ಜಿಲ್ಲೆಯ ಭೂಮಿ ಮತ್ತು ವಸತಿ ಸಮಸ್ಯೆಗಳನ್ನು ಬಗೆಹರಿಸಲು ತುರ್ತುಕ್ರಮ ಕೈಗೊಳ್ಳಲು ಒತ್ತಾಯ

ಜಿಲ್ಲೆಯ ಭೂಮಿ ಮತ್ತು ವಸತಿ ಸಮಸ್ಯೆಗಳನ್ನು ಬಗೆಹರಿಸಲು sಸರ್ಕಾರಿ ಆದೇಶಗಳ ಮತ್ತು ಉನ್ನತ ಮಟ್ಟದ ಸಮಿತಿ ತೀರ್ಮಾನಗಳ ಜಾರಿಗಾಗಿ ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ತುರ್ತುಕ್ರಮ ಕೈಗೊಳ್ಳಲು ಒತ್ತಾಯಿಸಿ.

ರಾಜ್ಯದ ಬಡ ಜನರ ಭೂಮಿ ಮತ್ತು ವಸತಿ ಸಮಸ್ಯೆಗಳನ್ನು ಬಗೆಹರಿಸಲು ಕಳೆದ ಎರಡೂವರೆ ವರ್ಷಗಳಿಂದ ವಿವಿಧ ಸಂಘಟನೆಗಳು ಮೇಲ್ಕಂಡ ವೇದಿಕೆಯಡಿ ಒಟ್ಟುಗೂಡಿ ಸ್ವಾತಂತ್ರ್ಯ ಸೇನಾನಿ ಎಚ್.ಎಸ್.ದೊರೆಸ್ವಾಮಿಯವರ ನೇತೃತ್ವದಲ್ಲಿ ಹೋರಾಟಗಳನ್ನು ನಡೆಸುತ್ತಾ ಬರಲಾಗುತ್ತಿದೆ. ರಾಜ್ಯ ಸರ್ಕಾರ ಭೂಮಿ ವಸತಿ ಸಮಸ್ಯೆಗಳ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಪರಿಶೀಲಿಸಲು ಮೇಲುಸ್ತುವಾರಿಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು, ಬಡ ಜನತೆಯ ಸಮಸ್ಯೆಗಳನ್ನು ಬಗೆಹರಿಸಲು ಉನ್ನತ ಮಟ್ಟದ ಸಮಿತಿಯಲ್ಲಿ ಗಂಭೀರವಾದ ಪ್ರಯತ್ನಗಳನ್ನು ಮಾಡುತ್ತಿರುವುದು ಸರಿಯಷ್ಟೆ. ಅದೇ ರೀತಿ ಆಯಾ ಜಿಲ್ಲೆಗಳಲ್ಲಿ ಒಂದಷ್ಟು ಬಡವರಿಗೆ ಭೂಮಿ-ನಿವೇಶನ-ಮನೆಗಳೂ ದೊರೆತಿವೆ. ಇದಕ್ಕಾಗಿ ಶ್ರಮಿಸಿದವರೆಲ್ಲರಿಗೂ ಹೋರಾಟ ಸಮಿತಿಯು ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಅದೇ ರೀತಿ ಹತ್ತಾರು ವರ್ಷಗಳಿಂದ ಬಗೆಹರಿಯದೆ ಉಳಿದಿರುವ ನೂರಾರು ಭೂಮಿ-ವಸತಿ ಸಮಸ್ಯೆಗಳು ಜಿಲ್ಲೆಯಲ್ಲಿವೆ. ಮತ್ತು ಈ ಬಗ್ಗೆ ಸರ್ಕಾರದ ಆದೇಶಗಳಿದ್ದರೂ ಜಾರಿಯಾಗಿಲ್ಲ ಅಥವಾ ಗಮನಕ್ಕೆ ತೆಗೆದುಕೊಳ್ಳದೆ ಉಳಿದುಹೋಗುತ್ತಿವೆ. ಉನ್ನತ ಮಟ್ಟದ ಸಮಿತಿಯ ತೀರ್ಮಾನಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದರಲ್ಲಿ, ಸರ್ಕಾರದ ಸುತ್ತೋಲೆಗಳನ್ನು ಜಾರಿ ಮಾಡುವುದರಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ನಿಷ್ಕಾಳಜಿ ಎದ್ದು ಕಾಣುತ್ತಿದೆ. ಈ ಎಲ್ಲಾ ಕಾರಣದಿಂದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಅನಿವಾರ್ಯವಾಗಿ ರಾಜ್ಯದಾದ್ಯಂತ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಕಛೇರಿಗಳ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನಾ ಹೋರಾಟಗಳನ್ನು ನವೆಂಬರ್ ೧೨ರಿಂದ ಹಮ್ಮಿಕೊಳ್ಳುತ್ತಿದೆ.
ಹಕ್ಕೊತ್ತಾಯಗಳು:
೧. ಉನ್ನತ ಮಟ್ಟದ ಸಮಿತಿಯ ತೀರ್ಮಾನಗಳನ್ನು ಜಾರಿ ಮಾಡಬೇಕು. (ಸುತ್ತೋಲೆ : ಆರ್‌ಡಿ ೧೦ ಎಲ್‌ಜಿಪಿ ೨೦೧೮. ಪ್ರತಿ ಲಗ್ಗತ್ತಿಸಿದೆ)
೨. ಈಗಾಗಲೇ ಭೂಮಿ ಮತ್ತು ವಸತಿ ಹೋರಾಟ ಸಮಿತಿ ಸಲ್ಲಿಸಿರುವ ಜಿಲ್ಲಾ ಮಟ್ಟದ ಸಮಸ್ಯೆಗಳನ್ನು ಬಗೆ ಹರಿಸಬೇಕು. (ಈ ಬಗ್ಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರ ಸುತ್ತೋಲೆ ಸಂಖ್ಯೆ ಆರ್‌ಡಿ-೪೮-ಎಲ್‌ಜಿಬಿ೨೦೧೮ ತಾ. ೨೯-೬-೨೦೧೮ನ್ನು ಗಮನಿಸಿ. ಪ್ರತಿ ಲಗತ್ತಿಸಿದೆ.)
೩. ಫಾರಂ, ೫೦, ೫೩ ಮತ್ತು ೯೪ಸಿ, ೯೪ಸಿಸಿ ಅರ್ಜಿಗಳನ್ನು ಸಲ್ಲಿಸಿದವರಿಗೆ ಭೂಮಿ, ನಿವೇಶನಗಳಿಗೆ ಕೂಡಲೇ ಹಕ್ಕುಪತ್ರಗಳನ್ನು ವಿತರಿಸಬೇಕು.
೪. ಜಿಲ್ಲೆಯಲ್ಲಿ ಸಾಗುವಳಿ ಮಾಡದೆ ಇರುವ ಸರ್ಕಾರಿ, ಇನಾಂ, ಖಾರೀಜ್ ಖಾತಾ, ಗೋಮಾಳ, ಅಮೃತ ಮಹಲ್ ಕಾವಲ್ ಭೂಮಿಗಳ ಸರ್ವೆ ನಡೆಸಬೇಕು. ಭೂಹೀನರು ಸಾಗುವಳಿ ಮಾಡುತ್ತಿದ್ದರೆ, ಅವರುಗಳಿಗೆ ಆ ಭೂಮಿಯನ್ನು ಮಂಜೂರು ಮಾಡಲು ಕ್ರಮ ಕಗೊಳ್ಳಬೇಕು.
೫. ಪಿತ್ರಾರ್ಜಿತ ಇನ್ನಿತರೆ ಆಸ್ತಿ ಹೊಂದಿರುವವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಸರ್ಕಾರಿ, ಗೋಮಾಳ, ಇನಾಂ ಇನ್ನಿತರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ ಅಥವಾ ವಶದಲ್ಲಿಟ್ಟುಕೊಂಡಿದ್ದರೆ ಇಂತಹ ಭೂಮಿಯನ್ನು ವಶಕ್ಕೆ ಪಡೆದು ಭೂರಹಿತರಿಗೆ ವಿತರಿಸಲು ಕ್ರಮ ಕಗೊಳ್ಳಬೇಕು.
೬. ಅರಣ್ಯ-ಕಂದಾಯ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವ ಭೂಹೀನ ರೈತರುಗಳಿಗೆ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಭೂಮಿ ಮಂಜೂರು ಮಾಡಲು ಅರಣ್ಯ ಹಕ್ಕು ಸಮಿತಿಗಳನ್ನು ರಚಿಸಬೇಕು. ಮತ್ತು ಭೂಮಿಯ ಹಕ್ಕುಪತ್ರಗಳನ್ನು ವಿತರಿಸಬೇಕು.
೭. ಪಹಣಿ, ಸರ್ವೆ, ಚೆಕ್‌ಬಂದಿ. ನಕ್ಷೆ, ಭೂಮಿಯ ವಿಭಾಗೀಕರಣಗಳಿಗಾಗಿ ರೈತರನ್ನು ಸಂಬಂಧಪಟ್ಟ ಅಧಿಕಾರಿಗಳು ತಿಂಗಳು-ವರ್ಷಗಟ್ಟಲೆ ಅಲೆದಾಡಿಸುತ್ತಿದ್ದು ಇದು ನಿಲ್ಲಬೇಕು.

ಅಪರ ಜಿಲ್ಲಾಧಿಕಾರಿ ಸಿ.ಡಿ ಗೀತಾ ಅವರ ಮೂಲಕ ಸರಕಾರಕ್ಕೆ ಹಕ್ಕೊತ್ತಾಯ ಪತ್ರ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ವಿಠ್ಠಪ್ಪ ಗೋರಂಟ್ಲಿ, ಪಿ.ಯು.ಸಿ.ಎಲ್ ರಾಜ್ಯ ಉಫಾಧ್ಯಕ್ಷ, ಡಿ.ಎಚ್. ಪೂಜಾರ, ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ, ಕರಿಯಪ್ಪ ಗುಡಿಮನಿ, ರಾಜ್ಯಾಧ್ಯಕ್ಷರು ಮಾದಿಗರ ಹೋರಾಟ ಸಮಿತಿ, ಆನಂದ ಬಂಡಾರಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕೆ. ಬಿ ಗೋನಾಳ, ಟಿ,ಯು.ಸಿಐ ರಾಜ್ಯ ಕಾರ್ಯದರ್ಶಿ , ಮಲ್ಲೇಶಗೌಡ ಕನ್ನೆರಮಡು, ಕರ್ನಾಟಕ ರೈತ ಸಂಘ ಜಿಲ್ಲಾ ಕಾರ್ಯದರ್ಶಿ, ರಾಮಣ್ಣ ಕಂದಾರಿ, ಡಿಎಸ್.ಎಸ್. ಸಿ. ಎಲ್ಲಮ್ಮ, ಮಹಿಳಾ ಸಂಘಟನೆ, ಸಮೀದ್ ತಾವರಗೇರಾ ಕರ್ನಾಟಕ ರೈತ ಸಂಘ, ಡಾ. ಜ್ಞಾನಸುಂದರ ದಲಿತ ಮುಖಂಡರು ಸೇರಿದಂತೆ ಇತರರು ಭಾಗವಹಿಸಿದ್ದರು.

Please follow and like us:
error