ಚುನಾವಣಾ ಆಯೋಗದ ಸೂಚನೆಗಳನ್ನು ಪಾಲಿಸಲು ಮುದ್ರಣ ಸಂಸ್ಥೆಗಳಿಗೆ ತಾಕೀತು

ಕೊಪ್ಪಳ ಮಾ. : ಚುನಾವಣೆ ಸಂದರ್ಭದಲ್ಲಿ ಮುದ್ರಣಕಾರರು, ಫ್ಲೆಕ್ಸ್ ಬ್ಯಾನರ್ ತಯಾರಿಸುವವರು ಹಾಗೂ ರಾಜಕೀಯ ಪಕ್ಷಗಳು ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು   ಸೂಚನೆ ನೀಡಿದರು.

ಮುಂಬರುವ ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ   ಮುದ್ರಣಕಾರರು ಹಾಗೂ ಫ್ಲೆಕ್ಸ್ ಬ್ಯಾನರ್ಸ್ ತಯಾರಕರು ಅಲ್ಲದೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಗುರುವಾರದಂದು ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮುದ್ರಣಕಾರರು : ಬರುವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಮುದ್ರಣಕಾರರು ನಿಯಮಾನುಸಾರ ತಮ್ಮ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸಬೇಕು.  ಯಾವುದೇ ಜಾತಿ, ಧರ್ಮ ನಿಂದಿಸುವಂತಹ ಹಾಗೂ ಪ್ರಚೋದನಕಾರಿ ವಿಷಯವನ್ನೊಳಗೊಂಡ ಕರಪತ್ರವನ್ನು ಮುದ್ರಿಸಬಾರದು.  ಅಲ್ಲದೆ ವಯಕ್ತಿಕ ನಿಂದನೆ ಮತ್ತು ಕೋಮು ಸಾಮರಸ್ಯ ಕದಡುವಂತಹ ವಿಷಯಗಳನ್ನು ಪ್ರಕಟಿಸಬಾರದು.  ಚುನಾವಣಾ ಪ್ರಚಾರಕ್ಕೆ ಕರಪತ್ರಗಳನ್ನು ಮುದ್ರಿಸುವಾಗ ಸರಿಯಾದ ಚಿಹ್ನೆಗಳನ್ನು ಉಪಯೋಗಿಸಬೇಕು.   ಅಲ್ಲದೆ ಕರಪತ್ರದ ಕೆಳಭಾಗದಲ್ಲಿ ಮುದ್ರಣಾಲಯದ ಹೆಸರು, ಮೊಬೈಲ್ ಸಂಖ್ಯೆ, ಮುದ್ರಣ ಮಾಡಿದ ಕರಪತ್ರಗಳ ನಿಖರ ಸಂಖ್ಯೆಯನ್ನು ಅದರಲ್ಲಿ ನಮೂದಿಸಬೇಕು.  ಅಭ್ಯರ್ಥಿ ಅಥವಾ ನಿಯಮಾನುಸಾರ ನೇಮಕಗೊಂಡ ಚುನಾವಣಾ ಏಜೆಂಟ್‍ಗಳು ನೀಡಿದ ಕರಪತ್ರ ಅಥವಾ ಫ್ಲೆಕ್ಸ್ ಬ್ಯಾನರ್, ಫ್ಲೆಕ್ಸ್ ಸಾಮಗ್ರಿಯನ್ನು ಮಾತ್ರ ಮುದ್ರಣ/ತಯಾರು ಮಾಡಬೇಕು.   ಮುದ್ರಣಕ್ಕೆ ಕಾರ್ಯಾದೇಶ ಪಡೆಯುವ ಸಂದರ್ಭದಲ್ಲಿ ಅವರ ಹೆಸರು, ಮೊಬೈಲ್ ಸಂಖ್ಯೆ, ಇಬ್ಬರು ಸಾಕ್ಷಿಗಳ ಸಹಿಯೊಂದಿಗೆ ಇರುವ ಕಾರ್ಯಾದೇಶ ಪಡೆದುಕೊಂಡು, ನಂತರ ಮುದ್ರಣ ಕಾರ್ಯ ಮುಗಿದ ಬಳಿಕ, ಅಪೆಂಡಿಕ್ಸ್-ಎ ಮತ್ತು ಅಪೆಂಡಿಕ್ಸ್-ಬಿ ನಲ್ಲಿ ಸೂಕ್ತ ಮಾಹಿತಿಯೊಂದಿಗೆ ಘೋಷಣಾ ಪತ್ರವನ್ನು ಆಯಾ ವಿಧಾನಸಭಾ ಕ್ಷೇತ್ರದ ರಿಟರ್ನಿಂಗ್ ಆಫೀಸರ್‍ಗೆ ಸಲ್ಲಿಸಬೇಕು.  ಇದು ಮುದ್ರಣಕಾರರ ಕರ್ತವ್ಯವಾಗಿದೆ.  ತಮ್ಮ ಸಂಸ್ಥೆಯ ಅಧಿಕೃತ ರಸೀದಿ, ಬಿಲ್ ಮಾತ್ರ ಬಳಸಬೇಕು.  ಲೆಕ್ಕ ಪತ್ರಗಳಿಗೆ ಸಂಬಂಧಿಸಿದಂತೆ ಬಿಲ್‍ಗಳು ಹಾಗೂ ರಸೀದಿಗಳನ್ನು ಸಮರ್ಪಕವಾಗಿ ಇರಿಸಿಕೊಳ್ಳಬೇಕು.  ಚುನಾವಣಾ ವೀಕ್ಷಕರು ಯಾವುದೇ ಸಂದರ್ಭದಲ್ಲಿ ಯಾವುದೇ ಮುದ್ರಣ ಅಥವಾ ಫ್ಲೆಕ್ಸ್ ಮುದ್ರಣ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದ್ದು, ನಿಯಮಗಳನ್ನು ಉಲ್ಲಂಘಿಸುವ ಮುದ್ರಣಕಾರರಿಗೆ 06 ತಿಂಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿರುತ್ತದೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮುದ್ರಣಕಾರರ ಗೈರಿಗೆ ಅಸಮಾಧಾನ :
************* ಚುನಾವಣೆ ವಿಷಯ ಸಂಬಂಧ ಚುನಾವಣಾ ಆಯೋಗದ ನಿರ್ದೇಶನದಂತೆ ಸೂಚನೆಗಳನ್ನು ನೀಡಲು, ಜಿಲ್ಲೆಯ ಎಲ್ಲ ಮುದ್ರಣಕಾರರಿಗೆ ಹಾಗೂ ಫ್ಲೆಕ್ಸ್ ಬ್ಯಾನರ್ ತಯಾರಕರ ಸಭೆಯನ್ನು ಕರೆಯಲಾಗಿತ್ತು.  ಆದರೆ ಕೆಲವೇ ಕೆಲವು ಮುದ್ರಣಕಾರರು ಮಾತ್ರ ಸಭೆಗೆ ಹಾಜರಾಗಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಚುನಾವಣೆ ಘೋಷಣೆ ನಂತರ ಇನ್ನೊಮ್ಮೆ ಸಭೆ ಕರೆಯಲಾಗುವುದು.  ಸಭೆಗೆ ಗೈರು ಹಾಜರಾಗುವ ಮುದ್ರಣ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಅವರ ಪರವಾನಿಗೆ ರದ್ದುಪಡಿಸುವುದಾಗಿ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ :
***************ಎಲ್ಲ ವೃತ್ತ ಪತ್ರಿಕೆಗಳು, ಮುದ್ರಣಾ ಮಾಧ್ಯಮಗಳು, ಟಿ.ವಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳು, ಕೇಬಲ್ ನೆಟ್ ವರ್ಕ, ಮೊಬೈಲ್ ನೆಟ್ ವರ್ಕ ಮತ್ತು ಎಸ್‍ಎಂಎಸ್ ಸಂದೇಶ ಇತ್ಯಾದಿಗಳಂತಹ ಸಮೂಹ ಮಾಧ್ಯಮದ ವಿಧಾನಗಳನ್ನು ನೋಡಿಕೊಳ್ಳುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯನ್ನು (ಎಂಸಿಎಂಸಿ) ರಚಿಸಲಾಗಿದೆ. ಅಭ್ಯರ್ಥಿಗಳು ಹಾಗೂ ಪಕ್ಷಗಳು ಪ್ರಕಟಿಸಲು ಅಥವಾ ಪ್ರಚುರಪಡಿಸಲು ಬಯಸುವ ಜಾಹಿರಾತುಗಳು, ಸಾರ್ವಜನಿಕ ಪ್ರಕಟಣೆಗಳು, ಸಂದೇಶಗಳನ್ನು ಪ್ರಕಟಿಸುವ ಮುನ್ನ ಜಿಲ್ಲಾ ಮಟ್ಟದ ಈ ಸಮಿತಿಯಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ.  ಅಲ್ಲದೆ ಪತ್ರಿಕೆ ಅಥವಾ ಟಿ.ವಿ. ಮತ್ತು ಕೇಬಲ್ ನೆಟ್‍ವರ್ಕ್‍ಗಳ ಜಾಹೀರಾತುಗಳಿಗೆ ನಿಯಮಾನುಸಾರ ದರ ನಿಗದಿಪಡಿಸಿ, ಸಂಬಂಧಪಟ್ಟ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರ್ಪಡೆಗೊಳಿಸಲಾಗುವುದು. ಜಾಹಿರಾತುಗಳು, ಸಾರ್ವಜನಿಕ ಪ್ರಕಟಣೆಗಳು, ಸಂದೇಶಗಳು, ಚರ್ಚೆಗಳು ಹಾಗೂ ಸಂದರ್ಶನದ ದಾಖಲೆಗಳನ್ನು ಸಮಿತಿಯು ನಿರ್ವಹಿಸಲಿದೆ.  ಇದರ ಜೊತೆಗೆ ಕಾಸಿಗಾಗಿ ಸುದ್ದಿಯ ಬಗ್ಗೆಯೂ ಸಮಿತಿಯು ನಿಗಾ ವಹಿಸಲಿದ್ದು, ಇಂತಹ ಪ್ರಕರಣ ಕಂಡುಬಂದಲ್ಲಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.  ಪ್ರತಿ ಅಭ್ಯರ್ಥಿಯ ಬಗ್ಗೆಯೂ ಸಮಿತಿಯು ದೈನಂದಿನ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಅವರು ಸಭೆಯಲ್ಲಿ ವಿವರಣೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಡಿವೈಎಸ್‍ಪಿ ಸಂದಿಗವಾಡ, ಕೈಗಾರಿಕೆ ಇಲಾಖೆ ಜಂಟಿನಿರ್ದೇಶಕ ಪ್ರಶಾಂತ್, ಕೊಪ್ಪಳ ತಹಸಿಲ್ದಾರ್ ಗುರುಬಸವರಾಜ, ಗಂಗಾವತಿ ತಹಸಿಲ್ದಾರ ಚಂದ್ರಕಾಂತ, ಸೇರಿದಂತೆ ಜಿಲ್ಲೆಯ ಮುದ್ರಣ ಸಂಸ್ಥೆಗಳ ಮಾಲೀಕರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Please follow and like us:
error

Related posts