fbpx

ಜನರನ್ನು ಶಿಕ್ಷಣದತ್ತ ಸೆಳೆದ ಕೀರ್ತಿ ಸಂತ ಸೇವಾಲಾಲರದ್ದು : ರಾಘವೇಂದ್ರ ಹಿಟ್ನಾಳ

ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಂತಹ ಜನರನ್ನು ಪ್ರಪ್ರಥಬಾರಿಗೆ ಶಿಕ್ಷಣದತ್ತ ಸೆಳೆದ ಕೀರ್ತಿ ಸಂತ ಸೇವಾಲಾಲರವರಿಗೆ ಸಲ್ಲಬೇಕು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಸಂತ ಸೇವಾಲಾಲ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂತ ಸೇವಾಲಾಲರು ಸಾದು ಪುರುಷರಾಗಿದ್ದಾರೆ. ಭಕ್ತಿ-ಭಾವದ ಮುಖಾಂತರವಾಗಿ ಆಧ್ಯಾತ್ಮವನ್ನು ಹೊಂದಿದವರು. ಜೀವನದ ಬಗ್ಗೆ ಜನರಿಗೆ ಉಪದೇಶಗಳನ್ನು ನೀಡಿದ್ದಾರೆ. ಇಂತಹ ಮಹನಿಯ ವ್ಯಕ್ತಿತ್ವವನ್ನು ಎಲ್ಲರಿಗೂ ಪರಿಚಯಿಸುವ ಪ್ರಯತ್ನವನ್ನು ಪ್ರಪ್ರಥಮಬಾರಿಗೆ ನಮ್ಮ ಸರ್ಕಾರ ಮಾಡಿದೆ. ಅಲ್ಲದೇ ಬಂಜಾರ ಸಮುದಾಯಕ್ಕೆ ಸುಮಾರು ೭೫ ಕೋಟಿ ರೂ. ಗಳನ್ನು ನೀಡಿದೆ. ಬಹದ್ದೂರಬಂಡಿ ಗ್ರಾಮವು ಐತಿಹಾಸಿಕ ಇತಿಹಾಸವನ್ನು ಹೊಂದಿದ್ದು, ಇದರ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಸರ್ಕಾರವು ಶ್ರಮಿಸುತ್ತಿದೆ. ಮುಂದಿನ ದಿನಮಾನಗಳಲ್ಲಿ ತಾಲೂಕಿನ ಬಹದ್ದೂರಬಂಡಿ ಗ್ರಾಮದಲ್ಲಿ, ಉದ್ಯಾನವನ ಹಾಗೂ ಸಂತ ಸೇವಾಲಾಲರ ದೇವಸ್ಥಾನವನ್ನು ನಿರ್ಮಿಸಲಾಗುವುದು. ಕೊಪ್ಪಳ ನಗರದಲ್ಲಿ ಬಂಜಾರ ಸಮುದಾಯ ಭವನವನ್ನು ಸಹ ನಿರ್ಮಿಸಲಾಗುವುದು. ಬಂಜಾರ ಸಮಾಜದವರು ಶ್ರಮಜೀವಿಗಳಾಗಿದ್ದು, ಕೃಷಿ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಷ್ಟಪಟ್ಟು ದುಡಿಯುವಂತಹ ಒಂದು ಹಿಂದುಳಿದ ಜನಾಂಗವಾಗಿದೆ. ಸರ್ಕಾರವು ಸಣ್ಣ-ಸಣ್ಣ ಸಮುದಾಯಗಳ ಅಭಿವೃದ್ಧಿಗಾಗಿಯು ಕೂಡ ವಿವಿಧ ನಿಗಮಗಳ ಮೂಲಕ ಸಾಕಷ್ಟು ಅನುದಾನ ನೀಡಿದೆ. ಸರ್ಕಾರವು ಶಿಕ್ಷಣಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅತೀ ಹೆಚ್ಚು ಅನುದಾನ ಶಿಕ್ಷಣಕ್ಕಾಗಿಯೇ ಮೀಸಲಿಟ್ಟಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವ್ಯವಸ್ಥೆಯನ್ನು ಸಹ ಕಲ್ಪಿಸಿದೆ. ಈಗಾಗಲೇ ರಾಜ್ಯದ ಎಸ್.ಸಿ., ಎಸ್.ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲಾಗಿದ್ದು, ಇದೀಗ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ. ಎಲ್ಲಾ ಜನಾಂಗಗಳ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿದ್ದು, ಎಲ್ಲರಿಗೂ ಸಮ ಪಾಲು ಸಮ ಬಾಳು ಎಂಬುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಅವರು, ಭಾರತ ದೇಶವು ಅನೇಕ ವೀರರು, ಮಹನೀಯರು, ಸಂತರ ನೆಲೆ ಬೀಡಾಗಿದೆ. ಸಂತರು ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಇಂತಹ ಮಹನಿಯರಲ್ಲಿ ಸಂತ ಸೇವಾಲಾಲರು ಕೂಡ ಒಬ್ಬರು. ಸಂತ ಸೇವಾಲಾಲರವರು ಸಮಾಜದ ಒಳಿತಿಗಾಗಿ ೧೭ ಬಾರಿ ದೇಶದಾದ್ಯಂತ ಸಂಚರಿಸಿದವರು. ನೀರಿನ ರಕ್ಷಣೆ ಕುರಿತು ತಿಳಿಸಿದ್ದಾರೆ. ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರು ಸಹ ವೈಭವ ಜೀವನವನ್ನು ಬಿಟ್ಟು ಸಮಾಜ ಸುಧಾರಣೆಗಾಗಿ ಶ್ರಮಿಸಿದ ಮಹಾನ್ ಸಂತರಾದವರು. ಸೇವಾಲಾಲರು ಪ್ರಾಮಾಣಿಕತೆಗೆ ಹೆಸರಾಗಿದ್ದು, ದೇವಧೂತ ಅವತಾರರು. ಇಂತಹ ಮಹನಿಯರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸರ್ಕಾರವು ಜಯಂತಿಯನ್ನು ಆಚರಿಸುತ್ತಿದೆ. ಎಲ್ಲಾ ಸಮುದಾಯದವರಿಗೆ ಮುಖ್ಯವಾಹಿನಿಗೆ ತರತಕ್ಕಂತ ಕೆಲಸವನ್ನು ಸರ್ಕಾರವು ಮಾಡುತ್ತಿದ್ದೆ. ಸೇವಾಲಾಲರು ಶಿಕ್ಷಣದತ್ತ ಜನರ ಗಮನವನ್ನು ಸೆಳಿದಿದ್ದು, ಸರ್ಕಾರವು ಸಹ ಶಿಕ್ಷಣಕ್ಕಾಗಿ ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಆದ್ದರಿಂದ ಎಲ್ಲರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಶಕ್ತಿಪೀಠ ನೀಲಾನಗರದ ಕುಮಾರ ಮಹಾರಾಜ, ಕೊಪ್ಪಳದ ಗೋಸಾಯಿ ಬಾಬ ಹಾಗೂ ಚಂದ್ರಮಹಾರಾಜ ಅವರು ವಹಿಸಿದ್ದರು. ಬಾಗಲಕೋಟೆಯ ಇಂಡಿಯ ಸಾಮಾಜಿಕ ಕಾರ್ಯಕರ್ತ ಸ್ವತಂತ್ರ ಸಿಂಧೇ ಅವರು ಸಂತ ಸೇವಾಲಾಲ್‌ರವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ತಾ.ಪಂ ಅಧ್ಯಕ್ಷ ಬಾಲಚಂದ್ರ, ಜಿ.ಪಂ ಸದಸ್ಯರಾದ ಗವಿಸಿದ್ದಪ್ಪ ಕರಡಿ, ರಾಮಣ್ಣ ಚೌಡ್ಕಿ, ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ರಾಮಣ್ಣ ಹದ್ದಿನ, ಮುತ್ತುರಾಜ ಕುಷ್ಟಗಿ, ಗಣ್ಯರಾದ ಸುರೇಶ ಭೂಮರಡ್ಡಿ, ಪಿ. ಲಕ್ಷ್ಮಣ, ಭರತ ನಾಯಕ, ಲಕ್ಷ್ಮಣ ನಾಯಕ ಸೇರಿದಂತೆ ಸಮಾಜದ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಸಂತ ಸೇವಾಲಾಲ್‌ರವರ ಭಾವಚಿತ್ರದೊಂದಿಗೆ ಮೆರವಣಿಗೆಯು ಸಾಹಿತ್ಯ ಭವನದಿಂದ ಪ್ರಾರಂಭಗೊಂಡು, ಜವಾಹರ ರಸ್ತೆ ಮಾರ್ಗವಾಗಿ ಗಡಿಯಾರ ಕಂಬದ ಮೂಲಕ ಬಹದ್ದೂರಬಂಡಿ ಗ್ರಾಮದವರೆಗೆ ಅದ್ದೂರಿಯಾಗಿ ಜರುಗಿತು.

Please follow and like us:
error
error: Content is protected !!