ಜಿಲ್ಲೆಯ ೧.೬೩ ಲಕ್ಷ ಫಲಾನುಭವಿಗಳಿಗೆ ಮಾರ್ಚ್ ಒಳಗಾಗಿ ಉಚಿತ ಅನಿಲ ಸಂಪರ್ಕ- ಬಸವರಾಜ ರಾಯರಡ್ಡಿ

: ಜಿಲ್ಲೆಯಲ್ಲಿನ ಬಿಪಿಎಲ್/ಅಂತ್ಯೋದಯ ಅನಿಲ ರಹಿತ ಪಡಿತರ ಚೀಟಿ ಹೊಂದಿರುವ ೧. ೬೩ ಲಕ್ಷ ಕುಟುಂಬಗಳಿಗೆ ೨೦೧೮ ರ ಮಾರ್ಚ್ ಒಳಗಾಗಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಎಲ್‌ಪಿಜಿ ಅನಿಲ ಸಿಲಿಂಡರ್ ಸಂಪರ್ಕ ಒದಗಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.  ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿ ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ ಕಲ್ಪಿಸುವ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಅನಿಲ ಸಂಪರ್ಕ ಜೊತೆಗೆ ಎರಡು ಗ್ಯಾಸ್ ಬರ್ನರ್ ಸ್ಟೌವ್ ಮತ್ತು ಎರಡು ಭರ್ತಿ ಮಾಡಿದ ಸಿಲಿಂಡರ್‌ಅನ್ನು ಸಂಪೂರ್ಣ ಉಚಿತವಾಗಿ ನೀಡಲಿದೆ.  ಇದಕ್ಕಾಗಿ ಪ್ರತಿ ಫಲಾನುಭವಿಗೆ ರಾಜ್ಯ ಸರ್ಕಾರ ೪೦೪೦ ರೂ. ಗಳನ್ನು ಭರಿಸಲಿದೆ.  ಸಿಲಿಂಡರ್ ಭದ್ರತಾ ಠೇವಣಿಗೆ ೧೪೫೦ ರೂ., ರೆಗ್ಯುಲೇಟರ್ ಠೇವಣಿ-೧೫೦, ಸುರಕ್ಷಾ ಹೋಸ್-೧೯೦, ಡಿಜಿಸಿ ಪುಸ್ತಕ-೫೦, ತಪಾಸಣೆ ಮತ್ತು ಜೋಡಣೆ ವೆಚ್ಚ-೧೦೦, ಗ್ಯಾಸ್ ಸ್ಟೌವ್- ೧೦೦೦ ಹಾಗೂ ಎರಡು ಭರ್ತಿ ಸಿಲಿಂಡರ್- ರೂ. ೧೧೦೦ ಸೇರಿದಂತೆ ಒಟ್ಟು ೪೦೪೦ ರೂ. ವೆಚ್ಚ ಮಾಡಲಿದೆ.  ಯಾವುದೇ ಅನಿಲ ಸಂಪರ್ಕವನ್ನು ಹೊಂದದೇ ಇರುವ ನಗರ ಮತ್ತು ಗ್ರಾಮಾಂತರ ಪ್ರದೇಶದ ಬಿಪಿಎಲ್ ಆದ್ಯತಾ ಕುಟುಂಬಗಳು ಅಥವಾ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿದಾರರು, ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿರುವ ಕಟ್ಟಡ ಕಾರ್ಮಿಕರು ಈ ಯೋಜನೆಗೆ ಅರ್ಹರು.  ೧. ೬೩ ಲಕ್ಷ ಫಲಾನುಭವಿಗಳ ಪೈಕಿ, ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ಇದೇ ನವೆಂಬರ್-ಡಿಸೆಂಬರ್ ತಿಂಗಳ ಒಳಗಾಗಿ ೫೨೦೫೯ ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸುವ ಗುರಿಯನ್ನು ನಿಗದಿಪಡಿಸಲಾಗಿದ್ದು, ಫಲಾನುಭವಿಗಳನ್ನು ಆಯಾ ಶಾಸಕರುಗಳು ಇದೇ ನ. ೧೮ ರ ಒಳಗಾಗಿ ಆಯ್ಕೆ ಮಾಡಲೇಬೇಕಿದೆ.  ನಂತರ ಜನವರಿ ತಿಂಗಳಲ್ಲಿ ಎರಡನೆ ಹಂತ ಹಾಗೂ ಮಾರ್ಚ್ ನಲ್ಲಿ ಮೂರನೆ ಹಂತ ಹೀಗೆ ಮೂರು ಹಂತಗಳಲ್ಲಿ ಜಿಲ್ಲೆಯ ಎಲ್ಲ ೧. ೬೩ ಲಕ್ಷ ಅನಿಲ ರಹಿತ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ಅನಿಲ ಸಂಪರ್ಕ ಕಲ್ಪಿಸಲಾಗುವುದು. ಎಲ್ಲ ಅನಿಲ ಸಂಪರ್ಕಗಳಿಗೆ ಈಗಾಗಲೆ ಆಧಾರ್ ಸಂಖ್ಯೆ ಜೋಡಣೆಯನ್ನು ಕಡ್ಡಾಯಗೊಳಿಸಿರುವುದರಿಂದ, ವಿವಿಧ ಯೋಜನೆಗಳಿಗೆ ಒಂದೇ ಫಲಾನುಭವಿ ಸವಲತ್ತು ಪಡೆಯಲು ಅವಕಾಶವಿಲ್ಲ.   ಆದ್ದರಿಂದ ಅರ್ಹ ಫಲಾನುಭವಿಗಳ ಪಟ್ಟಿ ಈಗಾಗಲೆ ಆಹಾರ ಇಲಾಖೆಯಲ್ಲಿ ಲಭ್ಯವಿದ್ದು,  ತಹಸಿಲ್ದಾರರು, ಆಯಾ ಶಾಸಕರನ್ನು ಕೂಡಲೆ ಸಂಪರ್ಕಿಸಿ, ಮೊದಲ ಹಂತದ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ನವೆಂಬರ್ ೧೮ ರ ಒಳಗಾಗಿ ಪಡೆದುಕೊಳ್ಳಲೇಬೇಕು.  ಈ ರೀತಿ ಆಯ್ಕೆ ಮಾಡುವಾಗಿ ಪ.ಜಾತಿ/ಪ.ಪಂಗಡದವರಿಗೆ ಶೇ. ೨೦, ಉಳಿದ ಎಲ್ಲ ವರ್ಗಗಳ ಶೇ. ೮೦ ರಷ್ಟು ಆಯ್ಕೆ ಆಗುವಂತೆ ನೋಡಿಕೊಳ್ಳಬೇಕು.  ಮೊದಲ ಹಂತದಲ್ಲಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಪಡೆದು, ಸಂಬಂಧಪಟ್ಟ ಫಲಾನುಭವಿಗಳಿಗೆ ಈ ಕುರಿತ ಮಾಹಿತಿಯನ್ನು ಪತ್ರದ ಮೂಲಕ ಕಳುಹಿಸಿಕೊಡಬೇಕು.  ಈಗಾಗಲೆ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ಪಡೆದವರು ಈ ಯೋಜನೆಗೆ ಫಲಾನುಭವಿಗಳಾಗಲು ಅರ್ಹರಲ್ಲ.  ಉಜ್ವಲ ಯೋಜನೆಗಿಂತಲೂ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಸುಮಾರು ೨೪೪೦ ರೂ. ಹೆಚ್ಚಿನ ಲಾಭ ಫಲಾನುಭವಿಗಳಿಗೆ ದೊರೆಯಲಿದೆ.  ಅಂದರೆ ಫಲಾನುಭವಿಗಳಿಗೆ ಸಂಪೂರ್ಣ ಉಚಿತವಾಗಿ ಅನಿಲ ಸಂಪರ್ಕ ಲಭ್ಯವಾಗಲಿದೆ.  ಯೋಜನೆಯ ಅನುಷ್ಠಾನ ತ್ವರಿತಗತಿಯಲ್ಲಿ ಆಗುವಂತೆ ಅಧಿಕಾರಿಗಳು ಕೂಡಲೆ ಸಿದ್ಧತೆ ಪ್ರಾರಂಭಿಸುವಂತೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಸೂಚನೆ ನೀಡಿದರು.  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ ಮಾತನಾಡಿ, ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿದಾರರಿದ್ದು ಪಡಿತರ ಸೀಮೆ ಎಣ್ಣೆ ಪಡೆಯುತ್ತಿರುವ ಅನಿಲ ರಹಿತ ಕುಟುಂಬಗಳಿಗೆ ಸಂಪೂರ್ಣ ಉಚಿತ ಅನಿಲ ಸಂಪರ್ಕ ಕಲ್ಪಿಸಲಾಗುತ್ತಿದೆ.  ಯಲಬುರ್ಗಾ ತಾಲೂಕಿನಲ್ಲಿ ೩೭ ಸಾವಿರ, ಕುಷ್ಟಗಿ- ೩೭ ಸಾವಿರ, ಕೊಪ್ಪಳ-೪೪ ಸಾವಿರ ಹಾಗೂ ಗಂಗಾವತಿ ತಾಲೂಕಿನಲ್ಲಿ ೪೫ ಸಾವಿರ ಸೇರಿದಂತೆ ೧. ೬೩ ಲಕ್ಷ ಕುಟುಂಬಗಳು ಅರ್ಹವಾಗಿವೆ.  ಮೊದಲ ಹಂತದಲ್ಲಿ ನವೆಂಬರ್-ಡಿಸೆಂಬರ್ ಒಳಗಾಗಿ ಯಲಬುರ್ಗಾ-೧೧೯೫೬, ಕುಷ್ಟಗಿ- ೧೧೯೬೭, ಕೊಪ್ಪಳ-೧೪೧೩೭ ಹಾಗೂ ಗಂಗಾವತಿ ತಾಲೂಕಿನ ೧೩೯೯೯ ಸೇರಿದಂತೆ ೫೨೦೫೯ ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ ಒದಗಿಸಲಾಗುವುದು.  ೧೮ ವರ್ಷ ವಯಸ್ಸು ಮೇಲ್ಪಟ್ಟ ಕುಟುಂಬದ ಮುಖ್ಯಸ್ಥ ಮಹಿಳೆ ಹೆಸರಿನಲ್ಲಿ ಅನಿಲ ಸಂಪಕ್ ನೀಡಲಾಗುವುದು.   ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಯೋಜನೆ ಅನುಷ್ಠಾನ ಸಮಿತಿಯನ್ನು ರಚಿಸಲಾಗಿದೆ ಎಂದರು.  ಸಭೆಯಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ,  ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ತಹಸಿಲ್ದಾರರು, ಜಿಲ್ಲೆಯಲ್ಲಿನ ವಿವಿಧ ಅನಿಲ ಕಂಪನಿಗಳ ಅಡುಗೆ ಅನಿಲ ವಿತರಕರು ಪಾಲ್ಗೊಂಡಿದ್ದರು.

Please follow and like us:
error