ಗ್ರಾಮೀಣ ಕುಲಕಸುಬುದಾರರಿಗೆ ವಿಶೇಷ ಕೌಶಲ್ಯಾಭಿವೃದ್ಧಿ ತರಬೇತಿ : ಅರ್ಜಿ ಆಹ್ವಾನ

ಜಿಲ್ಲಾ ಕೈಗಾರಿಕ ಕೇಂದ್ರ ಕೊಪ್ಪಳ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ, ಮತ್ತು ಡಿ. ದೇವರಾಜ ಅರಸು ಹಿಂದುಳಿದವರ ಅಭಿವೃದ್ಧಿ ನಿಗಮ, ಬೆಂಗಳೂರು ಇವರ ಸಹಯೋಗದಲ್ಲಿ ಗ್ರಾಮೀಣ ಕುಲಕಸುಬುದಾರರಿಗೆ ವಿಶೇಷ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಗ್ರಾಮೀಣ ಮೂಲ ಕಸುಬುದಾರರಿಗೆ ಆಧುನಿಕ ತಂತ್ರಜ್ಞಾನದ ಮಾಹಿತಿ ಮತ್ತು ಆಧುನಿಕ ಉಪಕರಣಗಳ ಪರಿಚಯದೊಡನೆ ತಮ್ಮ ಕುಲಕಸುಬನ್ನು ಮುಂದುವರಿಸುವ ನಿಟ್ಟಿನಲ್ಲಿ ಸ್ವಯಂ-ಉದ್ಯೋಗ ಅಥವಾ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮೀಣಾ ಕುಲಕಸುಬುದಾರಿಗೆ ವಿಶೇಷ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ರಾಜ್ಯದಲ್ಲಿ ಪ್ರಪ್ರಥವಾಗಿ ಪ್ರಾಯೋಗಿಕವಾಗಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವು ಪೂರ್ಣಾವಧಿಯದಾಗಿದ್ದು, ಸ್ವಯಂ ಉದ್ಯೋಗ ಸ್ಥಾಪಿಸುವ/ ಮುಂದುವರೆಸುವ ಗ್ರಾಮೀಣ ಕುಲಕಸುಬುದಾರರಿಗೆ ಒಂದು ಸುವರ್ಣ ಅವಕಾಶವಾಗಿದೆ.
ಅಲೆಮಾರಿ/ ಅರೆ ಅಲೆಮಾರಿ ಸಮುದಾಯದ ೨೦ ಅಭ್ಯರ್ಥಿಗಳಿಗೆ ಕೌದಿ ಹೊಲಿಯುವ ತರಬೇತಿ. ಉಪ್ಪಾರ, ಮಡಿವಾಳ, ಸವಿತಾ, ಕುಂಬಾರ ಮತ್ತು ತಿಗಳ ಸಮುದಾಯದ ೨೦ ಅಭ್ಯರ್ಥಿಗಳಿಗೆ ಗಾರೆ/ ಇಟ್ಟಿಗೆ ಕೆಲಸ (ಮೆನ್ಟರಿ) ಹಾಗೂ ೨೦ ಅಭ್ಯರ್ಥಿಗಳಿಗೆ ಕಾರ್ಪೆಂಟರ್ ತರಬೇತಿ. ಸವಿತಾ ಸಮಾಜದ ೨೬ ಅಭ್ಯರ್ಥಿಗಳಿಗೆ ಆಧುನಿಕ ಕ್ಷೌರಿಕ (ಸ್ಪಾ) ವೃತ್ತಿಯಲ್ಲಿ ತರಬೇತಿ. ಮಡಿವಾಳ ಸಮಾಜದ ೨೦ ಅಭ್ಯರ್ಥಿಗಳಿಗೆ ಆಧುನಿಕ ಲ್ಯಾಂಡ್ರಿ/ ಇಸ್ತ್ರಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ತರಬೇತಿಯು ವಸತಿ ಸಹಿತವಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಭ್ಯರ್ಥಿಗಳು ೧೮ ರಿಂದ ೫೫ ವರ್ಷ ವಯೋಮಿತಿಯಲ್ಲಿರಬೇಕು. ತಮ್ಮ ಕುಲಕಸುಬಿನಲ್ಲಿ ಕನಿಷ್ಠ ೬ ತಿಂಗಳ ಅನುಭವ ಹೊಂದಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ. ೪೦,೦೦೦/- ಮೀರಿರಬಾರದು. ತಾಲೂಕ ಮಟ್ಟದಲ್ಲಿ ಈ ವಿಶೇಷ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ನಿಗದಿತ ನಮೂನೆ ಅರ್ಜಿ, ಜಾತಿ ಆದಾಯ ಪ್ರಮಾಣ ಪತ್ರ, ಹುಟ್ಟಿದ ದಿನಾಂಕ, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್, ಆಧಾರ ಕಾರ್ಡ, ಇತ್ಯಾಧಿ ದಾಖಲೆಗಳೊಂದಿಗೆ ಆಗಸ್ಟ್. ೧೪ ರೊಳಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ಅಥವಾ ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕೊಪ್ಪಳ, ಇವರಿಗೆ ಸಲ್ಲಿಸಬೇಕು.

Please follow and like us:
error