ಗ್ರಾಹಕರಿಗೆ ಹೊರೆಯಾದ ವಿದ್ಯುತ್ ಬಿಲ್: ಸಾರ್ವಜನಿಕರ ಆಕ್ರೋಶ

ಕುಷ್ಟಗಿ: ಕಳೆದ ಮಾರ್ಚ ಅಂತ್ಯದಲ್ಲಿ ಇಡೀ ದೇಶ ಲಾಕ್ ಡೌನ್ ಗೆ ಒಳಗಾಗಿ ಇದೀಗ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ ಹೊತ್ತಿನಲ್ಲೆ ವಿದ್ಯುತ್ ಕಂಪನಿ ಜೆಸ್ಕಾಂ ಗ್ರಾಹಕರಿಗೆ ಅರಗಿಸಿಕೊಳ್ಳಲಾಗದ ಹೆಚ್ಚುವರಿ ಬಿಲ್ ನೀಡಿದೆ ಎಂದು ಸಾರ್ವಜನಿಕರು ಜೆಸ್ಕಾಂ ಇಲಾಖೆ ಮುಂದೆ ಹಿಡಿಶಾಪ ಹಾಕುತ್ತಿದ್ದಾರೆ.
ಕಚೇರಿಯಲ್ಲಿ ಸಿಬ್ಬಂದಿಗಳು ಬರುವುದಕ್ಕೆ ಮುನ್ನವೇ ಬೆಳಗ್ಗೆಯೇ ದೌಡಾಯಿಸಿದ ಗ್ರಾಹಕರು ಜಮಾವಣೆಗೊಂಡು ಸಿಬ್ಬಂದಿಗಳಿಗೆ ಬಿಲ್ ಹೇಗೆ ಮತ್ತು ಯಾವ ಆಧಾರದಲ್ಲಿ ಸೃಷ್ಟಿಯಾಗಿದೆ ಎಂದು ಪ್ರಶ್ನಿಸತೊಡಗಿದ್ದು ಕಂಡು ಬಂದಿತು. ಮೊದಲೆ ಲಾಕ್ ಡೌನ್ ನಿಂದ ಕೆಲಸವಿಲ್ಲದೆ ದುಡಿಮೆ ಇಲ್ಲದೇ ಕಂಗೆಟ್ಟ ಜನರಿಗೆ ವಿದ್ಯುತ್ ಬಿಲ್ ಬಿಸಿತುಪ್ಪವಾಗಿ ಪರಿಣಮಿಸಿದೆ.
ಕಳೆದ ಮಾರ್ಚ್​, ಏಪ್ರಿಲ್ ತಿಂಗಳಲ್ಲಿ ಅಂದಾಜು ಲೆಕ್ಕದಲ್ಲಿ ಸರಾಸರಿ ಬಿಲ್ ಸೃಷ್ಟಿಸಿ ಜೆಸ್ಕಾಂ ಗ್ರಾಹಕರಿಗೆ ಮೇ ತಿಂಗಳು ಎರಡು ಪಟ್ಟು ಪಾವತಿಸುವಂತೆ ಜನರಿಗೆ ಬಿಲ್​ ನೀಡಿದ್ದ ಇಲಾಖೆಗೆ ಗ್ರಾಹಕರ ಆಕ್ರೋಶ ಕಸಿವಿಸಿಗೊಳಿಸಿದ್ದು ಕಂಡು ಬಂದಿತು.
ಗ್ರಾಹಕ ಶರಣಪ್ಪ ವಡಿಗೇರಿ ಅವರು, ಕಳೆದ ತಿಂಗಳು 550 ಬಿಲ್ ಪಾವತಿಸಿದ್ದರು. ಇದೀಗ 808 ರೂ. ಬಿಲ್​ ಬಂದಿದೆ. ಹಾಗೆ ಇನ್ನೋರ್ವ ಗ್ರಾಹಕ ಮಾನಪ್ಪ ಕಮ್ಮಾರ ಕಳೆದ ತಿಂಗಳು ಎರಡು ತಿಂಗಳ ಬಾಕಿ ೧೦೫೦ ಪಾವತಿಸಿದ್ದರೂ ಮೇ ತಿಂಗಳು ೧೬೧೦ ಬಂದಿದ್ದು ಇಷ್ಟೊಂದು ವಿದ್ಯುತ್ ಬಳಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದೇ ರೀತಿ ಗ್ರಾಹಕರು ವಿದ್ಯುತ್ ಬಿಲ್ ನೋಡಿದ ಗ್ರಾಹಕರು ತೀವ್ರ ಆಕ್ರೋಶಕ್ಕೆ ಒಳಗಾಗಿದ್ದಾರೆ. ಜೆಸ್ಕಾಂ ಎಇಇ ಮಂಜುನಾಥ ಅವರ ಪ್ರಕಾರ, ಬಿಲ್ ಹೆಚ್ಚುವರಿ ವ್ಯತ್ಯಾಸವಾಗಿಲ್ಲ, ಯೂನಿಟ್ ಆಧರಿಸಿಯೇ ಬಿಲ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೇನಾದರೂ ಯುನಿಟ್ ಬಳಕೆ ಮತ್ತು ಬಿಲ್ ವ್ಯಾತ್ಯಾಸವಿದ್ದರೆ ಕಚೇರಿಗೆ ಬಂದು ಸರಿಪಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.

Please follow and like us:
error