ಜಿಲ್ಲಾಡಳಿತದಿಂದ ಕೊಪ್ಪಳ ಅಜ್ಜನ ಜಾತ್ರೆಗೆ ಸಕಲ ಸಹಕಾರ- ಡಿಸಿ ಎಂ. ಕನಗವಲ್ಲಿ


ಕೊಪ್ಪಳದಲ್ಲಿ ಜ.14 ರಿಂದ ಜರುಗಲಿರುವ ಶ್ರೀ ಗವಿಸಿದ್ದೇಶ್ವರ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಹಾಗೂ ಸುಗಮವಾಗಿ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
  ಗವಿಸಿದ್ದೇಶ್ವರ ಜಾತ್ರೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೊಪ್ಪಳದಲ್ಲಿ ಪ್ರತಿ ವರ್ಷ ನಡೆಯುವ ಗವಿಸಿದ್ದೇಶ್ವರ ಜಾತ್ರೆ ಇಡೀ ರಾಜ್ಯಕ್ಕೆ ಸಂಭ್ರಮ ತರುವಂತಾಗಬೇಕು ಅಲ್ಲದೆ ಧಾರ್ಮಿಕ ಉತ್ಸವವಾಗಬೇಕು.  ರಾಜ್ಯದ ವಿವಿಧ ಭಾಗಗಳಿಂದ ಸುಮಾರು 3 ರಿಂದ 5 ಲಕ್ಷ ಭಕ್ತಾದಿಗಳು ಜಾತ್ರೆಗೆ ಆಗಮಿಸುವ ನಿರೀಕ್ಷೆ ಇದೆ.  ಜ. 14 ರಂದು ಮಹಾರಥೋತ್ಸವ ನಡೆಯಲಿದ್ದು, ಜಾತ್ರೆ ಶಾಂತಿಯುತವಾಗಿ ಹಾಗೂ ಸುಗಮವಾಗಿ ಜರುಗುವಂತೆ ಜಿಲ್ಲಾಡಳಿತದಿಂದ ಸಕಲ ರೀತಿಯ ಸಹಕಾರ ನೀಡಲಾಗುವುದು.   ರಥೋತ್ಸವದ ದಿನದಂದು ಟ್ರಾಫಿಕ್ ಜಾಮ್ ಆಗದಂತೆ ಎಚ್ಚರ ವಹಿಸಲು ಈಗಾಗಲೆ ಪೊಲೀಸ್ ಇಲಾಖೆ ಯೋಜನೆಯನ್ನು ರೂಪಿಸಿದೆ.  ಬಸ್‍ನಿಲ್ದಾಣ ಹಾಗೂ ನಗರದ ವಿವಿಧೆಡೆಗಳಿಂದ ಗವಿಮಠ ಬಳಿಗೆ ಸಿಟಿ ಬಸ್ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸಲು ಈಕರಸಾ ಸಂಸ್ಥೆಗೆ ಸೂಚನೆ ನೀಡಲಾಗಿದೆ.  ಒಟ್ಟಾರೆ ಭಕ್ತಾದಿಗಳು ಶ್ರೀ ಗವಿಸಿದ್ದೇಶ್ವರ ಜಾತ್ರೆಯನ್ನು ಸಂತೋಷದಿಂದ ಸಂಭ್ರಮಿಸಿ, ಸುರಕ್ಷಿತವಾಗಿ ಮನೆಗೆ ಮರಳುವಂತಾಗಬೇಕು ಎಂದರು.

 ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ವೆಂಕಟರಾಜಾ,  ಪೌರಾಯುಕ್ತ ಪರಮೇಶ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಲಷ್ಕರಿನಾಯಕ್,  ಗವಿಮಠದ ವತಿಯಿಂದ ಬಸವರಾಜ ಬಳ್ಳೊಳ್ಳಿ, ಶರಣು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು  ಭಾಗವಹಿಸಿದ್ದರು.

Leave a Reply