ಜಿಲ್ಲೆಯ ೧. ೮೪ ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ- ವೆಂಕಟ್ ರಾಜಾ

ಜ. ೨೮ ರಿಂದ ಮೊದಲ ಹಂತದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

– ಜಿಲ್ಲೆಯಲ್ಲಿ ಜ. ೨೮ ರಿಂದ ೩೧ ರವರೆಗೆ ನಾಲ್ಕು ದಿನಗಳ ಕಾಲ ಪಲ್ಸ್ ಪೋಲಿಯೋ ಮೊದಲ ಹಂತದ ಲಸಿಕಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಜಿಲ್ಲೆಯ ೧,೮೩,೯೯೨ ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ. ಯಾವುದೇ ಮಗು ಪೋಲಿಯೋ ಲಸಿಕೆ ಕಾರ್ಯಕ್ರಮದಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಜ. ೨೮ ರಿಂದ ೩೧ ರವರೆಗೆ ೦೪ ದಿನಗಳ ಕಾಲ ೦೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ೧೮೩೯೯೨ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಆ ಪೈಕಿ ೧೫೩೧೩೫ ಮಕ್ಕಳು ಗ್ರಾಮಾಂತರ ಪ್ರದೇಶದವರಾಗಿದ್ದು, ೩೦೮೫೭ ಮಕ್ಕಳು ನಗರ ಪ್ರದೇಶದವರಾಗಿದ್ದಾರೆ. ಮಕ್ಕಳಿಗೆ ಪೋಲಿಯೋ ಹನಿ ನೀಡುವ ಸಲುವಾಗಿ ಒಟ್ಟು ೨೯೮೮೮೯ ಮನೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಈ ಪೈಕಿ ಗ್ರಾಮೀಣ ಪ್ರದೇಶದ ೨೪೯೨೧೩ ಮನೆಗಳು ಹಾಗೂ ನಗರ ಮತ್ತು ಪಟ್ಟಣ ಪ್ರದೇಶದ ೪೯೬೭೬ ಮನೆಗಳ ಭೇಟಿಗೆ ಗುರಿ ಹೊಂದಲಾಗಿದೆ. ಜ. ೨೮ ರಂದು ಬೂತ್ ಮಟ್ಟದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಒಟ್ಟು ೧೮೭೦ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಜ. ೨೯ ರಿಂದ ೩೧ ರವರೆಗೆ ಮನೆ ಮನೆಗಳಿಗೆ ಭೇಟಿ ನೀಡಿ ಉಳಿಕೆ ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗುವುದು. 
ನಮ್ಮ ದೇಶದಲ್ಲಿ ೨೦೧೧ ರ ನಂತರ ಪೋಲಿಯೋ ಪ್ರಕರಣಗಳು ಕಂಡುಬಂದಿಲ್ಲವಾದರೂ, ನಾವು ಮೈಮರೆಯುವಂತಿಲ್ಲ. ಪೋಲಿಯೋಗೆ ಕಾರಣವಾಗುವ ವೈರಸ್‌ಗಳು ನೆರೆಯ ಪಾಕಿಸ್ತಾನ ದೇಶದಿಂದ ವಾತಾವರಣದಲ್ಲಿ ಸೇರಿಕೊಂಡು, ದೇಶದೊಳಗೆ ಬರುವ ಸಾಧ್ಯತೆಗಳಿರುತ್ತವೆ ಎಂಬುದಾಗಿ ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಜಗತ್ತಿನಿಂದಲೇ ಈ ಪೋಲಿಯೋ ವೈರಸ್ ನಿರ್ಮೂಲನೆಯಾಗುವವರೆಗೂ ಪಲ್ಸ್ ಪೋಲಿಯೋ ಲಸಿಕೆಯನ್ನು ತಪ್ಪದೆ ಮಕ್ಕಳಿಗೆ ಹಾಕಿಸುವ ಅನಿವಾರ್ಯತೆ ಇದೆ. ಬಸ್ ನಿಲ್ದಾಣ, ರೈಲು ನಿಲ್ದಾಣ, ಸಂತೆ, ಜಾತ್ರೆಗಳಲ್ಲಿ ಅಲ್ಲದೆ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಬೂತ್‌ಗಳನ್ನು ಸ್ಥಾಪಿಸಿ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಕಾರ್ಖಾನೆ ಮತ್ತು ಕಟ್ಟಡ ನಿರ್ಮಾಣ, ಇಟ್ಟಿಗೆ ಭಟ್ಟಿ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿರುವ ಕಾರ್ಮಿಕರ ಮಕ್ಕಳಿಗೂ ಸಹ ಪೋಲಿಯೋ ಲಸಿಕೆ ನೀಡಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಲಂ ಪ್ರದೇಶಗಳು, ಅಲೆಮಾರಿ ಜನರು ತಾತ್ಕಾಲಿಕ ವಾಸ್ತವ್ಯಕ್ಕೆ ಹಾಕಿಕೊಂಡಿರುವ ಟೆಂಟ್ ಪ್ರದೇಶಗಳಿಗೂ ಭೇಟಿ ನೀಡಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಬೇಕು. ಪಾಲಕರು ತಮ್ಮ ೦೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಶಿಕ್ಷಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪುಗಳು, ಲಯನ್ಸ್, ರೋಟರಿ, ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿ ಈ ರಾಷ್ಟ್ರೀಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು. ಕೆಲವೊಂದು ಲಸಿಕಾ ಕೇಂದ್ರಗಳು ಶಾಲೆಗಳಲ್ಲಿ ನಿಗದಿಪಡಿಸಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯಲ್ಲಿ ಲಸಿಕಾ ಕೇಂದ್ರಕ್ಕಾಗಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪಲ್ಸ್ ಪೋಲಿಯೋ ಕಾರ್ಯಕ್ರಮ ಕುರಿತು ಗ್ರಾಮಗಳಲ್ಲಿ ಡಂಗುರ ಸಾರುವುದು, ಮಕ್ಕಳಿಂದ ಪ್ರಬಾತ ಫೇರಿ, ಜಾಥಾ ಏರ್ಪಡಿಸುವುದು ಹಾಗೂ ಘೋಷಣೆಗಳನ್ನು ಕೂಗುವ ಮೂಲಕ ಹೆಚ್ಚಿನ ಪ್ರಚಾರ ಒದಗಿಸಬೇಕು. ಜೆಸ್ಕಾಂ ನವರು ಪೋಲಿಯೋ ಲಸಿಕೆಯ ದಾಸ್ತಾನು ಮತ್ತು ವಿತರಣೆಗೆ ಅನುಕೂಲವಾಗುವಂತೆ ಜ. ೨೭ ರಿಂದ ೩೧ ರವರೆಗೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಒಟ್ಟಾರೆಯಾಗಿ ಜಿಲ್ಲೆಯ ಯಾವುದೇ ಪ್ರದೇಶದಲ್ಲಿನ ೫ ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಹೇಳಿದರು.
ಬಳ್ಳಾರಿ ಸರ್ವೆಲೆನ್ಸ್ ಮೆಡಿಕಲ್ ಅಧಿಕಾರಿ ಡಾ. ಆರ್.ಎಸ್. ಶ್ರೀಧರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ೧೯೮೫ ರಿಂದ ೨೦೦೦ ರವರೆಗಿನ ವರದಿಗಳನ್ನು ಗಮನಿಸಿದಾಗ, ಪೋಲಿಯೋ ಪೀಡಿತ ದೇಶಗಳ ಸಂಖ್ಯೆ ೧೨೫ ರಿಂದ ೨೦ ದೇಶಗಳಿಗೆ ಇಳಿದಿದೆ. ೨೦೧೦ ರಲ್ಲಿ ಈ ಸಂಖ್ಯೆ ೦೪ ಕ್ಕೆ ಇಳಿದಿತ್ತು, ಅದರಲ್ಲಿ ಭಾರತವೂ ಒಂದಾಗಿತ್ತು. ಭಾರತದಲ್ಲಿ ೨೦೧೧ ರಲ್ಲಿ ಒಂದು ಪ್ರಕರಣ ವರದಿಯಾಗಿದ್ದು, ಸಮಾಧಾನಕರ ಸಂಗತಿಯೆಂದರೆ ೨೦೧೨ ರಿಂದ ಈವರೆಗೆ ದೇಶದಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ. ೨೦೧೭ ರಲ್ಲಿ ಇಡೀ ಜಗತ್ತಿನಲ್ಲಿ ೨೨ ಪೋಲಿಯೋ ಪ್ರಕರಣಗಳು ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯು ೨೦೧೪ ರಲ್ಲಿ ಭಾರತವನ್ನು ಪೋಲಿಯೋ ಮುಕ್ತ ದೇಶ ಎಂದು ಘೋಷಿಸಿದೆ. ಆದಾಗ್ಯೂ ದೇಶದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪಾಕಿಸ್ತಾನ, ಮತ್ತು ಆಫ್‌ಘಾನಿಸ್ತಾನ ಅಲ್ಲದೆ ನೈಜೀರಿಯಾ ದೇಶಗಳಲ್ಲಿ ಇನ್ನೂ ಪೋಲಿಯೋ ಪ್ರಕರಣಗಳು ಕಂಡು ಬರುತ್ತಿವೆ. ಭಾರತವು ಪಾಕಿಸ್ತಾನದೊಂದಿಗೆ ವಿಶಾಲವಾದ ಗಡಿಪ್ರದೇಶವನ್ನು ಹೊಂದಿರುವುದರಿಂದ, ವೈರಸ್‌ಗಳು ನಮ್ಮ ದೇಶಕ್ಕೂ ಹರಡುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ದೇಶದಲ್ಲಿ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದರು. ಕೊಪ್ಪಳ ಜಿಲ್ಲೆಯಲ್ಲಿ ಸಾಮೂಹಿಕ ಗುಳೇ ಹೋಗುವುದು ಕಂಡುಬರುವುದರಿಂದ, ಜಿಲ್ಲೆಯನ್ನು ಹೈರಿಸ್ಕ್ ವಲಯ ಎಂದು ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕಿದೆ ಎಂದರು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ: ಅಲಕಾನಂದ ಮಳಗಿ ಅವರು ಪೋಲಿಯೋ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ಪೋಲಿಯೋ ಲಸಿಕೆಯ ಮಹತ್ವದ ಕುರಿತು ಈಗಾಗಲೆ ಜನರಲ್ಲಿ ಹೆಚ್ಚಿನ ಅರಿವು ಮೂಡಿರುವುದರಿಂದ, ಲಸಿಕೆ ಕಾರ್ಯಕ್ರಮದಲ್ಲಿ ಯಾವುದೇ ತೊಡಕು ಇಲ್ಲ. ಪಾಲಕರು ಸ್ವಯಂ ಪ್ರೇರಿತರಾಗಿ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ತಪ್ಪದೆ ಹಾಕಿಸುತ್ತಿದ್ದಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಆರೋಗ್ಯ ಇಲಾಖೆ ಯೋಜನೆ ಅನುಷ್ಠಾನಾಧಿಕಾರಿಗಳು, ನಾಲ್ಕು ತಾಲೂಕುಗಳ ವೈದ್ಯಾಧಿಕಾರಿಗಳು, ರೋಟರಿ, ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.