You are here
Home > Koppal News > ಜಂತುಹುಳು ನಿವಾರಣೆಗಾಗಿ 3. 72 ಲಕ್ಷ ಮಕ್ಕಳಿಗೆ ಮಾತ್ರೆ ವಿತರಣೆ : ವೆಂಕಟ್ ರಾಜಾ

ಜಂತುಹುಳು ನಿವಾರಣೆಗಾಗಿ 3. 72 ಲಕ್ಷ ಮಕ್ಕಳಿಗೆ ಮಾತ್ರೆ ವಿತರಣೆ : ವೆಂಕಟ್ ರಾಜಾ

: ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆಗೆ ಜಂತುಹುಳುವಿನ ಕಾಟವೇ ಪ್ರಮುಖ ಕಾರಣವಾಗಿದ್ದು, ಇದರ ನಿವಾರಣೆಗಾಗಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಡಿ ಜಿಲ್ಲೆಯ 01 ರಿಂದ 19 ವರ್ಷದೊಳಗಿನ 3. 72 ಲಕ್ಷ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ ಸೇವನೆ ಮಾಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಹೇಳಿದರು.
ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಆಯೋಜನೆ ಕುರಿತು ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಹಸಿವಾಗದಿರುವುದು, ಹೊಟ್ಟೆನೋವು, ರಕ್ತಹೀನತೆ, ಪದೇ ಪದೇ ವಾಂತಿಬೇಧಿ ಮುಂತಾದ ಸಮಸ್ಯೆಗಳಿಗೆ ಜಂತುಹುಳುವಿನ ಕಾಟ ಪ್ರಮುಖ ಕಾರಣವಾಗಿದೆ. ಮಕ್ಕಳಲ್ಲಿ ಜಂತುಹುಳು ಬಾಧೆಗೆ ಅನೈರ್ಮಲ್ಯ ಮತ್ತು ಬಯಲು ಶೌಚವೇ ಬಹುಮುಖ್ಯ ಕಾರಣವಾಗಿದೆ. ಬರಿಗಾಲಲ್ಲಿ ಮಲವನ್ನು ತುಳಿದುಕೊಂಡು ನಡೆದಾಡುವ ಮಕ್ಕಳಿಗೆ ಜಂತುಹುಳುವಿನ ಬಾಧೆ ಕಾಡುತ್ತದೆ. ಹೀಗಾಗಿ ಬಯಲು ಬಹಿರ್ದೆಸೆಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವ ಅಗತ್ಯವಿದೆ. ಮಕ್ಕಳಲ್ಲಿನ ರಕ್ತಹೀನತೆ ನಿವಾರಣೆ ನಿಟ್ಟಿನಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಫೆ. 12 ರಂದು ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯ 01 ರಿಂದ 19 ವರ್ಷದೊಳಗಿನ ಎಲ್ಲರಿಗೂ ಅಲ್ಬೆಂಡಾಜೋಲ್ ಮಾತ್ರೆ ಸೇವನೆ ಮಾಡಿಸಲಾಗುವುದು. ಈ ಮಾತ್ರೆಯು ಅತ್ಯಂತ ಸುರಕ್ಷಿತವಾಗಿದ್ದು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಮಾತ್ರೆಯನ್ನು ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಅಂಗನವಾಡಿಗಳು, ಹಾಸ್ಟೆಲ್‍ಗಳಲ್ಲಿನ 01 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಆಯಾ ಶಾಲೆ, ಕಾಲೇಜಿನಲ್ಲಿಯೇ ಮಾತ್ರೆ ಸೇವನೆ ಮಾಡಿಸಬೇಕು. ಯಾವುದೇ ಕಾರಣಕ್ಕೂ ಮಾತ್ರೆಯನ್ನು ಮಕ್ಕಳಿಗೆ ಮನೆಗೆ ಒಯ್ಯಲು ಅವಕಾಶ ಕೊಡಬಾರದು. ಈ ಹಿಂದೆ ಸರ್ಕಾರಿ ಶಾಲೆಯ ಮಕ್ಕಳಿಗೆ ಮಾತ್ರ ಮಾತ್ರೆ ವಿತರಣೆ ಮಾಡಲಾಗುತ್ತಿತ್ತು. ಈ ಬಾರಿ ಸರ್ಕಾರಿ ಮತ್ತು ಖಾಸಗಿ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಶಾಲೆಗಳಲ್ಲಿ ಶಿಕ್ಷಕರು ಜಂತುಹುಳುಗಳ ಸಮಸ್ಯೆ ಹಾಗೂ ಇದಕ್ಕೆ ಕಾರಣ ಹಾಗೂ ಮಾತ್ರೆ ಸೇವೆನೆಯಿಂದ ಆಗುವ ಅನುಕೂಲದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಕಾರ್ಯಕ್ರಮ ಯಶಸ್ವಿಗೊಳಿಸಲು ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಿಗೆ ಅಗತ್ಯ ಸೂಚನೆ ನೀಡಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಅಲಕಾನಂದ ಮಳಗಿ ಅವರು, ಬಯಲು ಮಲವಿಸರ್ಜನೆ, ಕೈ ತೊಳೆಯದೆ ಆಹಾರ ಸೇವನೆ, ತರಕಾರಿಗಳನ್ನು ಸರಿಯಾಗಿ ತೊಳೆಯದೆ ಹಸಿಯಾಗಿ ತಿನ್ನುವುದು, ಅನೈರ್ಮಲ್ಯ ಸ್ಥಳದಲ್ಲಿ ಬರಿಗಾಲಲ್ಲಿ ಓಡಾಡುವುದರಿಂದ ಜಂತುಹುಳುವಿನ ಸಮಸ್ಯೆ ಕಾಡಲಿದೆ. ಜಂತುಹುಳುವಿನಿಂದ ಮಕ್ಕಳಲ್ಲಿ ರಕ್ತಹೀನತೆ, ಕಲಿಕಾ ಸಾಮಥ್ರ್ಯ ಕುಂಠಿತ, ಅಪೌಷ್ಠಿಕತೆ, ಚಟುವಟಿಕೆ ಇಲ್ಲದಿರುವುದು ಮುಂತಾದ ತೊಂದರೆ ಕಂಡುಬರುತ್ತದೆ. ಜಂತುಹುಳು ಸಮಸ್ಯೆ ನಿವಾರಣೆಗೆ ಜಿಲ್ಲೆಯಲ್ಲಿ ಫೆ. 12 ರಂದು ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ ಸೇವನೆ ಮಾಡಿಸಲಾಗುವುದು. ಜಿಲ್ಲೆಯಲ್ಲಿ 1850 ಅಂಗನವಾಡಿಗಳ 139636 ಮಕ್ಕಳು, 1552 ಶಾಲೆಗಳ 221069 ಮಕ್ಕಳು ಹಾಗೂ 82 ಕಾಲೇಜುಗಳ 12000 ಮಕ್ಕಳು ಸೇರಿದಂತೆ ಒಟ್ಟು 372705 ಮಕ್ಕಳಿಗೆ ಅಂದು ಅಲ್ಬೆಂಡಾಜೋಲ್ ಮಾತ್ರೆ ಸೇವನೆ ಮಾಡಿಸಲಾಗುವುದು. ಮಾತ್ರೆಯನ್ನು ಮಕ್ಕಳು ಹಲ್ಲಿನಿಂದ ಕಡಿದು, ಪುಡಿ ಮಾಡಿ ಸೇವಿಸುವಂತೆ ತಿಳಿಸಬೇಕು. ಮಾತ್ರೆಯು ಅತ್ಯಂತ ಸುರಕ್ಷಿತವಾಗಿದ್ದು, ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಆರೋಗ್ಯ ಇಲಾಖೆ ಯೋಜನೆ ಅನುಷ್ಠಾನಾಧಿಕಾರಿಗಳು, ನಾಲ್ಕು ತಾಲೂಕುಗಳ ವೈದ್ಯಾಧಿಕಾರಿಗಳು, ರೋಟರಿ, ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Top