ಜನಪರ, ಜನಸ್ನೇಹಿ ಆಡಳಿತ ನೀಡುವುದು ತಮ್ಮ ಸಂಕಲ್ಪ: ಬಿ.ಸಿ.ಪಾಟೀಲ್

ಕೊಪ್ಪಳ: ಜನಪರ, ಜನಸ್ನೇಹಿ ಆಡಳಿತ ನೀಡಬೇಕಂಬ ಸಂಕಲ್ಪ ತಮ್ಮದಾಗಿದ್ದು, ತಿಂಗಳಿಗೆ ಎಷ್ಟು ಸಾಧ್ಯವೋ ಅಷ್ಟು ಪ್ರಗತಿಪರಿಶೀಲನಾ‌ ಸಭೆಗಳನ್ನು ನಡೆಸಿ ಜಿಲ್ಲೆಯ ಆಡಳಿತಕ್ಕೆ ಚುರುಕು ಮುಟ್ಟಿಸಲಾಗುವುದು ಎಂದು ಕೃಷಿ ಸಚಿವರೂ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿಗಳಾಗಿರುವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅಕ್ರಮ ಗಣಿಗಾರಿಕೆಯಾಗಲೀ ಏನೇ ಆಗಲೀ ಯಾವುದೇ ಅಕ್ರಮವನ್ನು ಸಹಿಸಲು ಸಾಧ್ಯವಿಲ್ಲ ಅಕ್ರಮ ಅಕ್ಕಿ ಸಂಗ್ರಹಣೆ ಅಕ್ರಮ ಮಾರಾಟ ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಬೇಕೆಂದು ಆಹಾರ ಇಲಾಖಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ.ಕೊಪ್ಪಳ ಜಿಲ್ಲೆಯಿಂದ ಗದಗಿಗೆ ಕೆಲವು ದಿನಗಳ ಹಿಂದೆ ಅಕ್ರಮ ಅಕ್ಕಿ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಬಗ್ಗೆ ತಮ್ಮ ಗಮನಕ್ಕೂ ಬಂದಿದ್ದು, ಈ ಬಗ್ಗೆ ಕಠಿಣ ಕ್ರಮ ಜರುಗಿಸಲು ಕ್ರಮಕೈಗೊಳ್ಳಲಾಗಿದೆ. ಮದ್ಯದಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿದ ಬೆಲೆಯಲ್ಲಿ ಮದ್ಯ ಮಾರಾಟ ಮಾಡಬೇಕು. ಮದ್ಯದಂಗಡಿಗಳಲ್ಲಿ ಯಾವುದ್ಯಾವುದಕ್ಕೆ ಎಷ್ಟು ಬೆಲೆ ಎಂಬ ದರಪಟ್ಟಿ ತೂಗು ಹಾಕಬೇಕು. ಅಕ್ರಮ ಅನಧಿಕೃತ ಮದ್ಯ ಮಾರಾಟ ಕಂಡುಬಂದಲ್ಲಿ ಕಠಿಣ ಕ್ರಮಕೈಗೊಳ್ಳುವಂತೆ ಅಬಕಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕಡಿಮೆ ಮರಳು ಇರುವ ಹಳ್ಳ, ಹೊಳೆಗಳಲ್ಲಿನ‌ ಮರಳನ್ನು ರೈತರು ತಮ್ಮ ಕೃಷಿ ಕೆಲಸಗಳಿಗೆ ಬಡವರು ಮನೆಕಟ್ಟಿಕೊಳ್ಳಲು ಒಯ್ದರೆ ಅಂತವರಿಗೆ ಅಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಪರಿಶೀಲಿಸಲಾಗುವುದು.ಗಣಿಗಾರಿಕೆ ಇಲಾಖೆಯಿಂದ ನಿರ್ಬಂಧಿಸಿದ ಪ್ರದೇಶಗಳಲ್ಲಿ ಅಕ್ರಮ ಮರಳುಗಾರಿಕೆ ಮಾಡಿದಲ್ಲಿ ಅಂತವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಮುಖ್ಯಮಂತ್ರಿಗಳು ಭಾನುವಾರ ಸಂಪೂರ್ಣ ಲಾಕ್ಡೌನ್ ಘೋಷಿಸಿರುವುದು ಒಳ್ಳೆಯ ವಿಚಾರ. ಈಗಾಗಲೇ ಜನರಲ್ಲಿ ಕೊರೊನಾದಿಂದಾಗಿ ಶಿಸ್ತಿನ ಜೀವನ ಆರಂಭವಾಗಿದೆ. ಸಾಮಾಜಿಕ ಅಂತರ, ವ್ಯಾಯಾಮ,‌ ಆಹಾರ ಪದ್ಧತಿಯಲ್ಲಿ ಬದಲಾವಣೆ, ಶುಚಿತ್ವ ,ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಜನರು ಹೆಚ್ಚುಗಮನ ನೀಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ರೈತಪರ ಪ್ಯಾಕೇಜ್ ಘೋಷಿಸಿ ಕಷ್ಟಕಾಲದಲ್ಲಿ ಮುಖ್ಯಮಂತ್ರಿಗಳು ರೈತರ ಕೈಹಿಡಿದಿದ್ದಾರೆ.ನಮ‌್ಮ ಸರ್ಕಾರ ಎಂದಿಗೂ ರೈತರ ಪರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊಪ್ಪಳಕ್ಕೆ ಕೊರೊನಾ ಸೋಂಕು ಹೊರರಾಜ್ಯದಿಂದ ಪಸರಿಸಿದೆ. ಹೊರರಾಜ್ಯದ ಮೂವರು ಬರದೇ ಹೋಗಿದ್ದರೆ ಜಿಲ್ಲೆ ಹಸಿರುವಲಯವಾಗಿಯೇ ಇರುತ್ತಿತ್ತು. ಕೋವಿಡ್‌ಗಾಗಿ ಪ್ರತ್ಯೇಕ ಆಸ್ಪತ್ರೆ, ವಾರ್ಡ್ ನಿರ್ಮಾಣ ಮಾಡಿರುವುದರಿಂದ ಸಾಮಾನ್ಯ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ಕೊಡಲು ಅನುಕೂಲವಾಗುತ್ತಿದೆ ಎಂದರು.

Please follow and like us:
error