ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾರಂಭ | ಕೇಂದ್ರ ತೈಲ ಸಚಿವರಿಂದ ಚಾಲನೆ -ಸಂಸದ ಸಂಗಣ್ಣ ಕರಡಿ

ಮಾ. ೨೪ರಂದು ಉಜ್ವಲ ಪರಿಷ್ಕೃತ ಹಂತಕ್ಕೆ ಚಾಲನೆ

ಕೊಪ್ಪಳ: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಬಡ ಕುಟುಂಬಗಳಿಗೆ ಉಚಿತವಾಗಿ ನೀಡಲಾಗುವ ಪ್ರಧಾನಮಂತ್ರಿ ಉಜ್ವಲ ಪರಿಷ್ಕೃತ ಯೋಜನೆಗೆ ಕೇಂದ್ರ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೊಪ್ಪಳದಲ್ಲಿ ಮಾ.೨೪ರಂದು ಚಾಲನೆ ನೀಡಲಿದ್ದಾರೆ.
ಜಿಲ್ಲಾ ಕ್ರೀಡಾಂಗಣ ಮೈದಾನದಲ್ಲಿ (ಪಬ್ಲಿಕ್ ಗ್ರೌಂಡ್) ಕಾರ್ಯಕ್ರಮ ನಿಗದಿಯಾಗಿದ್ದು, ಸುಮಾರು ೨೫,೦೦೦ ಫಲಾನುಭವಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅಂತ್ಯೋದಯ ಅನ್ನ ಯೋಜನೆ, ಪ್ರಧಾನಮಂತ್ರಿ ಆವಾಸ ಯೋಜನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳು, ಅರಣ್ಯ ನಿವಾಸಿಗಳು, ಅತಿ ಹಿಂದುಳಿದ ವರ್ಗಗಳು ಫಲಾನುಭವಿಗಳಾಗಿದ್ದಾರೆ. ಇಂತಹ ಪ್ರತಿಯೊಂದು ಕುಟುಂಬಕ್ಕೂ ಅಡುಗೆ ಅನಿಲ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುವುದು.
ರಾಜ್ಯ ಸರ್ಕಾರದ ಸಂಬಂಧಿಸಿದ ಇಲಾಖೆಗಳು, ಇಂತಹ ಫಲಾನುಭವಿಗಳನ್ನು ಗುರುತಿಸಿ, ಈ ಪಟ್ಟಿಯನ್ನು ಕೇಂದ್ರಕ್ಕೆ ಸಲ್ಲಿಸುತ್ತದೆ. ಅದರ ಆಧಾರದ ಮೇಲೆ ಇಂತಹ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸೌಲಭ್ಯವನ್ನು ಒದಗಿಸಲಾಗುವುದು. ಅಡುಗೆ ಅನಿಲ ಸಂಪರ್ಕವನ್ನು ಮೇಲ್ಕಾಣಿಸಿದ ಕುಟುಂಬಗಳ ಮಹಿಳೆಯ ಹೆಸರಿನಲ್ಲಿ ನೀಡಲಾಗುವುದು. ಒಂದು ವೇಳೆ ಸದರಿ ಕುಟುಂಬ ಆಧಾರ್ ಕಾರ್ಡ್ ಹೊಂದಿರದಿದ್ದ ಪಕ್ಷದಲ್ಲಿ, ಆಧಾರ್ ಕಾರ್ಡ್ ಒದಗಿಸಿ, ಅಡುಗೆ ಅನಿಲ ಸೌಲಭ್ಯ ನೀಡುವ ಕ್ರಮವನ್ನು ಪರಿಷ್ಕೃತ ಯೋಜನೆ ಹೊಂದಿದೆ ಎಂದು ಸಂಗಣ್ಣ ಕರಡಿ ತಿಳಿಸಿದ್ದಾರೆ.