ಜಿಲ್ಲೆಯ ೪೧೬೬ ವಿದ್ಯಾರ್ಥಿಗಳಿಗೆ ಮಾರ್ಚ್‌ನಲ್ಲಿ ಉಚಿತ ಲ್ಯಾಪ್‌ಟಾಪ್ ವಿತರಣೆ- ಬಸವರಾಜ ರಾಯರಡ್ಡಿ

ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ವರ್ಷದ ಎಲ್ಲ ಜಾತಿ, ಸಮುದಾಯದ ಒಟ್ಟು ೪೧೬೬ ವಿದ್ಯಾರ್ಥಿಗಳಿಗೆ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಲ್ಯಾಪ್ ಟಾಪ್ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು. 
ಕಾಲೇಜು ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾಡಳಿತದ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಪ.ಜಾತಿ, ಪ.ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಎಂಬುದು ಕೇವಲ ಉಳ್ಳವರ ಸ್ವತ್ತಾಗಬಾರದು. ಎಲ್ಲ ಬಡ ಜನರಿಗೂ ಶಿಕ್ಷಣ ಸುಲಭವಾಗಿ ದೊರೆಯುವಂತಾಗಬೇಕು ಎನ್ನುವುದು ನಮ್ಮ ಸರ್ಕಾರದ ಆಶಯವಾಗಿದೆ. ವಿಶ್ವ ವಿದ್ಯಾಲಯ, ಪದವಿ ವ್ಯಾಸಂಗ, ತಾಂತ್ರಿಕ ಶಿಕ್ಷಣ ಹೀಗೆ ಶಿಕ್ಷಣ ಎಲ್ಲ ಕ್ಷೇತ್ರಗಳಲ್ಲೂ ಮೂಲಭೂತ ಬದಲಾವಣೆ ಹಾಗೂ ಸುಧಾರಣೆ ತಂದು, ಶಿಕ್ಷಣ ಎಲ್ಲ ಬಡವರಿಗೂ ಸುಲಭವಾಗಿ ದೊರೆಯುವಂತೆ ಮಾಡಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಜಾತಿ, ವರ್ಗಗಳ ಬೇಧವಿಲ್ಲದೆ, ಉನ್ನತ ವ್ಯಾಸಂಗ ಪಡೆಯುವ ೨. ೫ ಲಕ್ಷ ರೂ. ವಾರ್ಷಿಕ ಆದಾಯ ಮಿತಿಯೊಳಗಿರುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡಬೇಕೆನ್ನುವುದು ಮುಖ್ಯಮಂತ್ರಿಗಳ ಕನಸಾಗಿದ್ದು, ಅದನ್ನು ನನಸಾಗಿಸಲಾಗುತ್ತಿದೆ. ಹೀಗಾಗಿ ಮೊದಲ ಹಂತದಲ್ಲಿ ರಾಜ್ಯದ ಪ.ಜಾತಿ, ಪ.ವರ್ಗದ ೩೧೭೪೭ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬ್ರಾಂಡೆಡ್ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮಕ್ಕೆ ಈಗಾಗಲೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದು, ಕೊಪ್ಪಳ ಜಿಲ್ಲೆಯಲ್ಲಿಯೂ ಇಂದು ೧೪ ಕಾಲೇಜುಗಳ ೮೧೯ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅನ್ನು ಉಚಿತವಾಗಿ ವಿತರಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆಯಾ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಶಾಸಕರ ನೇತೃತ್ವದಲ್ಲಿ ಲ್ಯಾಪ್‌ಟಾಪ್ ವಿತರಣೆ ಜರುಗಲಿದೆ. ರಾಜ್ಯದಲ್ಲಿ ಎಲ್ಲ ಜಾತಿ, ವರ್ಗದ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ಹಾಗೂ ಪಾಲಿಟೆಕ್ನಿಕ್‌ನ ೧. ೫೦ ಲಕ್ಷ ವಿದ್ಯಾರ್ಥಿಗಳಿಗೆ ಇದೇ ಮಾರ್ಚ್ ಮೊದಲ ವಾರದಲ್ಲಿ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಲು ಈಗಾಗಲೆ ಕ್ರಮ ಕೈಗೊಳ್ಳಲಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ ತಾಲೂಕಿನ ೧೪೬೬ ವಿದ್ಯಾರ್ಥಿಗಳಿಗೆ, ಯಲಬುರ್ಗಾ- ೪೩೨, ಕುಷ್ಟಗಿ- ೩೬೭ ಹಾಗೂ ಗಂಗಾವತಿ ತಾಲೂಕಿನ ೧೩೯೪ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಲಾಗುವುದು. ವಾರ್ಷಿಕ ಆದಾಯ ೨. ೫ ಲಕ್ಷ ರೂ. ಒಳಗಿರುವ ಕುಟುಂಬದ ವಿದ್ಯಾರ್ಥಿಗಳು ಇದಕ್ಕೆ ಅರ್ಹರಿದ್ದಾರೆ. ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವ ಲ್ಯಾಪ್‌ಟಾಪ್‌ಗಳು ಉತ್ತಮ ಗುಣಮಟ್ಟದ್ದಾಗಿದ್ದು, ಯಾವುದೇ ನಕಲಿ ಅಥವಾ ಕಳಪೆ ಲ್ಯಾಪ್‌ಟಾಪ್ ನೀಡುತ್ತಿಲ್ಲ. ಮಾರುಕಟ್ಟೆಯಲ್ಲಿ ೨೧೩೦೦ ರೂ. ದರ ಹೊಂದಿರುವ ಲ್ಯಾಪ್‌ಟಾಪ್ ಅನ್ನು ಕಂಪನಿಯೊಂದಿಗೆ ಮಾತುಕತೆ ನಡೆಸಿ, ೧೪೫೦೦ ರೂ. ಗಳಿಗೆ ಖರೀದಿಸಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಸುಮಾರು ೦೯ ಕೋಟಿ ರೂ. ಗಳ ಉಳಿತಾಯವಾಗಿದೆ. ಆದರೆ ಸತ್ಯಾಂಶವನ್ನು ಅರಿಯದ ಕೆಲವರು ವಿನಾಕಾರಣ ಹಗರಣ ನಡೆದಿದೆ ಎಂದು ಆರೋಪಿಸಿದರು. ಎಲ್ಲ ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಯೋಜನೆ ಜನಪ್ರಿಯತೆ ಪಡೆಯುತ್ತಿದೆ ಎನ್ನುವ ಮತ್ಸರದಿಂದ, ಈ ರೀತಿ ಸುಖಾಸುಮ್ಮನೆ ಆರೋಪಿಸಿದ್ದಾರೆ. ಇದರಲ್ಲಿ ಯಾವುದೇ ರೀತಿಯ ತನಿಖೆಗೂ ತಾವು ಸಿದ್ಧರಿರುವುದಾಗಿ ಹೇಳಿಕೆ ನೀಡಿದ್ದೇನೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡುವಂತಹ ಈ ಯೋಜನೆ ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತಗೊಳಿಸಲಾಗುವುದಿಲ್ಲ. ಇನ್ನುಮುಂದೆ ಈ ಯೋಜನೆ ನಿರಂತರವಾಗಿ ನಡೆಯಲಿದೆ ಎಂದು ಬಸವರಾಜ ರಾಯರಡ್ಡಿ ಅವರು ಹೇಳಿದರು.
ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕ : ಉನ್ನತ ಶಿಕ್ಷಣ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಕೇವಲ ಕಾಲೇಜು ಪಠ್ಯದಿಂದ ಮಾತ್ರ ಹೆಚ್ಚು ಜ್ಞಾನ ಪಡೆಯುವುದು ಕಷ್ಟ ಸಾಧ್ಯ. ಎಲ್ಲ ವಿದ್ಯಾರ್ಥಿಗಳು ಎಲ್ಲ ಕಾಲಕ್ಕೂ ಗ್ರಂಥಾಲಯಗಳಿಗೆ ತೆರಳಿ ತಮಗೆ ಬೇಕಾದ ಪಠ್ಯ ಓದಲು ಅಥವಾ ಮಾಹಿತಿ ಪಡೆಯಲು ಸಾಧ್ಯವಿಲ್ಲ. ಅಂತರ್ಜಾಲದಲ್ಲಿ ನೂರಾರು ಬಗೆಯ ಮಾಹಿತಿ, ಪಠ್ಯ, ತಾಂತ್ರಿಕ ವಿಷಯಗಳು ಲಭ್ಯವಿದೆ. ಹೀಗಾಗಿ ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ ಲ್ಯಾಪ್‌ಟಾಪ್ ನಿಜಕ್ಕೂ ಸಹಕಾರಿಯಾಗಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಿಯೇ ನಮ್ಮ ಸರ್ಕಾರ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿಯಾಗಲೆಂದು ಉಚಿತವಾಗಿ ಲ್ಯಾಪ್‌ಟಾಪ್ ನೀಡುತ್ತಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಗೊಳಿಸುವ ಇಂತಹ ಜನಪ್ರಿಯ ಯೋಜನೆಗಳಿಗೆ ವಿದ್ಯಾರ್ಥಿಗಳು ಬೆಂಬಲ ನೀಡಿ ಪ್ರೋತ್ಸಾಹ ನೀಡಬೇಕು ಎಂದು ಬಸವರಾಜ ರಾಯರಡ್ಡಿ ಅವರು ಹೇಳಿದರು.
ಗುನ್ನಾಳದಲ್ಲಿ ಹಾಸ್ಟೆಲ್ ಸಹಿತ ಪಾಲಿಟೆಕ್ನಿಕ್ ಮಂಜೂರು : ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಅದರಲ್ಲೂ ಪ್ರಮುಖವಾಗಿ ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿನ ಶಿಕ್ಷಣಕ್ಕೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈಗಾಗಲೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್, ಕನಕಗಿರಿಗೆ ಸರ್ಕಾರಿ ಪಾಲಿಟೆಕ್ನಿಕ್ ಮಂಜೂರು ಮಾಡಿದ್ದು, ಯಲಬುರ್ಗಾ ತಾಲೂಕು ಗುನ್ನಾಳದಲ್ಲಿ ಹಾಸ್ಟೆಲ್ ಸಹಿತ ಪಾಲಿಟೆಕ್ನಿಕ್ ಅನ್ನು ಹೊಸದಾಗಿ ನಮ್ಮ ಸರ್ಕಾರ ಮಂಜೂರು ಮಾಡಿದ್ದು, ಇದಕ್ಕಾಗಿ ೨೫ ಕೋಟಿ ರೂ. ಅನುದಾನ ಒದಗಿಸಲಾಗಿದೆ. ತಳಕಲ್ ನಲ್ಲಿ ನಿರ್ಮಿಸಲಾಗುತ್ತಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸಂಪೂರ್ಣವಾಗಿ ವಸತಿ ಸಹಿತ ಕಾಲೇಜಾಗಲಿದೆ. ಅಷ್ಟೇ ಅಲ್ಲದೆ . ಕೇವಲ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಪ್ರಮುಖ ಸ್ಥಳಗಳಿಗೆ ಮಾತ್ರ ಸೀಮಿತವಿದ್ದ ಎಂಇ, ಎಂಟೆಕ್ ವ್ಯಾಸಂಗ ಮಾಡಬಯಸುವವರಿಗೂ ಇಲ್ಲಿ ವಿಟಿಯು ನಿಂದ ಮಾಸ್ಟರ್ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಮಂಜೂರಾತಿ ದೊರಕಿಸಲಾಗಿದೆ. ಜೊತೆಗೆ ತಳಕಲ್ ಇಂಜಿನಿಯರಿಂಗ್ ಕಾಲೇಜಿಗೆ ಹೊಂದಿಕೊಂಡಂತೆ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನೂ ಸಹ ೬೦ ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದರೆ ಮಾತ್ರ ಕೊಪ್ಪಳ ಜಿಲ್ಲೆ ಅತ್ಯುತ್ತಮ ಜ್ಞಾನಾರ್ಜನೆಯ ಜಿಲ್ಲೆಯ ತಾಣವಾಗಲು ಸಾಧ್ಯವಾಗಲಿದೆ ಎಂದು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಉಚಿತವಾಗಿ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮ ಬಡವರಿಗೂ ಶಿಕ್ಷಣದ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಸರ್ಕಾರ ಮಹತ್ವದ ಕೊಡುಗೆ ನೀಡಿದಂತಾಗಿದೆ. ಬಸವರಾಜ ರಾಯರಡ್ಡಿ ಅವರು ಉನ್ನತ ಶಿಕ್ಷಣ ಮಂತ್ರಿಗಳಾಗಿದ್ದರಿಂದ, ಕೊಪ್ಪಳ ಜಿಲ್ಲೆ ಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಕೊಪ್ಪಳದಲ್ಲಿ ಉನ್ನತ ಶಿಕ್ಷಣ ಎಂಬುದು ಮರೀಚಿಕೆಯಾಗಿತ್ತು. ಇದೀಗ ಕೊಪ್ಪಳ, ಯಲಬುರ್ಗಾ ಮತ್ತು ಗಂಗಾವತಿಯಲ್ಲಿ ಪಿಜಿ ಸೆಂಟರ್ ಪ್ರಾರಂಭವಾಗಿದೆ. ಸಂವಿಧಾನದ ೩೭೧(ಜೆ) ತಿದ್ದುಪಡಿಯಿಂದಾಗಿ ಈ ಭಾಗದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲಾತಿ ದೊರೆಯುತ್ತಿದೆ. ಬರುವ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಇನ್ನಷ್ಟು ಜನಪ್ರಿಯ ಯೋಜನೆಗಳನ್ನು ಘೋಷಿಸುವ ನಿರೀಕ್ಷೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಜಂಟಿಕೃಷಿ ನಿರ್ದೇಶಕ ವೀರೇಶ ಹುನಗುಂದ, ತಹಸಿಲ್ದಾರ್ ಗುರುಬಸವರಾಜ ಉಪಸ್ಥಿತರಿದ್ದರು. ಕಾಲೇಜು ಶಿಕ್ಷಣ ಇಲಾಖೆ ಗುಲಬರ್ಗಾ ಪ್ರಾದೇಶಿಕ ಕಚೇರಿಯ ಜಂಟಿನಿರ್ದೇಶಕ ಸಿ.ಪಿ. ಬೊಮ್ಮನಪಾಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಸ್ವಾಗತಿಸಿದರು. ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Please follow and like us:
error