fbpx

ಜ. 16 ರಂದು ಪಿಡಿಓ, ಅಂಗನವಾಡಿ ಮೇಲ್ವಿಚಾರಕರಿಗೆ ಕಾರ್ಯಾಗಾರ : ಡಾ. ವನಿತಾ ತೊರವಿ

ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕತೆ ದುಷ್ಪರಿಣಾಮ, ನಿಷೇಧ ಕಾಯ್ದೆ ಕುರಿತು ಜಾಗೃತಿ

ಕೊಪ್ಪಳ ಜ. : ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕತೆಯ ದುಷ್ಪರಿಣಾಮಗಳು, ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಕುರಿತು ಎಲ್ಲಾ ಗ್ರಾ.ಪಂ. ಪಿಡಿಓ, ಅಂಗನವಾಡಿ ಮೇಲ್ವಿಚಾರಕಿಯರಿಗೆ ಮತ್ತು ಸಮೂಹ ಸಂಪನ್ಮೂಲ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಜ. 16 ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ವನಿತಾ ತೊರವಿ ಅವರು ಹೇಳಿದರು.
ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕತೆಯ ದುಷ್ಪರಿಣಾಮಗಳು, ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಬಗ್ಗೆ ಗ್ರಾ.ಪಂ. ಪಿಡಿಓ, ಅಂಗನವಾಡಿ ಮೇಲ್ವಿಚಾರಕಿಯರಿಗೆ ಮತ್ತು ಸಮೂಹ ಸಂಪನ್ಮೂಲ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸುವ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಛೇರಿಯಲ್ಲಿ ಶನಿವಾರದಂದು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲೆಯ 8, 9 ಹಾಗೂ 10ನೇ ತರಗತಿಯ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಜ. 16 ರಿಂದ 30 ರವರೆಗೆ “ಸಂದಿಗ್ಧ” ಚಲನಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಗ್ರಾ.ಪಂ. ಪಿಡಿಓ, ಅಂಗನವಾಡಿ ಮೇಲ್ವಿಚಾರಕಿಯರಿಗೆ ಮತ್ತು ಸಮೂಹ ಸಂಪನ್ಮೂಲ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಸಹ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಜ. 17 ರಂದು ಬೆಳಿಗ್ಗೆ 09 ಗಂಟೆಗೆ ಕೊಪ್ಪಳ ನಗರದಲ್ಲಿ ಬೃಹತ್ ಜಾಗೃತಿ ಜಾಥಾ ಮತ್ತು ಬೆಳಿಗ್ಗೆ 11 ಗಂಟೆಗೆ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಜಾಗೃತಿ ಜಾಥಾ ಮತ್ತು ಕಾರ್ಯಕ್ರಮವು ಬಾಲ್ಯ ವಿವಾಹ, ಬಾಲ ಕಾರ್ಮಿಕತೆಯ ದುಷ್ಪರಿಣಾಮಗಳು, ಬಾಲ್ಯ ವಿವಾಹ ನಿಷೇಧ ಕಾಯ್ದೆ-2006, ಸ್ವಚ್ಛ ಭಾರತ, ಸರ್ಕಾರಿ ಶಾಲೆಗಳ ಉನ್ನತೀಕರಣ ಹಾಗೂ ಶಾಲೆಯಿಂದ ದೂರ ಉಳಿದ ಮಕ್ಕಳಿಗೆ ಮರಳಿ ಶಾಲೆಗೆ ತರುವ ಕುರಿತು ಅರಿವು ಮೂಡಿಸಲಾಗುವುದು. ಬೃಹತ್ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಶ್ರೀ ಗವಿಮಠದ ಸ್ವಾಮೀಜಿ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಓ ವೆಂಕಟ್‍ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ಸೇರಿದಂತೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು, ಚಲನಚಿತ್ರ ನಟ, ನಟಿಯರು ಮತ್ತು ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜಾಥಾ ಮತ್ತು ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಇಲಾಖೆ ಅಧಿಕಾರಿಗಳು ಆಗಮಿಸಿ ಈ ಆಂಧೋಲನವನ್ನು ಯಶಸ್ವಿಗೊಳಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ವನಿತಾ ತೊರವಿ ಅವರು ಮನವಿ ಮಾಡಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಈರಣ್ಣ ಪಂಚಾಳ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ಯುನೆಸ್ಸೆಫ್ ಜಿಲ್ಲಾ ಮಕ್ಕಳ ರಕ್ಷಣ ಯೋಜನೆಯ ಹರೀಶ್ ಜೋಗಿ, ವಾರ್ತಾ ಇಲಾಖೆಯ ಎಂ. ಅವಿನಾಶ ಸೇರಿಂದತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

Please follow and like us:
error
error: Content is protected !!