ಜನ ಪರಿವರ್ತನೆ, ಮನ ಪರಿವರ್ತನೆಗಾಗಿ ಪರಿವರ್ತನಾ ರ‍್ಯಾಲಿ: ಸಂಸದ ಕರಡಿ

ಕೊಪ್ಪಳ, ಡಿ.೦೯: ನಗರದ ಶ್ರೀ ಮಹೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ರ‍್ಯಾಲಿಯ ಕುರಿತು ೧ನೇ ವಾರ್ಡ ನಿಂದ ೧೦ನೇ ವಾರ್ಡನ ಬೂತ ಸಮಿತಿಯ ಸಭೆ ಸಂಜೆ ೫.೦೦ ಗಂಟೆಗೆ ನೇರವೇರಿತು.
ಸಭೆ ಉದ್ಘಾಟಿಸಿದ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಮಾತನಾಡಿ ಡಿ.೧೬ ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಪರಿವರ್ತನಾ ರ‍್ಯಾಲಿಯು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ. ಈ ರ‍್ಯಾಲಿಯು ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಸಿ.ಎಂ. ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸುವುದಷ್ಟೆ ಅಲ್ಲದೇ ಕಾಂಗ್ರೆಸ್ ಮುಕ್ತ ಹಾಗೂ ನವ ಕರ್ನಾಟಕ ನಿರ್ಮಾಣದ ಧೃಡ ಸಂಕಲ್ಪದೊಂದಿಗೆ ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಜನ ಪರಿವರ್ತನೆ ಮತ್ತು ಮನ ಪರಿವರ್ತನೆ ಮಾಡುವ ಸದುದ್ದೇಶವನ್ನು ಹೊಂದಿದೆ. ಅಂದು ನಡೆಯುವ ರ‍್ಯಾಲಿಯನ್ನು ಯಶಸ್ವಿಗೊಳಿಸಲು ಕಾರ್ಯಕರ್ತರು ಕಂಕಣ ಬದ್ಧರಾಗಿ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಪರಿಷತ ಸದಸ್ಯ ಸಿ.ವಿ. ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿ ಪರಿವರ್ತನಾ ರ‍್ಯಾಲಿಯು ನ.೦೨ ರಂದು ಪ್ರಾರಂಭವಾಗಿ ಜ.೨೬ ರಂದು ಮುಕ್ತಾಯವಾಗಲಿದ್ದು, ಈಗಾಗಲೇ ರ‍್ಯಾಲಿಯು ಸುಮಾರು ೭೫ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಸಂಚಲನವನ್ನು ಉಂಟುಮಾಡಿದೆ. ರಾಜ್ಯದಲ್ಲಿ ರ‍್ಯಾಲಿಗೆ ಸಿಗುತ್ತಿರುವ ಜನ ಬೆಂಬಲವನ್ನು ನೋಡಿ ಕಾಂಗ್ರೆಸ್‌ನ ರಾಜ್ಯ ಮತ್ತು ರಾಷ್ಟ್ರೀಯ ಮುಖಂಡರು ನಡುಗಿದ್ದಾರೆ. ಸ್ಥಳಿಯ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ೪.೫ ವರ್ಷದಲ್ಲಿ ಸುಮಾರು ೨೦೦೦ ಸಾವಿರ ಕೋಟಿಗೂ ಅಧಿಕ ಅನುಧಾನ ಬಿಡುಗಡೆಗೊಳಿಸಿದ್ದೇನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ, ಒಂದು ಸಾರಿ ಕ್ಷೇತ್ರ ಪರ್ಯಟನ ನಡೆಸಿದರೆ ಯಾವುದು ಮತ್ತು ಯಾರ ಅಭಿವೃದ್ಧಿಯಾಗಿದೆ ಎಂದು ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಅಂದು ನಡೆಯುವ ಪರಿವರ್ತನಾ ರ‍್ಯಾಲಿಗೆ ಸಹಕರಿಸಿ ಪ್ರತಿ ಒಂದು ವಾರ್ಡಿನಿಂದ ಸರಿಸುಮಾರು ೩೫೦ ರಿಂದ ೪೦೦ ಜನ ಕಾರ್ಯಕರ್ತರನ್ನು ಕರೆ ತಂದು ರ‍್ಯಾಲಿ ಯಶಸ್ವಿಗೆ ಶ್ರಮಿಸಬೇಕು ಎಂದು ಬೂತ ಸಮಿತಿ ಪದಾಧಿಕಾರಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪರಿಷತ್ ಸದಸ್ಯ ಡಿ. ಮಲ್ಲಣ್ಣ, ಜಿಲ್ಲಾ ಉಪಾಧ್ಯಕ್ಷ ರಾಜು ಬಾಕಳೆ, ನಗರ ಮಂಡಲ ಅಧ್ಯಕ್ಷ ಶಿವಕುಮಾರ ಹಕ್ಕಾ ಪಕ್ಕಿ, ನಗರಸಭೆ ಸದಸ್ಯರಾದ ಅಪ್ಪಣ್ಣ ಪದಕಿ, ಪ್ರಾಣೇಶ ಮಾದಿನೂರ, ಮಲ್ಲಣ್ಣ ಮುರಡಿ, ಮುಖಂಡರಾದ ಸಂಗಪ್ಪ ವಕ್ಕಳದ, ವಿರುಪಾಕ್ಷಯ್ಯ ಗದುಗಿನಮಠ, ಶಿವಪ್ಪ ಜನ್ನಿ, ವಿ.ಎಮ್. ಬೂಸನೂರಮಠ ವಕೀಲರು, ಸಯ್ಯದ್ ನಾಸೀರಹುಸೇನ್, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ವಾಣಿಶ್ರೀ ಮಠದ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಮತ್ತು ಬೂತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.