ಚುನಾವಣೆ : ಕಾರ್ಮಿಕರಿಗೆ ಆ. ೩೧ ರಂದು ವೇತನ ಸಹಿತ ರಜೆ ಘೋಷಣೆ

ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಅಂಗವಾಗಿ ಎಲ್ಲಾ ಕಾರ್ಮಿಕರಿಗೆ ಆ. ೩೧ ರಂದು ವೇತನ ಸಹಿತ ರಜೆಯನ್ನು ಘೋಷಿಸಲಾಗಿದೆ ಎಂದು ಕೊಪ್ಪಳ ಕಾರ್ಮಿಕ ಇಲಾಖೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗವು, ಮತದಾನ ನಡೆಯಲಿರುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೋಂದಾಯಿತರಾದ ಅರ್ಹ ಮತದಾರರಾಗಿರುವ ಎಲ್ಲಾ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ೧೯೬೩ ರ ಕರ್ನಾಟಕ ಔದ್ಯೋಗಿಕ ಸಂಸ್ಥೆಗಳ (ರಾಷ್ಟ್ರೀಯ ಹಾಗೂ ಹಬ್ಬದ ರಜಾದಿನಗಳು) ಕಾಯ್ದೆಯ ಕಲಂ ೩-ಎ ಪ್ರಕಾರ ಮತ ಚಲಾಯಿಸಲು ಅವಕಾಶ ಮಾಡಿ ಕೊಡಬೇಕಾಗುತ್ತದೆ. ಆದ್ದರಿಂದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಅರ್ಹರಿರುವ ಎಲ್ಲಾ ಕಾರ್ಮಿಕ ಮತದಾರರಿಗೆ ಆ. ೩೧ ರಂದು ವೇತನ ಸಹಿತ ರಜೆ ನೀಡಿ, ಎಲ್ಲಾ ಅರ್ಹ ಕಾರ್ಮಿಕರು ಸಂವಿಧಾನಾತ್ಮಕ/ ಶಾಸನಾತ್ಮಕ ಹಕ್ಕಾದ ಮತವನ್ನು ಕಾನೂನಿನನ್ವಯ ಚಲಾಯಿಸಲು ಅನುವು ಮಾಡಿಕೊಡಲು ಸೂಚಿಸಲಾಗಿದೆ.
ಸಂವಿಧಾನಾತ್ಮಕ ಹಕ್ಕಾದ ಮತವನ್ನು ಚಲಾಯಿಸುವುದಕ್ಕಾಗಿ ಮತದಾನ ನಡೆಯುವ ಕ್ಷೇತ್ರಗಳಾದ ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ಯಲಬುರ್ಗಾ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಎಲ್ಲಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆ. ೩೧ ರಂದು ಮತ ಚಲಾವಣೆಗಾಗಿ ವೇತನ ಸಹಿತ ರಜೆಯನ್ನು ನೀಡಬೇಕು. ಈ ಕುರಿತು ಕೊಪ್ಪಳ ಜಿಲ್ಲೆಯ ಎಲ್ಲಾ ವ್ಯಾಪಾರಸ್ಥರು/ ವಾಣಿಜ್ಯೋದ್ಯಮಿಗಳಿಗೆ ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ಕಾರ್ಮಿಕ ಅಧಿಕಾರಿಗಳು  ತಿಳಿಸಿದ್ದಾರೆ.

Please follow and like us:

Related posts