ಜನ ವಾಸಿಸುವ ಪ್ರದೇಶದಿಂದ ಹಂದಿಗಳನ್ನು ದೂರ ಸಾಗಿಸಿ : ಪಿ. ಸುನೀಲ್ ಕುಮಾರ್ ಸೂಚನೆ

ಹೆಚ್.೧ ಎನ್.೧ ಸೋಂಕು ತಡೆ : ಸಮನ್ವಯ ಸಮೀತಿ ಸಭೆ

ಕೊಪ್ಪಳ ನ. : ಹೆಚ್.೧ ಎನ್.೧ ಸೋಂಕು ತಡೆಗಟ್ಟಲು ಅಗತ್ಯ ಮುಂಜಾಗೃತಕ್ಕಾಗಿ ಜನ ವಾಸಿಸುವಂತಹ ಪ್ರದೇಶದಿಂದ ಹಂದಿಗಳನ್ನು ದೂರ ಸಾಗಿಸಲು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಮತ್ತು ಗ್ರಾ.ಪಂ. ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸೂಚನೆ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಹೆಚ್.೧ ಎನ್.೧ ಸೋಂಕು ತಡೆಗಟ್ಟಲು ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳುವ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾದ ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಮೀತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ತಂಬಾಕು ನಿಯಂತ್ರಣ ಕೋಶ ಮತ್ತು ತಹಶೀಲ್ದಾರರ ಸಂಯೋಗದಲ್ಲಿ ದಂಡ ವಿಧಿಸುವಂತಾಗಬೇಕು. ಸಿಓಟಿಪಿಎ-೨೦೦೩ ರ ತಂಬಾಕು ನಿಷೇಧ ಕಾಯ್ದೆಯಡಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಮತ್ತು ಶಾಲೆಯ ೧೦೦ ಗಜದ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿ ದಂಡ ವಿಧಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಫಲಕಗಳನ್ನು ಹಾಕಲು ಹಾಗೂ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಿ. ಸರ್ಕಾರಿ ಕಛೇರಿಗಳಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆ ಮಾಡದಂತೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆ ಮಾಡಿದವರಿಗೆ ಕಡ್ಡಾಯವಾಗಿ ದಂಡ ವಿಧಿಸಬೇಕು. ಹಂದಿಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ದೂರ ಸಾಗಿಸಲು ಮತ್ತು ಬೀದಿಗಳಲ್ಲಿ ಕಸ ಚೆಲ್ಲದಂತೆ ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಮತ್ತು ವಿಷೇಷವಾಗಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಆದೇಶಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಂ.ಎಂ. ಕಟ್ಟಿಮನಿ ಅವರು ಮಾತನಾಡಿ, ಹೆಚ್.೧ ಎನ್.೧ ಸೋಂಕು ಇದು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇನ್‌ಪ್ಲೂಯೆಂಜಾ ವೈರಸ್‌ನಿಂದ ಬರುತ್ತದೆ, ಶ್ವಾಸಕೋಶಕ್ಕೆ ಸಂಬಂಧಪಟ್ಟ ಖಾಯಿಲೆಯಾಗಿರುತ್ತದೆ. ಈ ರೋಗವು ಸೋಂಕಿನಿಂದ ಬಳುಲಿದ ವ್ಯಕ್ತಿಯಿಂದ ಉಸಿರಾಟದ ಮುಖಾಂತರ ತೀರ್ವವಾಗಿ ಹರಡುತ್ತದೆ. ಏಕಾಏಕಿ ಜ್ವರ, ತಲೆನೋವು, ಮೈ ಕೈ ನೋವು, ಮೂಗು ಸೋರಿಕೆ, ಸುಸ್ತು, ಗಂಟಲು ಕೆರೆತ ಮತ್ತು ತೀರ್ವ ತರನಾದ ಉಸಿರಾಟ ತೊಂದರೆ ವಾಂತಿ ಮತ್ತು ಭೇದಿ ಇವುಗಳು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಸಾಮಾನ್ಯವಾಗಿ ೧೮ ತಿಂಗಳ ಒಳಗಿನ ಮಕ್ಕಳು ಮತ್ತು ವೃದ್ಧರಲ್ಲಿ ಹಾಗೂ ಹೃದಯ ರೋಗ, ಸಕ್ಕರೆ ಖಾಯಿಲೆ, ಹೆಚ್.ಐ.ವಿ ಯಿಂದ ಬಳಲುತ್ತಿರುವವರಲ್ಲಿ ತೀವ್ರ ಸ್ವರೂಪದ ಉಸಿರಾಟ ಮಂಡಲದ ರೋಗವನ್ನು ಉಂಟು ಮಾಡಿ ಸಾವು ಸಂಬವಿಸುವ ಸಾಧ್ಯತೆಗಳಿವೆ ಎಂದು ಮಾಹಿತಿ ನೀಡಿದರು.
ಮುಂಜಾಗೃತ ಕ್ರಮಗಳು : ಹೆಚ್.೧ ಎನ್.೧ ರೋಗ ಬಾರದಂತೆ ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಇಂತಿವೆ. ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರ ವಸ್ತ್ರದಿಂದಾಗಲಿ ಅಥವಾ ಟಿಶ್ಯೂ ಕಾಗದದಿಂದಾಗಲಿ ಮುಚ್ಚಿಕೊಳ್ಳಬೇಕು. ಮೂಗು, ಕಣ್ಣು ಅಥವಾ ಬಾಯಿಯನ್ನು ಮುಚ್ಚಿಕೊಳ್ಳುವ ಮೊದಲು ಮತ್ತು ನಂತರ ಸಾಬೂನಿನಿಂದ ಹಾಗೂ ನೀರಿನಿಂದ ಆಗಾಗ್ಗೆ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಜನಸಂದಣಿ ಇರುವ ಸ್ಥಳಗಳಿಗೆ ಹೋಗಬಾರದು. ಕೆಮ್ಮು ನೆಗಡಿ ಮತ್ತು ಸೀನು ಜ್ವರದಂತಹ ಸೋಂಕಿನ ಚಿಹ್ನೆಯಿರುವ ಜನರಿಂದ ಕನಿಷ್ಟ ಒಂದು ಮಾರು ದೂರವಿರಬೇಕು. ಚೆನ್ನಾಗಿ ನಿದ್ರೆ ಮಾಡುವುದು, ದೈಹಿಕವಾಗಿ ಚಟುವಟಿಕೆಯಿಂದಿರಬೇಕು. ದಾರಾಳವಾಗಿ ನೀರು ಕುಡಿಯಿರಿ ಮತ್ತು ಪೌಷ್ಟಿಕಾಂಶವಿರುವ ಆಹಾರ ಸೇವಿಸಬೇಕು. ಅಲ್ಲದೇ ಹಸ್ತಲಾಘವ ಹಾಗೂ ಇತರೆ ರೂಪದಲ್ಲಿ ದೈಹಿಕ ಸಂಪರ್ಕದೊಂದಿಗೆ ಶುಭಕೋರಿಕೆ, ವೈದ್ಯರುಗಳ ಸಲಹೆ ಇಲ್ಲದೇ ಔಷಧಿಯನ್ನು ತೆಗೆದುಕೊಳ್ಳುದು, ಅನಾವಶ್ಯಕವಾಗಿ ಜನ ಸಂದಣಿ ಪ್ರದೇಶಗಳಿಗೆ ಭೇಟಿ ನೀಡುವುದು, ಅನಾವಶ್ಯಕವಾಗಿ ಪ್ರಯಾಣಿಸುವುದು ಮತ್ತು ಫ್ಲೂ ತರಹದ ಚಿಹ್ನೆಗಳಿರುವ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮಾಡಬಾರದು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿರುಪಾಕ್ಷರೆಡ್ಡಿ ಮಾದಿನೂರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ, ತಹಶೀಲ್ದಾರ ಜೆ.ಬಿ ಮಜ್ಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಈರಣ್ಣ ಪಂಚಾಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.