮನಸ್ಸುಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಧಾನ, ಉಲ್ಲಾಸ ನೀಡುವುದರ ಜೊತೆಗೆ ಮನೋವಿಕಾಸಕ್ಕೂ ಸಹಕಾರಿಯಾಗಲಿದೆ. ಆದರೆ ಟಿ.ವಿ. ಮತ್ತು ಸಿನಿಮಾ ಮಾಧ್ಯಮಗಳೇ ಜನರ ಬಿಡುವಿನ ಸಮಯವನ್ನು ಹೆಚ್ಚಾಗಿ ಆಕ್ರಮಿಸಿಕೊಳ್ಳುತ್ತಿದ್ದು, ಗ್ರಾಮೀಣ ಸೊಗಡಿನ ಹಾಗೂ ಪಾರಂಪರಿಕ ಸಾಂಸ್ಕೃತಿಕ ಕಲೆಗಳು ಆತಂಕಕ್ಕೆ ಸಿಲುಕಿವೆ. ಇಂತಹ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಾನಪದ ಕಲೆಗಳ ಪ್ರದರ್ಶನಕ್ಕೆ ಹಲವು ಬಗೆಯ ಕಾರ್ಯಕ್ರಮಗಳನ್ನು ರೂಪಿಸಿ, ವೇದಿಕೆ ಕಲ್ಪಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರ ಹಲವಾರು ಉತ್ಸವಗಳನ್ನು ಆಚರಿಸುತ್ತಿರುವುದು ಕೂಡ ಇದೇ ಉದ್ದೇಶಕ್ಕಾಗಿಯೇ ಆಗಿದೆ. ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಬಹಳಷ್ಟು ಮುಂದುವರೆದಿರುವ ನಾವು, ಕಲೆ, ಸಂಸ್ಕೃತಿಯಲ್ಲಿಯೂ ಇಡೀ ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದ್ದೇವೆ. ನಮ್ಮ ದೇಶದಲ್ಲಿರುವಷ್ಟು ಕಲೆ, ಸಂಸ್ಕೃತಿಯ ವೈವಿಧ್ಯತೆ ಪ್ರಪಂಚದ ಯಾವುದೇ ದೇಶದಲ್ಲಿ ಇಲ್ಲ. ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ, ನಮ್ಮ ನಾಡಿನ ಕಲೆಗಳನ್ನು ಉಳಿಸಲು ನಾವೆಲ್ಲ ಮುಂದಾಗಬೇಕು. ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ದೊರೆಯುವಂತಾಗಬೇಕು ಎಂದು ಉಪವಿಭಾಗಾಧಿಕಾರಿ ರವಿ ತಿರ್ಲಾಪುರ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹುಲಿಗೆಮ್ಮ ದೇವಸ್ಥಾನ ಎಂದಿಗೂ ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತದೆ. ಪ್ರತಿ ತಿಂಗಳೂ ದೇವಸ್ಥಾನದ ಆವರಣದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಬೇಕು ಇದಕ್ಕೆ ಎಲ್ಲ ರೀತಿಹ ಸಹಕಾರವನ್ನು ನೀಡಲಾಗುವುದು. ಕಲಾವಿದರನ್ನು ಬೆಳೆಸಬೇಕು, ಸಂಸ್ಕೃತಿಯನ್ನು ಉಳಿಸಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಾಬು ಅವರು ಸ್ವಾಗತಿಸಿದರು. ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್, ಶಿರಸ್ತೆದಾರ್ ಹೇಮಂತಕುಮಾರ, ಗಣ್ಯರಾದ ಕಪ್ಪತೆಪ್ಪ, ಪಿ. ಹಿರೇಮಠ, ಸುಭಾಶ್ಚಂದ್ರ ಸೇರಿದಂತೆ ಹಲವು ಉಪಸ್ಥಿತರಿದ್ದರು. ಶೃತಿ ಹ್ಯಾಟಿ ಪ್ರಾರ್ಥಿಸಿದರು.
ಗಿರಿಜನ ಉತ್ಸವದ ಅಂಗವಾಗಿ ಜರುಗಿದ ಸಾಂಸ್ಕೃತಿಕ ಕಲಾ ಪ್ರದರ್ಶನದಲ್ಲಿ ಕುಣಿಕೇರಿಯ ಯಮನೂರಪ್ಪ ವಾಲಿಕಾರ ಹಾಗೂ ತಂಡದಿಂದ ಜಾಂಜ್ ಮೇಳ. ಕಂಪ್ಲಿಯ ಶಿಕಾರಿ ರಾಮು ಹಾಗೂ ತಂಡದಿಂದ ತಾಷಾ ರಾಂಡೋಲ್, ಜಾನಕಿ ಹಾಗೂ ತಂಡದಿಂದ ಹಕ್ಕಿ-ಪಿಕ್ಕಿ-ನೃತ್ಯ. ಭಾಗ್ಯನಗರದ ನಾಗರಾಜ ಶ್ಯಾವಿ ಹಾಗೂ ತಂಡದಿಂದ ಬಾನ್ಸುರಿ ವಾದನ. ಕೇಸರಹಟ್ಟಿಯ ಸಂಗೀತಾ ಹಾಗೂ ತಂಡದಿಂದ ಸುಗಮ ಸಂಗೀತ. ಯರೇಹಂಚಿನಾಳದ ಹನುಮಂತಪ್ಪ ಎಸ್. ನರೇಗಲ್ ಹಾಗೂ ತಂಡದಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ. ನವಲಿಯ ಗೋಪಾಲನಾಯಕ ಹಾಗೂ ತಂಡದಿಂದ ಜಾನಪದ ಸಂಗೀತ. ಹುಲಿಗಿಯ ಶೃತಿ ಹ್ಯಾಟಿ ಹಾಗೂ ತಂಡದಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ. ತೆಗ್ಗಿಹಾಳದ ಬಸಪ್ಪ ಚೌಡ್ಕಿ ಹಾಗೂ ತಂಡದಿಂದ ಚೌಡ್ಕಿ ಪದಗಳು. ಹಟ್ಟಿಯ ರಾಮಪ್ಪ ಪೂಜಾರ ಹಾಗೂ ತಂಡದಿಂದ ಸುಗಮ ಸಂಗೀತ. ತರಲಕಟ್ಟಿಯ ರಂಗಪ್ಪ ಗೌಡ ಹಾಗೂ ತಂಡದಿಂದ ರಂಗ ಗೀತೆ. ಕುಷ್ಟಗಿಯ ಜಾನಪದ ಪ್ರಶಸ್ತಿ ಪುರಸ್ಕೃತ ವಾಲ್ಮೀಕಿ ಯಕ್ಕರನಾಳ ಅವರಿಂದ ರಿವಾಯತ್ ಪದಗಳು. ಕೊಪ್ಪಳದ ನಾಗಪ್ಪ ಯಂಕಪ್ಪ ತಳವಾರ ಹಾಗೂ ತಂಡದಿಂದ ರಂಗ ಗೀತೆಗಳು. ಹಾದರಮಗ್ಗಿಯ ಯಂಕಪ್ಪ ದ್ಯಾಮಪ್ಪ ಪೂಜಾರ ಹಾಗೂ ತಂಡದಿಂದ ಹಂತಿ ಪದ. ಚನ್ನಪ್ಪನಹಳ್ಳಿಯ ಹನುಮಂತಪ್ಪ ವಾಲ್ಮೀಕಿ ಹಾಗೂ ತಂಡದಿಂದ ನೃತ್ಯ ಸಮೂಹ. ಮ್ಯಾದನೇರಿ ದೇವಂದ್ರಗೌಡ ಪೂಜಾರ ಹಾಗೂ ತಂಡದಿಂದ ಜಾನಪದ ಸಂಗೀತ. ನೀರಲಗಿಯ ದ್ಯಾಮಪ್ಪ ಸಂಗಪ್ಪ ತಳವಾರ ಹಾಗೂ ತಂಡದಿಂದ ರಂಗ ಗೀತೆ. ಕೊಪ್ಪಳದ ಸೌಂದರ್ಯ ಹಾಗೂ ತಂಡದಿಂದ ಸಮೂಹ ನೃತ್ಯ. ಮುದ್ದಾಬಳ್ಳಿಯ ಕನಕಪ್ಪ ಪೂಜಾರರಿಂದ ರಂಗ ಗೀತೆ. ಸೋಮಸಾಗರದ ಕನಕನಗೌಡ ಪೋಲಿಸ್ ಪಾಟೀಲ್‌ರಿಂದ ತತ್ವ ಪದ. ಯಡ್ಡೋಣಿಯ ವೆಂಕಪ್ಪ ಬಸಪ್ಪ ತೋಟದರಿಂದ ರಂಗ ಗೀತೆ. ಮನ್ನಾಪುರದ ಕರೇಗೌಡ ಬುಡಕುಂಟಿಯಿಂದ ಬಯಲಾಟ ಪದಗಳು. ಮಾನಪ್ಪ ಬೈರಪ್ಪ ವಜ್ರಬಂಡಿಯಿಂದ ರಂಗ ಗೀತೆ. ಹನುಮೇಶ ಕೆ. ಹಂಚಿನಾಳ ಹಾಗೂ ತಂಡದಿಂದ ಜಾನಪದ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಆಕರ್ಷಿಸಿದವು. ಪ್ರಾಣೇಶ ಪೂಜಾರ ಹಾಗೂ ತಂಡದಿಂದ ಪ್ರದರ್ಶಿತಗೊಂಡ ವೀರ ಸಂಗೊಳ್ಳಿ ರಾಯಣ್ಣ ನಾಟಕ ನೆರೆದಿದ್ದ ಜನರ ಪ್ರಶಂಸೆಗೆ ಪಾತ್ರವಾಯಿತು.

Please follow and like us:
error