ಜ. ೨೭ ರಿಂದ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಚಲನ ಚಿತ್ರೋತ್ಸವ- ಡಾ. ರುದ್ರೇಶ್ ಘಾಳಿ

ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆ, ಚಿಕ್ಕಬಳ್ಳಾಪುರ ಇವರ ವತಿಯಿಂದ ಜಿಲ್ಲಾಡಳಿತದ ಸಹಯೋಗದಲ್ಲಿ ಶಾಲಾ ಮಕ್ಕಳ ಚಲನಚಿತ್ರೋತ್ಸವ ಜ. ೨೭ ರಿಂದ ಫೆ. ೦೨ ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಶಿಕ್ಷಣ ಇಲಾಖೆಯವರು ಶಾಲಾ ಮಕ್ಕಳಿಗೆ ಚಲನಚಿತ್ರ ವೀಕ್ಷಣೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.
ಜಿಲ್ಲೆಯಲ್ಲಿ ಶಾಲಾ ಮಕ್ಕಳ ಚಲನ ಚಿತ್ರೋತ್ಸವ ಏರ್ಪಡಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲಾ ಮಕ್ಕಳಿಗಾಗಿ ಚಿಕ್ಕಬಳ್ಳಾಪುರದ ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆ, ಚಿಕ್ಕಬಳ್ಳಾಪುರ ಇವರ ವತಿಯಿಂದ ಮಕ್ಕಳ ಚಲನ ಚಿತ್ರೋತ್ಸವ ಏರ್ಪಡಿಸಲಾಗಿದೆ. ಜಿಲ್ಲೆಯ ಕುಷ್ಟಗಿಯಲ್ಲಿ ಬಸವರಾಜ, ಮಾರುತಿ ಚಿತ್ರಮಂದಿರಗಳನ್ನು ಆಯ್ಕೆ ಮಾಡಲಾಗಿದೆ. ಗಂಗಾವತಿಯಲ್ಲಿ ಮೋಹಿಯುದ್ದೀನ್, ಅಮರ, ಕವಿತಾ, ಕನಕದುರ್ಗ, ಶಿವೆ ಚಿತ್ರಮಂದಿರಗಳು. ಕನಕಗಿರಿಯ ರಾಧಿಕಾ, ಕಾರಟಗಿಯ ಪದ್ಮಾವತಿ, ಯಲಬುರ್ಗಾದ ಪ್ರವೀಣ, ಕುಕನೂರಿನ ಹಿಮಾಲಯ ಚಿತ್ರಮಂದಿರಗಳನ್ನು ಚಿತ್ರೋತ್ಸವಕ್ಕೆ ಆಯ್ಕೆ ಮಾಡಲಾಗಿದೆ. ಮಕ್ಕಳ ಜನಪ್ರಿಯ ಚಲನಚಿತ್ರ ’ಮಾನಿತ’ ಎನ್ನುವ ಚಲನಚಿತ್ರವನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು. ಪ್ರತಿ ಮಕ್ಕಳಿಗೆ ರೂ. ೧೦ ರಂತೆ ದರವನ್ನು ನಿಗದಿಪಡಿಸಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ವಸೂಲು ಮಾಡಬಾರದು. ಚಲನಚಿತ್ರ ವೀಕ್ಷಣೆಯ ಆಯ್ಕೆ ಆಯಾ ಮಕ್ಕಳದ್ದಾಗಿದ್ದು, ಯಾರಿಗೂ ಕಡ್ಡಾಯವಾಗಿ ಚಲನಚಿತ್ರ ವೀಕ್ಷಿಸಲು ಟಿಕೇಟ್ ಖರೀದಿಸುವಂತೆ ಒತ್ತಾಯಿಸುವಂತಿಲ್ಲ. ಚಿತ್ರೋತ್ಸವದ ಯಶಸ್ಸಿಗೆ ಚಲನಚಿತ್ರಮಂದಿರಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಸಹಕರಿಸಬೇಕು. ಮಕ್ಕಳನ್ನು ಚಲನಚಿತ್ರ ಮಂದಿರಕ್ಕೆ ಕರೆತಂದು, ಪುನಃ ಶಾಲೆಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಆಯಾ ಶಾಲೆಯ ಶಿಕ್ಷಕರದ್ದಾಗಿರುತ್ತದೆ. ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆಯ ಸಂಘಟಕ ಎಸ್. ರಮೇಶ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ್ ಪೂಜಾರ್, ಉಮಾದೇವಿ ಸೊನ್ನದ, ಗಣ್ಯರಾದ ಬಸವರಾಜ ಉಳ್ಳಾಗಡ್ಡಿ ಸೇರಿದಂತೆ ವಿವಿಧ ಚಲನಚಿತ್ರ ಮಂದಿರಗಳ ವ್ಯವಸ್ಥಾಪಕರು ಪಾಲ್ಗೊಂಡಿದ್ದರು.

Leave a Reply