ಜಾತ್ರಾ ಕಾರ್ಯಕ್ರಮದ ಚಾಲನೆ ನೀಡುವ ಬಸವಪಟ ಕಾರ್ಯಕ್ರಮ 


ಬಸವಪಟ ಆರೋಹಣ ಕಾರ್ಯಕ್ರಮದ ಮೂಲಕವೇ ಜಾತ್ರೆಗೆ ವಿದ್ಯುಕ್ತ ಚಾಲನೆ
ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಮುನ್ನಾ ೪ ನೇ ದಿನ ‘ಬಸವ ಪಟ ಆರೋಹಣ’ ಎಂಬ ಧಾರ್ಮಿಕ ಕಾರ್ಯಕ್ರಮವೂ ಜರುಗುತ್ತದೆ. ಭಕ್ತರು ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರವಿರುವ ಬಸವಪಟಕ್ಕೆ ವಿಧಿವಿಧಾನೋಕ್ತವಾಗಿ ಪೂಜೆ ಸಲ್ಲಿಸಿ, ಮಂಗಳಾರತಿಗೈದು , ನೈವೇದ್ಯ ಮಾಡಿ ಆ ಬಳಿಕ ಬಸವ ಪಟವನ್ನು ಕೈಯಲ್ಲಿ ಹಿಡಿದುಕೊಂಡು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತಲೂ ೫ ಸಲ ಪ್ರದಕ್ಷಿಣೆ ಹಾಕುತ್ತಾ ಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಕರ್ತೃ ಗದ್ದುಗೆಯ ದ್ವಾರದ ಮುಂಭಾಗದಲ್ಲಿರುವ ಬಾಗಿಲಿನ ಎದುರಿಗಿರುವ ಶಿಲಾಸ್ತಂಭಕ್ಕೆ ಬಸವ ಪಟವನ್ನು ಕಟ್ಟುತ್ತಾರೆ. ಇದುವೇ ‘ಬಸವ ಪಟ ಆರೋಹಣ’ ಕಾರ್ಯಕ್ರಮವಾಗಿರುತ್ತದೆ. ಶ್ರೀ ಗವಿಸಿದ್ಧನ ಸನ್ನಿಧಿಯಲ್ಲಿ ಬಸವ ಪಟ ಆರೋಹಣ ಮಾಡುವ ಉದ್ದೇಶವೇನೆಂದರೆ ? ನಮ್ಮದು ಕೃಷಿ ಪ್ರಧಾನ ನಾಡು ಆ ಕಾರಣಕ್ಕಾಗಿ ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪೃಕೃತಿ ಇವುಗಳಿಗೆ ಪೂಜೆ ಸಲ್ಲಿಸುವದು ನಮ್ಮ ಪ್ರಥಮ ಕರ್ತವ್ಯವಾಗಿದೆ. ಶ್ರೀ ಗವಿಸಿದ್ಧನ ಸನ್ನಿಧಿಯು ಈ ನಾಡಿನಲ್ಲಿ ವರ್ಷಪೂರ್ತಿ ಉತ್ತಮ ಮಳೆ, ಉತ್ತಮ ಬೆಳೆ ಬಂದು ರೈತಾಪಿ ವರ್ಗಕ್ಕೆ ಸುಖ, ಶಾಂತಿ, ಸಮೃದ್ಧಿ ಸದಾ ದೊರೆಯಲೆಂಬ ಆಶಯಕ್ಕಾಗಿ ‘ಬಸವ ಪಟ ಆರೋಹಣ’ ಕಾರ್ಯಕ್ರಮವು ಜರುಗುತ್ತದೆ. ಹಾಗೂ ಇದರಲ್ಲಿ ಆಧ್ಯಾತ್ಮದ ಅನುಸಂಧಾನವು ಸಮ್ಮಿಳಿತಗೊಂಡಿದೆ. ಶ್ರೀಮಠದ ಜಾತ್ರಾ ಪರಂಪರೆಯಲ್ಲಿ ಬಸವಪಟ ಆರೋಹಣ ಕಾರ್ಯಕ್ರಮದ ಮೂಲಕವೇ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಂತಾಗುತ್ತದೆ.

ದಿನಾಂಕ ೧೮-೦೧-೨೦೧೯ ರಂದು ಸಂಜೆ ೪ ಗಂಟೆಗೆ ದೇವಿ ಅನ್ನಪೂರ್ಣೇಶ್ವರಿಗೆ ಉಡಿ ತುಂಬುವ ಕಾರ್ಯಕ್ರಮ
ಸಂಸ್ಥಾನ ಶ್ರೀ ಗವಿಮಠದ ಜಾತ್ರಾಮಹೋತ್ಸವದ ಅಂಗವಾಗಿ ಜರುಗುವ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಾತ್ರೆಯ ಮುನ್ನ ಬರುವ ಮಂಗಳವಾರ ಇಲ್ಲವೇ ಶುಕ್ರವಾರದ ದಿನ ಪ್ರತಿವರ್ಷ ಶೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮವು ಸಾಯಂಕಾಲ ಜರುಗುತ್ತದೆ. ಈ ಸಲ ದಿನಾಂಕ ೧೮ ರಂದು ಶುಕ್ರವಾರ ಸಂಜೆ ೪ ಗಂಟೆಗೆ ಗವಿಮಠದ ಬೆಟ್ಟದ ಮೇಲಿರುವ ಶ್ರೀ ಅನ್ನಪೂಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಮವು ಜರುಗುತ್ತದೆ. ಇದರಲ್ಲಿ ಮಹಿಳಾ ಭಕ್ತಾದಿಗಳು ಸಕ್ರೀಯವಾಗಿ ಭಾಗವಹಿಸುತ್ತಾರೆ. ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಬಾಳೆಕಂಬ, ತೆಂಗಿನ ಗರಿ, ಕಬ್ಬಿನ ಹಂದರ ಹಾಕಿರುತ್ತಾರೆ. ಹೋಳಿಗೆ ಸಜ್ಜಕದ ಪ್ರಸಾದ ನೈವೇದ್ಯವಾಗುತ್ತದೆ. ಆಗಮಿಸಿದ ಎಲ್ಲ ತಾಯಂದಿರಿಗೂ ಮಂಗಳಕರ ದ್ರವ್ಯಗಳನ್ನು ಕೊಡುವ ಮೂಲಕ ಉಡಿತುಂಬುವ ಕಾಯಕವನ್ನು ನಡೆಸುತ್ತಾರೆ. ಅಷ್ಟೊತ್ತಿಗೆ ಕರ್ತೃ ಗವಿಸಿದ್ಧೇಶ್ವರನ ಪಾದೋದಕವು ಬರುತ್ತದೆ.ಅದನ್ನು ಸಿಂಪಡಿಸಿದ ನಂತರ ಅನ್ನ ಸಂತರ್ಪಣೆ ನಡೆಯುತ್ತದೆ. ಕೊಪ್ಪಳ ಹಾಗೂ ಸುತ್ತಲಿನ ಸಹಸ್ರಾರು ಮಹಿಳೆಯರು ಇದರಲ್ಲಿ ಭಾಗವಹಿಸುತ್ತಾರೆ. ಶ್ರೀ ಅನ್ನಪೂರ್ಣೇಶ್ವರಿಗೆ ಹಾಗೂ ಎಲ್ಲ ತಾಯಂದಿರಿಗೂ ಉಡಿತುಂಬುವ ಮೂಲಕ ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ, ಮಂಗಳಕರವಾಗಿ ಸಾಗಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ. ಇದರ ಜೊತೆಗೆ ತಮ್ಮ ತಮ್ಮ ಇಷ್ಟಾರ್ಥಗಳ ಶೀಘ್ರ ಈಡೇರಿಕೆಯಾಗಿ, ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪ ಹೊಂದಿರುವ ಎಲ್ಲ ತಾಯಂದಿರು ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಮೂಲಕ ತಮ್ಮಗಳ ಹರಕೆ ಪರಿಪೂರ್ಣಗೊಳಿಸುವರು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮಹೇಶ್ವರ ದೇವಸ್ಥಾನದ ಅಕ್ಕನ ಬಳಗದವರು, ಪ್ಯಾಟಿ ಈಶ್ವರ ದೇವಸ್ಥಾನದ ಅಕ್ಕನ ಬಳಗದವರು ಹಾಗೂ ಊರಿನ ಎಲ್ಲ ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವದು ವೈಶಿಷ್ಟ್ಯಪೂರ್ಣವಾಗಿದೆ.
ಸುದ್ದಿ ೬: ದಿನಾಂಕ ೧೮-೦೧-೨೦೧೯ ರಂದು ಕರ್ತೃ ಗವೀಶನ ಗದ್ದುಗೆಯ ಮೇಲೆ ಪಂಚ ಕಳಸೋತ್ಸವ:
ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಪಂಚ ಕಳಸೋತ್ಸವ ಕಾರ್ಯಕ್ರಮ ಗವಿಮಠದಲ್ಲಿ ಜರುಗುತ್ತದೆ.ಸಾಮಾನ್ಯವಾಗಿ ಎಲ್ಲ ಮಠಮಾನ್ಯಗಳಿಗೆ ಒಂದೇ ಕಳಸವಿರುತ್ತದೆ. ಆದರೆ ಕೊಪ್ಪಳದ ಶ್ರೀ ಗವಿಮಠದ ಕರ್ತೃ ಶ್ರೀ ಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಐದು ಕಳಸಗಳು ಶೋಭಾಯಮಾನವಾಗಿರುತ್ತವೆ. ರಥೋತ್ಸವದ ದಿನಗಳು ಸಮೀಪಿಸುತ್ತಿರುವಾಗ ಈ ಐದು ಕಳಸಗಳನ್ನು ಒಂದು ವಾರದ ಮೊದಲೇ ಕೆಳಗೆ ಇಳಿಸಿಕೊಂಡು, ಆಯಾ ಓಣಿಯ ದೈವದವರು ಕೊಂಡೊಯ್ಯುತ್ತಾರೆ. ನಂತರ ಅವುಗಳನ್ನು ಸ್ವಚ್ಚಗೊಳಿಸಿ, ಶೃಂಗಾರಗೊಳಿಸಿ ಶ್ರೀ ಗವಿಮಠಕ್ಕೆ ತರುತ್ತಾರೆ. ಒಂದನೆಯದು ಕೊಪ್ಪಳದ ಬನ್ನಿಕಟ್ಟಿ ಭಾಗದ್ದು. ಶ್ರೀ ಗೌರಿಶಂಕರ ದೇವಸ್ಥಾನದಿಂದ ಶ್ರೀಮಠಕ್ಕೆ ಬರುವದು. ಎರಡನೆಯದು ವಿ.ಕೆ. ಸಜ್ಜನರು ಮಾಡಿಸಿದ ಕಳಸ. ಅವರ ಮನೆಯಿಂದ ಶೀ ಗವಿಮಠಕ್ಕೆ ಬರುವದು. ಮೂರನೆಯದು ಪಲ್ಲೇದವರ ಓಣಿಯ ಶ್ರೀ ಬಸವೇಶ್ವರ ದೇವಸ್ಥಾನದ ದೈವದವರಿಂದ ಶ್ರೀಮಠಕ್ಕೆ ಬರುವದು. ನಾಲ್ಕನೆಯದು ಕೋಟೆ ರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನದ ದೈವದವರಿಂದ ಮಠಕ್ಕೆ ಬರುವದು. ಐದನೆಯದು ಶ್ರೀ ಪ್ಯಾಟಿ ಈಶ್ವರ ದೇವಸ್ಥಾನದ ದೈವದವರಿಂದ ಮಠಕ್ಕೆ ಬರುವದು. ಆಯಾ ಓಣಿಯ ದೈವದವರು ಐದು ಕಳಸಗಳನ್ನು ಭಾಜಾ-ಭಜಂತ್ರಿ, ಭಜನೆ, ಡೊಳ್ಳು ಕುಣಿತದೊಂದಿಗೆ ಗವಿಮಠಕ್ಕೆ ತಂದು, ಗೋಪುರಕ್ಕೇರಿಸಿ, ಪೂಜೆ ಮಾಡಿಸಿ, ಪ್ರಸಾದ ಪಡೆದು ಮರಳುತ್ತಾರೆ. ಇದು ಪ್ರತಿವರ್ಷದ ಸಂಪ್ರದಾಯ. ರಾತ್ರಿ ಈ ಕಾರ್ಯಕ್ರಮ ಜರುಗಿದ ನಂತರ ಗವಿಮಠಕ್ಕೆ ಆಗಮಿಸಿದ ಜಂಗಮಯೋಗಿಗಳಿಗೆ ಪ್ರಸಾದ , ದಕ್ಷಿಣೆ, ತಾಂಬೂಲಾದಿಗಳನ್ನು ನೀಡಿ ಜಂಗಮಾರಾಧನೆ ಮಾಡಲಾಗುತ್ತದೆ.

 

 

Please follow and like us:
error