ಚೂರಿ ಇರಿತಕ್ಕೆ ರಾಜಕೀಯ ಮಿಕ್ಸ್ : ಗಂಗಾವತಿ ಉದ್ವಿಗ್ನ

ಹುಡುಗಿ ಜೊತೆ ಅನುಚಿತ ವರ್ತನೆ…ಕೊಪ್ಪಳದ ಗಂಗಾವತಿಯಲ್ಲಿ ಮತ್ತೆ ಭುಗಿಲೆದ್ದ ಉದ್ವಿಗ್ನ ಪರಿಸ್ಥಿತಿ..ಎರಡು ಗುಂಪುಗಳ ನಡುವೆ ಗಲಾಟೆ ಇಬ್ಬರಿಗೆ ಚಾಕು ಇರಿತ… ಹೊಟ್ಟೆಗೆ ಚಾಕು ಇರಿದು ಪರಾರಿಯಾದ ಆರೋಪಿಗಳು… ಪ್ರಕರಣವನ್ನು ರಾಜಕೀಕರಣಗೊಳಿಸಲು ಮುಂದಾದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ….ಸತ್ಯ ಹೊರಹಾಕಿದ ಕೊಪ್ಪಳ ಎಸ್ಪಿ

ಚುನಾವಣೆಯ ನಂತರ ಗಂಗಾವತಿಯಲ್ಲಿ ಕ್ಷುಲ್ಲಕ ಕಾರಣಕ್ಕೂ ಗಲಾಟೆಗಳಾಗುತ್ತಿವೆ. ಅದರಲ್ಲೂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನಂತರ ಮತ್ತಷ್ಟು ಪ್ರಕರಣಗಳು ನಡೆದಿವೆ. ನಿನ್ನೆ ವಿಜಯೋತ್ಸವ ಮಾಡುತ್ತಿದ್ದ ಕಾಂಗ್ರೆಸ್ –ಜೆಡಿಎಸ್ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ಮಾಡಿದರೆ ಇಂದು ಹುಡುಗಿಯನ್ನು ಚುಡಾಯಿಸಿದ ಪ್ರಕರಣದಲ್ಲಿ ಗುಂಪುಗಳ ನಡುವೆ ಗಲಾಟೆಯಾಗಿ ಚೂರಿಯಿಂದ ಇರಿದ ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆಯಲ್ಲಿಯೇ ಕೋಮು ಸೂಕ್ಷ್ಮ ಪ್ರದೇಶ ಗಂಗಾವತಿ. ಚುನಾವಣೆಯ ಪೂರ್ವದಿಂದಲೂ ಬಹಳಷ್ಟು ಜಿದ್ದಾಜಿದ್ದಿಯಿಂದಾಗಿ ಗಮನಸೆಳೆದಿತ್ತು.ಇಲ್ಲಿ ಕಾಂಗ್ರೆಸ್ ಶಾಸಕ ಇಕ್ಬಾಲ್ ಅನ್ಸಾರಿ ಹಾಗೂ ಬಿಜೆಪಿಯ ಪರಣ್ಣ ಮುನವಳ್ಳಿ ನಡುವೆ ನೇರಾನೇರ ಹಣಾಹಣಿ ನಡೆದಿತ್ತು. ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ ಬಿಜೆಪಿ ಯ ಪರಣ್ಣ ಮುನವಳ್ಳಿ ಗೆಲುವು ಸಾಧಿಸುವಲ್ಲಿ ಸಫಲರಾಗಿದ್ಧಾರೆ. ನಂತರ ನಡೆದ ಬಿಜೆಪಿಯ ವಿಜಯೋತ್ಸವ ಮೆರವಣಿಗೆಯಲ್ಲಿ ಅಟೋ ಡ್ರೈವರ್ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದರು. ಅಲ್ಲಿಂದಲೇ ಗಂಗಾವತಿಯ ಸ್ಥಿತಿ ಪ್ರಕ್ಷುಬ್ದ ಎನ್ನುವಂತಾಗಿತ್ತು. ಇಕ್ಬಾಲ್ ಅನ್ಸಾರಿ ಬೆಂಬಲಿಗರು ಮತ್ತು ಪರಣ್ಣಮುನವಳ್ಳಿ ಬೆಂಬಲಿಗರ ನಡುವೆ ಗಲಾಟೆಯಾಗು ವಂತಾಗಿತ್ತು. ನಿನ್ನೆ ಕಾಂಗ್ರೆಸ್ ಜೆಡಿಎಸ್ ವಿಜಯೋತ್ಸವ ಸಂದರ್ಭದಲ್ಲಿ ಇಬ್ಬರ ಮೇಲೆ ಮಾರಣಾಂತಿಕವಾಗಿ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಢಿದ್ದರು. ರಾತ್ರಿಯಿಡಿ ಗಲಾಟೆ ನಡೆದು 15ಜನರನ್ನು ಬಂಧಿಸಲಾಗಿತ್ತು. ಇಂದು ಸಂಜೆ ಗಂಗಾವತಿಯ 24ನೇ ವಾರ್ಡಿನ ಗೌಳಿರ ಓಣಿಯಲ್ಲಿ ಹುಡುಗಿಯನ್ನು ಚುಡಾಯಿಸಿದರು ಎನ್ನುವ ಕಾರಣಕ್ಕೆ ಗಲಾಟೆ ಆರಂಭವಾಗಿತ್ತು. ಈ ಪ್ರಕರಣದಲ್ಲಿ ಹುಡುಗಿಯ ಮನೆಯವರಿಗೂ ಹಾಗೂ ಚುಡಾಯಿಸಿದ ಮಹ್ಮದ್, ರಾಜಹುಸೇನ್, ಅಹ್ಮದ್ ನಡುವೆ ಮಾರಾಮಾರಿಯಾಗಿದೆ. ಈ ಸಂದರ್ಭದಲ್ಲಿ ಸಂಜೀವ ಗೌಳಿ (38), ಬಾಳಪ್ಪ (30) ಎನ್ನುವವರಿಗೆ ಚುಡಾಯಿಸಿದವರು ಚಾಕುವಿನಿಂದ ಇರಿದು ಪರಾರಿಯಾಗಿದ್ಧಾರೆ. ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಗಳ ಸ್ಥಿತಿ ಗಂಭೀರವಾಗಿದ್ದರಿಂದ ಕೊಪ್ಪಳದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಷ್ಟೇ ಆಗಿದ್ದರೆ ಪ್ರಕರಣ ಮುಗಿದು ಹೋಗುತ್ತಿತ್ತು. ಆದರೆ ಇದಕ್ಕೆ ರಾಜಕೀಯ ಬಣ್ಣ ಬಂದಿದ್ದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಆಗಮನದಿಂದ

ಶಾಸಕ ಪರಣ್ಣ ಮುನವಳ್ಳಿ ನೇರವಾಗಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಯ ಮೇಲೆ ಆರೋಪ ಮಾಡಿ ಇದಕ್ಕೆಲ್ಲಾ ಅವರೇ ಕಾರಣ ಅವರಿಗೆ ಈ ಭಾಗದಲ್ಲಿ ಓಟುಗಳು ಬಾರದ ಹಿನ್ನೆಲೆಯಲ್ಲಿ ಗಲಾಟೆ ಮಾಡಿಸಿದ್ದಾರೆ ಎಂದು ಆರೋಪ ಮಾಡಿದರು. ಆದರೆ ಕೂಲಂಕುಷವಾಗಿ ಪ್ರಕರಣದ ತನಿಖೆಗೆ ಇಳಿದ ಪೋಲಿಸರು ಗಲಾಟೆಗೆ ನಿಜವಾದ ಕಾರಣವೇನು ಹಿನ್ನೆಲೆಯೇನು ಎನ್ನುವುದನ್ನು ಹೇಳಿದ್ದಾರೆ.

ಈ ನಡುವೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಕಿಮ್ಸ್ ಗೆ ಭೇಟಿ ನೀಡಿ ಗಾಯಗೊಂಡವರ ಪರಿಸ್ಥಿತಿಯನ್ನು ವಿಚಾರಿಸಿದರು. ಮೊದಲೇ ಕೋಮು ಸೂಕ್ಷ್ಮ ಗಂಗಾವತಿಯಲ್ಲಿ ದಿನಕ್ಕೊಂದು ಇಂತಹ ಘಟನೆಗಳು ನಡೆಯುತ್ತಿದ್ದು ಜನರು ಭೀತಿಯಲ್ಲಿ ಬದುಕುವಂತಾಗಿದೆ. ಎಲ್ಲ ಘಟನೆಗಳಿಗೂ ರಾಜಕೀಯ ಬಣ್ಣ ಬಳಿಯುತ್ತಿರುವುದು, ಕೋಮು ಬಣ್ಣ ಬಳಿಯುತ್ತಿರುವುದರಿಂದಾಗಿ ನಿಜಯಾವುದು ಎನ್ನುವುದ ತಿಳಿಯದೇ ಜನಸಾಮಾನ್ಯರು ಭಯದಲ್ಲಿದ್ದಾರೆ. ಎಲ್ಲಿ ಮತ್ತೊಮ್ಮೆ 2016ರ ಕೋಮುಗಲಭೆಗಳು ಮರುಕಳಿಸುತ್ತವೆಯೋ ಎನ್ನುವ ಆತಂಕದಲ್ಲಿದ್ದಾರೆ. ರಾಜಕಾರಣಿಗಳು, ಪೋಲಿಸರು ಮತ್ತು ಸಾರ್ವಜನಿಕರು ಸೇರಿಕೊಂಡು ನಗರದ ಶಾಂತಿ ಕಾಪಾಡಬೇಕಿದೆ.

Please follow and like us:
error