ಜಿಲ್ಲಾ ಮಟ್ಟದ ಉದ್ಯೋಗ ಮೇಳ

ಫೆ. 06 ಮತ್ತು 07 ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ
ವಿದ್ಯಾರ್ಹತೆಗನುಗುಣವಾಗಿ ಉದ್ಯೋಗಕ್ಕೆ ಉತ್ತಮ ಅವಕಾಶ ಇದಾಗಿದೆ : ಪಿ. ಸುನೀಲ್ ಕುಮಾರ್
*****************************************

ಕೊಪ್ಪಳ ಜ. 28 (ಕರ್ನಾಟಕ ವಾರ್ತೆ): ಫೆಬ್ರುವರಿ. 06 ಮತ್ತು 07 ರಂದು ಕೊಪ್ಪಳದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಉದ್ಯೋಗ ಮೇಳವು ನಿರುದ್ಯೋಗಿಗಳಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗಕ್ಕೆ ಉತ್ತಮ ಅವಕಾಶ ಇದಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳ ಕೌಶಲ್ಯಾಭಿವೃದ್ದಿ ಕಾರ್ಯಕ್ರಮಗಳನ್ನು ಒಂದೆಡೆ ತರುವ ಮೂಲಕ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಸ್ಥಾಪಿತಗೊಂಡಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಯಮ ಕೇಂದ್ರ, ಇವರುಗಳ ಸಹಯೋಗದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಫೆ. 06 ಮತ್ತು 07 ರಂದು ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಉದ್ಯೋಗಾಕಾಂಕ್ಷಿಗಳು ಅವರು ಹೊಂದಿರುವ ವಿದ್ಯಾರ್ಹತೆಗೆ ಅನುಗುಣವಾಗಿ ಉತ್ತಮ ಉದ್ಯೋಗವಕಾಶ ಪಡೆಯಲು ಉದ್ಯೋಗಾಕಾಂಕ್ಷಿಗಳು ಮತ್ತು ನಿಯೋಜಕರನ್ನು ಒಂದೇ ವೇದಿಕೆಯಲ್ಲಿ ತರಲು ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳದಲ್ಲಿ 18 ರಿಂದ 35 ವರ್ಷದ ವಯೋಮಿತಿಯಲ್ಲಿರುವ ಅವಿದ್ಯಾವಂತರು ಮತ್ತು ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮೋ, ವಿವಿಧ ಪದವಿ, ಎಂ.ಬಿ.ಎ., ಎಂ.ಟೆಕ್., ವಿವಿಧ ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ ವಿದ್ಯಾರ್ಹತೆ ಹೊಂದಿರುವ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಪುರುಷ ಮತ್ತು ಮಹಿಳಾ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬಹುದಾಗಿದೆ. ಸುಮಾರು 2500 ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ಗುರಿಯನ್ನು ಹೊಂದಲಾಗಿದೆ. ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಸಕ್ತವಿರುವ ಉದ್ಯೋಗಾಕಾಂಕ್ಷಿಗಳಿಗೆ ಈಗಾಗಲೇ ಕೊಪ್ಪಳ ಜಿಲ್ಲಾಡಳಿತದಿಂದ ಅನಾವರಣಗೊಳಿಸಲಾಗಿರುವ ಜಾಲತಾಣ https://koppal.nic.in/ ನಲ್ಲಿ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ದಿನಾಂಕದಂದು ಸ್ಥಳದಲ್ಲಿಯೇ ನೋಂದಾವಣೆ ಮಾಡಿಕೊಳ್ಳಲು 10 ಕೌಂಟರಗಳನ್ನು ತೆರೆಯಲಾಗುತ್ತಿದೆ. ಉದ್ಯೋಗ ಮೇಳದಲ್ಲಿ ಸ್ಥಳೀಯ ಹಾಗೂ ಹೊರ ಜಿಲ್ಲೆಯ ಸುಮಾರು 40 ವಿವಿಧ ಕಂಪನಿಗಳು/ ಉದ್ಯೋಗದಾತರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಸಾರಿಗೆ, ಆರೋಗ್ಯ, ಬಿ.ಪಿ.ಓ., ಐ.ಟಿ. ತಂತ್ರಜ್ಞಾನ, ಮಾರುಕಟ್ಟೆ, ನಿರ್ಮಾಣ ಕ್ಷೇತ್ರ, ಕೈಗಾರಿಕೆ ವಲಯದ ಕಂಪನಿಗಳು ಭಾಗವಹಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಮುಖ್ಯವಾಗಿ ಬಾರಿ ವಾಹನ ಚಾಲಕರು, ಲಘು ವಾಹನ ಚಾಲಕರು, ಎಲೆಕ್ಟ್ರಿಶಿಯನ್, ಎಲೆಕ್ಟ್ರಿಶಿಯನ್ ಹೆಲ್ಪರ್ಸ್, ಸ್ಟೋರ್ ಕೀಪರ್, ಕಂಪ್ಯೂಟರ್ ಆಪರೇಟರ್/ ಡಾಡಾ ಎಂಟ್ರಿ ಆಪರೇಟರ್, ಕಛೇರಿ ಸಹಾಯಕರು/ ಪರಿಚಾರಕರು, ಸೆಕ್ಯೂರೆಟಿ ಗಾಡ್ರ್ಸ, ಹೊಲಿಗೆ ಯಂತ್ರ ನಿರ್ವಾಹಕರು, ಪ್ಲಂಬರ್ಸ್, ಲೆಕ್ಕಿಗರು, ಪ್ಯಾರಮೆಡಿಕಲ್, ನಿರ್ಮಾಣಕ್ಷೇತ್ರ. ಕೈಗಾರಿಕೆ ವಲಯದಲ್ಲಿ ಹಾಗೂ ಮಾರುಕಟ್ಟೆ ವಲಯದಲ್ಲಿ ಕಾರ್ಯನಿರ್ವಹಿಸಲು ಉದ್ಯೋಗಾಕಾಂಕ್ಷಿಗಳ ಅವಶ್ಯಕತೆ ಇರುತ್ತದೆ.
ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಿಂದ ಉದ್ಯೋಗ ಮೇಳ ನಡೆಯುವ ಜಿಲ್ಲಾ ಕ್ರೀಡಾಂಗಣಕ್ಕೆ ನಗರ ಸಾರಿಗೆ ವಾಹನ (ಸಿಟಿ ಬಸ್ಸಗಳ) ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಉದ್ಯೋಗಾಕಾಂಕ್ಷಿಗಳಿಗೆ ಕಡಿಮೆ ದರದಲ್ಲಿ ಆಹಾರ ಪೂರೈಕೆ ಯಾಗುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನೀಡಿರುವ ಸಂಚಾರಿ ಕ್ಯಾಂಟಿನ್ ವಾಹನದಲ್ಲಿ ಈ ವ್ಯವಸ್ಥೆ ಹಾಗೂ ಕಾರ್ಯಕ್ರಮದ ಸ್ಥಳದಲ್ಲಿ ಇತರೆ ಹೋಟೆಲ್‍ಗಳು ಕಡಿಮೆ ದರದಲ್ಲಿ ಆಹಾರ ಒದಗಿಸುವ ಕುರಿತು ಕ್ರೀಡಾಂಗಣದ ಹೊರಗಡೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಜಿಲ್ಲಾಡಳಿತದಿಂದ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ ಉದ್ಯೋಗ ಮೇಳವನ್ನು ಯಶಸ್ವಿಗೊಳಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ.

Please follow and like us:
error