ಜಿಲ್ಲಾ ಮಟ್ಟದ ಸಮಾವೇಶಕ್ಕೆ ತಣ್ಣನೆಯ ಪ್ರತಿಕ್ರಿಯೆ

ಇದು ಸಂಘಟಕರ ತಪ್ಪೋ ಅಥವಾ  ಸಮುದಾಯದ  ನಿರಾಸಕ್ತಿಯೋ  ಗೊತ್ತಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮದ ಸಂವಿಧಾನಿಕ ಮಾನ್ಯತೆಗಾಗಿ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಹೋರಾಟಗಾರರು, ಸ್ವಾಮಿಜಿಗಳೇ ಜಾಸ್ತಿಇದ್ದವರು,   ವೇದಿಕೆ ಮುಂದಿದ್ದ ಖುರ್ಚಿಗಳು ಖಾಲಿ ಖಾಲಿಯಾಗಿ ವೇದಿಕೆ ಮೇಲಿದ್ದ ಮುಖಂಡರಿಗೆ ಇರುಸು ಮುರುಸಾಗುವಂತೆ ಮಾಡಿದವು. ಜಿಲ್ಲಾ ಮಟ್ಟದ ಈ ಸಮಾವೇಶಕ್ಕೆ ತಣ್ಣನೆಯ ಪ್ರತಿಕ್ರಿಯೆ ವ್ಯಕ್ತವಾಯ್ತು.  ತೀವ್ರ ತುರುಸು ಪಡೆದು ಕೊಂಡಿರುವ ಲಿಂಗಾಯತ ಪ್ರತ್ಯೇಕ ಧರ್ಮದ ಸಾಂವಿಧಾನಿಕ ಮಾನ್ಯತೆಯ ಹೋರಾಟ ಸದ್ದು ಮಾಡುತ್ತಿದೆ. ಇದರ ಭಾಗವಾಗಿ ಇಂದು ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಜನರಿಲ್ಲದೆ ಖಾಲಿ ಖಾಲಿ ಹೊಡೆದಿದೆ. ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಲಿಂಗಾಯತ ಸಮುದಾಯದ ಸುಮಾರು 2೦ ಸಾವಿರಕ್ಕೂ ಹೆಚ್ಚು ಜನರು ಸೇರುತ್ತಾರೆ ಎಂದು ಸಂಘಟಕರು ಸಾವಿರಾರು ಆಸನಗಳ ವ್ಯವಸ್ಥೆ ಮಾಡಿದ್ದರು. 

ಆದರೆ, ಸಮಾವೇಶಕ್ಕೆ ಬಂದಿದ್ದು ಮಾತ್ರ ಎರಡರಿಂದ ಮೂರು ಸಾವಿರ ಜನರು ಮಾತ್ರ. ಇದರಿಂದಾಗಿ ವೇದಿಕೆಯ ಮುಂದಿದ್ದ ಖುರ್ಷಿಗಳು ಖಾಲಿ ಖಾಲಿಯಾಗಿದ್ದವು. ಆದರೆ, ಮಧ್ಯಾಹ್ನ ೧೨ ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ತಡವಾಗಿ ಆರಂಭವಾದರೂ ಜನರು ನಿರೀಕ್ಷೆ ಮಟ್ಟಕ್ಕೆ ಸೇರಲಿಲ್ಲ. ಇದರಿಂದಾಗಿ ವೇದಿಕೆಯ ಮೇಲಿದ್ದ ಗಣ್ಯರಲ್ಲಿ ಇರಸು ಮುರುಸು ಉಂಟಾಯಿತು. ಜನರ ಈ ನೀರಸ ಪ್ರತಿಕ್ರಿಯೆ ಗಮನಿಸಿದ ಸಚಿವ ವಿನಯ್‌ಕುಮಾರ್ ಕುಲಕರ್ಣಿ ಅವರು, ತಮಗೆ ಹೇಳಿದ್ದರೆ ತಾವು ಜನರನ್ನು ಸೇರಿಸುತ್ತಿದ್ದೆ ಎಂದು ಹೇಳಿದರು. ಇದು ಎಲ್ಲೊ ಒಂದು ಕಡೆ ಸಂಘಟಕರು ಜನರನ್ನು ಸೇರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಸೂಚ್ಯವಾಗಿ ಹೇಳಿದಂತಿತ್ತು.  ಸಮಾವೇಶದಲ್ಲಿ ಪಾಲ್ಗೊಂಡಿದ್ದ ಗದಗಿನ ತೋಂಟದಾರ್ಯ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಪಂಚಾಚಾರ್ಯರು ವಿರಕ್ತರು ವೀರಶೈವ-ಲಿಂಗಾಯತ ಒಂದೇ ಎಂದು ಹೇಳುತ್ತಿದ್ದಾರೆ. ಅದು ಹಾಗೆ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಅಲ್ಲದೆ, ನೀವು ಜನರಿಗಾಗಿ ಸ್ವಾಮೀಜಿಗಳೋ ಅಥವಾ ನಿಮಗಾಗಿ ಭಕ್ತರೋ ಎಂದು ಖಾರವಾಗಿ ಪ್ರಶ್ನೆ ಮಾಡಿದರು. ಲಿಂಗಾಯತ ಧರ್ಮ ಪ್ರತ್ಯೇಕವಾಗಿ ಅಲ್ಪಸಂಖ್ಯಾತ ಸ್ಥಾನಮಾನ ಸಿಗುವುದರಿಂದ ಸಾಕಷ್ಟು ಸೌಲಭ್ಯಗಳು ಸಿಗುತ್ತವೆ. ತಿಳಿಯದೆ ಕೆಲವು ಸ್ವಾಮೀಜಿಗಳು ಏನೇನೋ ಹೇಳುತ್ತಿದ್ದಾರೆ. ತಲೆ ಇರುವುದು ವಿಚಾರ ಮಾಡುವುದಕ್ಕಾಗಿ. ಮೊದಲು ಇದನ್ನು ತಿಳಿದುಕೊಳ್ಳಬೇಕು. ಎಲ್ಲದಕ್ಕೂ ಒಂದು ಕಾಲ ಕೂಡಿ ಬರಬೇಕು. ಅದು ಈಗ ಬಂದಿದೆ ಎಂದ ಸ್ವಾಮೀಜಿ, ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಇತ್ತೀಚಿಗೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡರು… ನಾನಾ ಭಾಗಗಳಿಂದ ಬಂದಿದ್ದ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಸ್ವಾಮಿಜಿಗಳು ಮುಖಂಡರು ಲಿಂಗಾಯತ ಧರ್ಮ ಪ್ರತ್ಯೇಕ ಮಾನ್ಯತೆ ನೀಡಬೇಕು ಎಂದು ಒಕ್ಕೂರಲವಾಗಿ ಧ್ವನಿ ಎತ್ತಿದರು. ಆದರೆ, ಸಂಘಟಕರು ಅಂದುಕೊಂಡಂತೆ ಜನರು ಸೇರದೆ ಇರುವುದು ಸಂಘಟಕರಲ್ಲಿ ನಿರಾಸೆ ಮೂಡುವಂತೆ ಮಾಡಿತು.

Please follow and like us:
error